ವಕ್ಫ್ ತಿದ್ದುಪಡಿ ಕಾಯ್ದೆ 2025 ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ ಮಧ್ಯಂತರ ತೀರ್ಪನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸ್ವಾಗತಿಸಿದೆ.
ಸೆಪ್ಟೆಂಬರ್ 15ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಈ ಪಿಟಿಷನ್ (ನಂ.445)ಗೆ ತಾವು ಅರ್ಜಿದಾರರಾಗಿದ್ದು, ಮೈಸೂರು ಮೂಲದ ಅಡ್ವೊಕೆಟ್ ಮೊಹಮ್ಮದ್ ಫೈಝಾನ್ ಮಜೀದ್ ಹಾಗೂ ದೆಹಲಿ ಮೂಲದ ಅಡ್ವೊಕೆಟ್‌ಗಳಾದ ಮೊಹಮ್ಮದ್ ಅಶಾಬ್ ಮತ್ತು ಅಸ್ಲಂ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ಅರ್ಜಿ ಸಿದ್ಧಪಡಿಸಿದ್ದಾಗಿ ತಿಳಿಸಿದ್ದಾರೆ.
ಅವರು, ವಖ್ಫ್ ಆಸ್ತಿಗಳನ್ನು ಕಬಳಿಸುವುದನ್ನು ತಡೆಯುವ ಹಾಗೂ ಐದು ವರ್ಷ ಇಸ್ಲಾಂ ಧರ್ಮವನ್ನು ಅನುಸರಿಸಿರುವುದರ ಶರತ್ತುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಸ್ವಾಗತಿಸಿದರೂ, ಹಲವು ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.
ಲಿಮಿಟೇಶನ್ ಆ್ಯಕ್ಟ್ ಅನ್ನು ವಖ್ಫ್‌ಗೆ ಅನ್ವಯಿಸುವುದು, ಬಳಕೆ ಇಲ್ಲದಿದ್ದರೆ ವಕ್ಫ್ ರದ್ದು ಮಾಡುವ ಪ್ರಾವಧಾನ, ನಿಗದಿತ ಪ್ರದೇಶಗಳಲ್ಲಿ (Scheduled Areas) ವಕ್ಫ್ ರಚನೆಗೆ ನಿರ್ಬಂಧ, ಇವುಗಳೆಲ್ಲವೂ ವಕ್ಫ್ ಅಸ್ತಿತ್ವಕ್ಕೆ ಪೆಟ್ಟು ತರುತ್ತವೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, ವಖ್ಫ್ ಮಂಡಳಿ ಹಾಗೂ ರಾಷ್ಟ್ರೀಯ ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮೇತರರನ್ನು ಸೇರಿಸುವುದನ್ನು ನ್ಯಾಯಾಲಯ ತಡೆಗಟ್ಟದಿರುವುದನ್ನು ನಿರಾಶಾಜನಕವೆಂದು ಅಬ್ದುಲ್ ಮಜೀದ್ ಹೇಳಿದ್ದಾರೆ. ವಕ್ಫ್ ಪ್ರತಿನಿಧಿತ್ವ ಸಂಪೂರ್ಣವಾಗಿ ಮುಸ್ಲಿಂ ಸಮುದಾಯದಲ್ಲಿಯೇ ಉಳಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮೈಸೂರು | ‘ಸಮ್ಮಿಲನ-2025’ ರ ಸಂವಾದ
“ವಕ್ಫ್ ಒಂದು ಸಾಮೂಹಿಕ ದಾನಧರ್ಮವಾಗಿದ್ದು, ಯಾವುದೇ ಧರ್ಮಕ್ಕೆ ಸೇರಿದವರಾದರೂ ಅಲ್ಲಾಹನ ಹೆಸರಿನಲ್ಲಿ ವಕ್ಫ್ ಮಾಡಬಹುದಾಗಿದೆ. ಆದರೆ ಕಾಯ್ದೆಯ ಕೆಲ ಅಂಶಗಳು ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಹಾಳುಮಾಡುವ ಉದ್ದೇಶ ಹೊಂದಿವೆ” ಎಂದು ಆರೋಪಿಸಿದ್ದಾರೆ.
ಸಮುದಾಯದ ಧಾರ್ಮಿಕ ಹಕ್ಕುಗಳ ರಕ್ಷಣೆಗೆ ಕಾನೂನು, ಸಾಮಾಜಿಕ ಹಾಗೂ ಪ್ರಜಾಪ್ರಭುತ್ವ ಹೋರಾಟವನ್ನು ಮುಂದುವರಿಸುವುದಾಗಿ ಎಸ್‌ಡಿಪಿಐ ಪ್ರಕಟಣೆಯಲ್ಲಿ ತಿಳಿಸಿದೆ.