ಕೊಡಗಿನ ವಿರಾಜಪೇಟೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ‘ಇವಿ ಪವರ್ ಪ್ಲಸ್’ ಎಲೆಕ್ಟ್ರಿಕ್ ಬಸ್‌ವೊಂದು ಮೈಸೂರು ಹೊತ್ತಿ ಉರಿದಿದೆ. ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ 18 ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಮೈಸೂರು-ಹುಣಸೂರು ರಸ್ತೆಯ ಬಿಳಿಕೆರೆ ಸಮೀಪದ ರಂಗಾಯನಕೊಪ್ಪಲು ಬಳಿ ಘಟನೆ ನಡೆದಿದೆ. ಬೆಂಗಳೂರು ಕೇಂದ್ರ ಘಟಕಕ್ಕೆ ಸೇರಿದ ಬಸ್‌ನಲ್ಲಿ ಚಲಿಸುತ್ತಿದ್ದ ವೇಳೆಯೇ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬ್ರೇಕ್ ಜಾಮ್ ಆಗಿದೆ ಎನ್ನಲಾಗಿದೆ.
ಬ್ರೇಕ್ ಜಾಮ್‌ನಿಂದ ಚಕ್ರಗಳ ನಡುವೆ ಘರ್ಷಣೆ ಉಂಟಾಗಿ ಹಿಂಭಾಗದ ಚಕ್ರದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಚಾಲಕ ತಕ್ಷಣ ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ.
ಬಸ್‌ನಲ್ಲಿ ಕೆಲವು ಪ್ರಯಾಣಿಕರು ನಿದ್ರೆಯಲ್ಲಿದ್ದರೆ, ಇನ್ನು ಕೆಲವರು ವಿಶ್ರಾಂತಿ ಪಡೆಯುತ್ತಿದ್ದರು. ಬೆಂಕಿ ವೇಗವಾಗಿ ಹರಡುವ ಮುನ್ನ ಚಾಲಕ ಮತ್ತು ನಿರ್ವಾಹಕರು ಎಲ್ಲ 18 ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಬಳಿಕ, ಬಸ್‌ನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್‌ಗಳ ನೆರವಿನಿಂದ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೂ, ಎಲೆಕ್ಟ್ರಿಕ್ ಬಸ್‌ನ ಬ್ಯಾಟರಿ ಮತ್ತು ಒಳಭಾಗದಲ್ಲಿದ್ದ ವಸ್ತುಗಳಿಂದಾಗಿ ಬೆಂಕಿ ವೇಗವಾಗಿ ವ್ಯಾಪಿಸಿದೆ. ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿದೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಿಂದ ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರ್ಯಾಯ ಬಸ್ ವ್ಯವಸ್ಥೆ ಮಾಡಿ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಕೆಎಸ್‌ಆರ್‌ಟಿಸಿ ಗ್ರಾಮೀಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ಸೇರಿದಂತೆ ಬಿಳಿಕೆರೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಟಿ.ಎಂ. ಪುನೀತ್, ಉಪನಿರೀಕ್ಷಕ ನವೀನ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




