ಜೂನ್ 23ರ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಅವ ಓಡಾಟ ಸುಗಮಗೊಳಿಸಲು ಗುರುವಾರ ರಾತ್ರಿ 10 ಗಂಟೆಯಿಂದ ಶುಕ್ರವಾರ ರಾತ್ರಿವರೆಗೆ ಚಾಮುಂಡಿ ಬೆಟ್ಟಕ್ಕೆ ಎಲ್ಲ ರೀತಿಯ ವಾಹನ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸರು ತಿಳಿಸಿದ್ದಾರೆ.
ಪ್ರವೇಶ ಮತ್ತು ನಿರ್ಗಮನ ಪಾಸ್‌ಗಳನ್ನು ಪಡೆದ ವಿವಿಐಪಿಗಳು, ನಿಯೋಜಿತ ಸರ್ಕಾರಿ ಸಿಬ್ಬಂದಿ ಮತ್ತು ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
“ಜಿಲ್ಲಾಡಳಿತವು ಚಾಮುಂಡಿ ಬೆಟ್ಟದ ತಪ್ಪಲಿನಿಂದ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ 3 ರಿಂದ ರಾತ್ರಿ 10 ರವರೆಗೆ ಉಚಿತ ಬಸ್ ಸೇವೆ ಒದಗಿಸಿದೆ. ಲಲಿತ ಮಹಲ್ ಮೈದಾನದ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮ ವಾಹನಗಳನ್ನು ನಿಗದಿತ ಜಾಗದಲ್ಲಿ ನಿಲ್ಲಿಸಿ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬೆಟ್ಟಕ್ಕೆ ತೆರಳಬೇಕು ಮತ್ತು ಹಿಂದಿರುಗಬೇಕು” ಎಂದು ಪೊಲೀಸರು ತಿಳಿಸಿದ್ದಾರೆ.
“ಭಕ್ತರ ನೂಕುನುಗ್ಗಲು ಇರುವುದರಿಂದ ಆಷಾಢ ಶುಕ್ರವಾರದಂದು ಬೆಟ್ಟದ ದೇಗುಲಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಡೆದುಕೊಂಡು ಬೆಟ್ಟ ಹತ್ತಲು ಬಯಸುವ ಭಕ್ತರು ಪೊಲೀಸರು ಸೂಚಿಸಿದ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಭಕ್ತರಿಗೆ ಅನುಕೂಲವಾಗುವಂತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲುಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಸಿಸಿಟಿವಿಗಳನ್ನು ಅಳವಡಿಸಲಾಗಿದೆ” ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.