ಕನ್ನಡ ಚಿತ್ರರಂಗದ ಮೇರು ನಟ,ಹಾಸ್ಯ ಕಲಾವಿದ, ನಿರ್ಮಾಪಕ, ಹಾಡುಗಾರ, ರಂಗಭೂಮಿ ಕಲಾವಿದ ಮುಸುರಿ ಕೃಷ್ಣಮೂರ್ತಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದವರು.
‘ಕನೆಕ್ಷನ್ ಕಾಳಪ್ಪ’ ಎಂದೇ ಹೆಸರಾಗಿದ್ದ ಮುಸುರಿ ಕೃಷ್ಣಮೂರ್ತಿ ನಮ್ಮೂರಿನ ಸಾಧಕರಲ್ಲಿ ಇವರ ಹೆಸರು ಅಜರಾಮರ.1930 ಮಾರ್ಚ್ 10ರಂದು ಬೆಟ್ಟದಪುರದ ವಿಶ್ವೇಶ್ವರಯ್ಯ ಹಾಗೂ ಸುಬ್ಬಮ್ಮ ದಂಪತಿಗಳ ಸುಪುತ್ರರಾಗಿ ಜಮೀನ್ದಾರ್ ವಂಶದಲ್ಲಿ ಹುಟ್ಟಿದವರು.
ಹುಟ್ಟು ಕಲಾವಿದರಾದ ಕೃಷ್ಣಮೂರ್ತಿ ಹಾಡು, ನಟನೆಯ ಗೀಳು ಕಲಾದೇವಿಯ ಆರಾಧಕರಾಗುವಂತೆ ಮಾಡಿತ್ತು. ಅವತ್ತಿಗೆ ಪ್ರೌಢಶಾಲಾ ವ್ಯಾಸಂಗ ಮಾಡುತ್ತಿರುವಾಗ ನಮ್ಮದೇ ತಾಲೂಕಿನ ಮತ್ತೋರ್ವ ಸಾಧಕರಾದ ಕಣಗಾಲ್ ಪ್ರಭಾಕರ ಶಾಸ್ತ್ರಿಯವರಿಂದ ಪ್ರಭಾವಿತರಾಗಿ, ಚಾಮುಂಡೇಶ್ವರಿ ನಾಟಕ ಸಂಸ್ಥೆಯಲ್ಲಿ ಅವಕಾಶ ಪಡೆದರು.

ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರ ಜತೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದೆ ಗಾಯನ ಪ್ರದರ್ಶನ ನಡೆದು, ಪ್ರಭಾವಿತರಾದ ಮಹಾರಾಜರು ‘ಮುಸುರಿ ಕೃಷ್ಣಮೂರ್ತಿ’ ಎಂದು ಕರೆದಿದ್ದರು. ಅದರಂತೆಯೆ ಅಂದಿನಿಂದ ಅವರ ಹೆಸರಿನೊಟ್ಟಿಗೆ ಮುಸುರಿ ಸೇರಿಕೊಂಡಿತ್ತು. ಬಳಿಕ ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿ, ಹೀರಣ್ಣಯ್ಯ ನಾಟಕ ಮಂಡಳಿ, ಕನ್ನಡದ ಮೊದಲ ನಾಯಕ ನಟ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗಳಲ್ಲಿ ಕಲಾವಿದರಾಗಿದ್ದ ಮುಸುರಿ ಕೃಷ್ಣಮೂರ್ತಿ ಕಲಾವಿದರಾಗಿ,
ಸಹಾಯಕರಾಗಿ ಕೆಲಸ ಮಾಡಿದ್ದರು.
1962ರಲ್ಲಿ ಸ್ವತಃ ‘ಅಂಬಾ ಪ್ರಸಾದ ನಾಟಕ ಮಂಡಳಿ’ ಆರಂಭಿಸಿ ತಮ್ಮದೇ ರಂಗತಂಡ ಕಟ್ಟಿ 1966ರವರೆಗೆ ನಡೆಸಿದರು. ನಿರ್ವಹಣೆ ಕಷ್ಟಕರವಾದಾಗ ನಾಟಕ ಮಂಡಳಿ ಮುಚ್ಚುವ ಸ್ಥಿತಿಗೆ ತಲುಪಿತು.

ಪಿಟೀಲು ಚೌಡಯ್ಯನವರ ‘ವಾಣಿ’ ಚಿತ್ರದ ಮೂಲಕ 1943ರಲ್ಲಿ ಪಂಡರಿಬಾಯಿ ಅವರ ಜೊತೆ ಅಭಿನಯಿಸುವುದರ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈ ಚಿತ್ರದ ನಾಯಕಿ ಪಂಡರೀಬಾಯಿ ಅವರಿಗೂ ಅದು ಚೊಚ್ಚಲ ಚಿತ್ರವಾಗಿತ್ತು.
ಜೀವಿತಾವಧಿಯಲ್ಲಿ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಪಿರಿಯಾಪಟ್ಟಣ ತಾಲೂಕಿನ ಪುಟ್ಟಣ್ಣ ಕಣಗಾಲ್ 1978ರಲ್ಲಿ ನಿರ್ದೇಶಿಸಿದ ‘ಪಡುವಾರ ಹಳ್ಳಿ ಪಾಂಡವರು’. ಅದರಲ್ಲಿನ ಕನೆಕ್ಸನ್ ಕಾಳಪ್ಪನ ಪಾತ್ರವು ಅಂದಿನ ಸಿನಿಮಾ ರಂಗದ ಕಾಲಘಟ್ಟದಲ್ಲಿ ಮುಸುರಿ ಕೃಷ್ಣಮೂರ್ತಿಯವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
80ರ ದಶಕದಲ್ಲಿ ಖಳನಟರಾಗಿ, ಹಾಸ್ಯ ಕಲಾವಿದರಾಗಿ ಪುಟ್ಟಣ್ಣ ಕಣಗಾಲರ ಧರ್ಮಸೆರೆ, ರಂಗನಾಯಕಿ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಗುರು ಶಿಷ್ಯರು, ವರನಟ ಡಾ ರಾಜ್ ಕುಮಾರ್ ಅವರೊಟ್ಟಿಗೆ ಹಾಲು ಜೇನು, ಕವಿರತ್ನ ಕಾಳಿದಾಸ ಚಿತ್ರಗಳು ಅವರ ಅಭಿನಯದ ಯಶಸ್ವಿ ಚಿತ್ರಗಳಾಗಿವೆ.
250ಕ್ಕೂ ಅಧಿಕ ಸಿನಿಮಾಗಳಲ್ಲಿ ಮುಸುರಿ ಕೃಷ್ಣಮೂರ್ತಿ ನಟಿಸಿ ಮೋಡಿ ಮಾಡಿದ್ದರು. ತಮ್ಮ ವಿಭಿನ್ನ ಮೌಕಿಕ ಹಾಗೂ ಆಂಗಿಕ ಅಭಿನಯದಿಂದ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಹಾಸ್ಯ ಪಾತ್ರಗಳಲ್ಲಿ ತಮ್ಮ ಸಹಜ ನಟನೆಯಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು.
ಸರಿಸುಮಾರು 250 ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಮುಸುರಿ ಕೃಷ್ಣಮೂರ್ತಿ ಅವರಿಗೆ ಸಲ್ಲುವಂತದ್ದು. 1981ರಲ್ಲಿ ಯಶಸ್ವಿನಿ ಎಂಟರ್ ಪ್ರೈಸಸ್ ತೆರೆದು ಶ್ರೀನಾಥ್ ಹಾಗೂ ಜಯಮಾಲಾ ಅಭಿನಯದ ‘ನಂಬರ್ ಐದು ಎಕ್ಕ’ ಚಲನಚಿತ್ರ ನಿರ್ಮಿಸಿ, ನಿರ್ಮಾಪಕರಾದರು.

1985ರಲ್ಲಿ ತೆರೆಕಂಡ ವೀರಾಧಿವೀರ ಚಲನಚಿತ್ರ ಮುಸುರಿ ಕೃಷ್ಣಮೂರ್ತಿ ಅವರು ಅಭಿನಯಿಸಿದ ಕೊನೆಯ ಚಿತ್ರವಾಗಿತ್ತು. ಅನಾರೋಗ್ಯಕ್ಕೆ ಈಡಾಗಿ ತಮ್ಮ 55ನೇಯ ವಯಸ್ಸಿನಲ್ಲಿ ಅಂದರೆ 1985 ರಲ್ಲಿ ನಿಧನರಾದರು.
ಪಿರಿಯಾಪಟ್ಟಣದ ಮಣ್ಣಿನಲ್ಲಿ ಜನಿಸಿ ಕಲಾಸೇವೆ ಮಾಡಿದ ಸಾಧಕ ಮುಸುರಿ ಕೃಷ್ಣಮೂರ್ತಿ, ನಮ್ಮೂರಿನ ಹಾಸ್ಯ ಕಲಾವಿದ ಬೆಳ್ಳಿ ತೆರೆಯಲ್ಲಿ ಖಳ ನಟನಾಗಿ, ಪೋಷಕ ನಟನಾಗಿ ಮಿಂಚಿ ಮರೆಯಾದವರು. ಆದರೆ, ನಮ್ಮ ದುರ್ದೈವ, ಚಿತ್ರರಂಗದ ದುರ್ದೈವ, ಸರ್ಕಾರಗಳ ದೌರ್ಬಲ್ಯ, ತಾಲೂಕು ಆಡಳಿತದ ಅಸಡ್ಡೆತನ ಸಾಧಕರ ಹೆಸರು ಚಿರಸ್ಥಾಯಿ ಆಗುವಂತ ಯಾವುದೇ ಸ್ಮಾರಕ ಮಾಡದೆ ಇರುವುದು ಶೋಚನೀಯ.
ಇನ್ನು ಮುಸುರಿ ಕೃಷ್ಣಮೂರ್ತಿ ಅಗಲಿಕೆಯ ಬಳಿಕ ‘ನಟ ಚಾಣಕ್ಯ ಮುಸುರಿ’ ಎನ್ನುವ ಸಿನಿಮಾ ಮೂಡಿ ಬಂದಿತ್ತು. ಮುಸುರಿ ಅವರು ನಟಿಸಿದ ಸಿನಿಮಾಗಳ ದೃಶ್ಯಗಳನ್ನು ಬಳಸಿಕೊಂಡು ಈ ಚಿತ್ರ ನಿರ್ಮಾಣವಾಗಿತ್ತು. ಸಿನಿಮಾ ಕೂಡ ಉತ್ತಮ ರೀತಿಯ ಪ್ರದರ್ಶನ ಕಂಡಿತ್ತು.

ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ಹುಟ್ಟಿದರು ಅನ್ನುವುದು ಬಿಟ್ಟರೆ, ಅವರ ಹೆಸರನ್ನು ಉಳಿಸುವ, ತಿಳಿಸುವ ಕೆಲಸ ಚಿತ್ರರಂಗ ಮಾಡಲೇ ಇಲ್ಲ. ಸಾಧಕರನ್ನು ಮರೆತಿದ್ದು ಇತಿಹಾಸ. ಅದನ್ನ ಮುಂದಿನ ಪೀಳಿಗೆಗೆ ಹೇಳುವುದು ಅಭ್ಯಾಸವಾಗಬೇಕು. ನಮ್ಮ ನಡುವೆ ನಮ್ಮ ಹಿರಿಕರಾಗಿ ಹುಟ್ಟಿ, ಅವರು ಮೆಟ್ಟಿದ ಮಣ್ಣನ್ನೇ ಮೆಟ್ಟಿದ ನಾವು ಅವರ ಸಾಧನೆಯನ್ನ ಹೇಳಬೇಕು, ನೆನೆಯಬೇಕು. ಆ ಮೂಲಕ ಮೇರು ಹಾಸ್ಯ ನಟರಿಗೆ ನಾವು ಸಲ್ಲಿಸುವ ಗೌರವವಾಗಿದೆ.
