"ಮನೆಯಲ್ಲಿ ಕೂಸು ಹುಟ್ಟಿದಾಗ, ಅಂದ್ರೆ ಹೆಣ್ಣೇ ಆಗಲಿ, ಗಂಡೇ ಆಗಲಿ ಯಾವುದೇ ಕೂಸು ಹುಟ್ಟಿದರೂ ಕೂಡ ಎಷ್ಟು ಸಂಭ್ರಮ ಪಡ್ತೇವೋ ಅದೇ ರೀತಿ ನಾವು ಬಿತ್ತನೆ ಮಾಡುವಾಗಲೂ ಮಂದಹಾಸದಿಂದ ಇರ್ತೇವೆ"
ಮುಂಗಾರು ಮಧ್ಯದಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಬಹುತೇಕ ಭಾಗಗಳಲ್ಲಿ ಕಟಾವಿಗೆ ಬಂದ ಉದ್ದು, ಹೆಸರು, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಹಲವು ರೀತಿಯ ಬೆಳೆಗಳು ಜಲಾವೃತವಾಗಿದ್ದು, ಬೆಳೆಹಾನಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜಮೀನಿಗೆ ಹಾಕಿರುವ ಬಂಡವಾಳವೂ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಬೆಳೆ ಹಾಳಾಗಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದೇವೆ, ಹೋರಾಟ ಮಾಡಿದ್ದೇವೆ. ಆದರೂ ಕೂಡ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ, ಸಂಬಂಧಪಟ್ಟ ಇಲಾಖೆಗಳಾಲಿ ನಮ್ಮ ನೆರವಿಗೆ ನಿಲ್ಲುವಂತೆ ಕಂಡುಬರುತ್ತಿಲ್ಲ. ರೈತರ ಸಂಕಷ್ಟಗಳಿಗೆ ಮಿಡಿಯುತ್ತಿಲ್ಲ ಎಂಬುದು ಸಂತ್ರಸ್ತ ನೋವಿನ ನುಡಿಗಳಾಗಿವೆ.
ಬಾಗಲಕೋಟೆ ರೈತ ಮುತ್ತಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗುಲ್ಬರ್ಗಾ, ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಒಣಬೇಸಾಯ ಮಾಡುವ ಜಮೀನುಗಳಿವೆ. ಉದ್ದು, ಹೆಸರು ಸೋಯಾನೀನ್ ಸೇರಿದಂತೆ ಇತರೆ ಮುಂಗಾರು ಬೆಳೆಗಳು ಕೊಯ್ಲಿಗೆ ಬಂದಾಗ ಅತಿವೃಷ್ಟಿಯಿಂದ ಹಾನಿಯಾಗಿವೆ. ಜಾಸ್ತಿ ಮಳೆಯಾಗಿ ಬೆಳೆಗಳೆಲ್ಲ ನೀರುಪಾಲಾಗಿವೆ” ಎಂದು ಬೇಸರ ವ್ಯಕ್ತಪಡಿಸಿದರು.

“ಪ್ರತಿ ಎಕರೆಗೆ ಕನಿಷ್ಟ 20 ಸಾವಿರವನ್ನಾದರೂ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದ್ದೆವು. ಸರ್ಕಾರ ಅಧಿವೇಶನ ನಡೆಸಿದಾಗ ಕೆಲವು ಶಾಸಕರು ಬೆಳೆಪರಿಹಾರದ ಬಗ್ಗೆ ಧ್ವನಿ ಎತ್ತಿದ್ದರು. ಆದರೆ ಸರ್ಕಾರ ಅದಕ್ಕೆ ಸಮಂಜಸವಾದ ಯಾವುದೇ ಉತ್ತರವನ್ನೂ ಕೊಡಲಿಲ್ಲ, ಪರಿಹಾರ ಕೊಡುವಂತಹ ನಿರ್ಣಯವನ್ನೂ ಕೈಗೊಳ್ಳಲಿಲ್ಲ. ಈಗ ರೈತರು ಪ್ರತಿ ಎಕರೆಗೆ ₹25,000ದಿಂದ ₹30,000 ಮಾಡಿದ್ದಾರೆ. ಬಿತ್ತನೆಬೀಜ, ಗೊಬ್ಬರ, ಕೂಲಿ ಎಲ್ಲವೂ ದುಬಾರಿಯಾಗಿದೆ. ರೈತ ಬರೀ ಖರ್ಚು ಮಾಡುವುದಷ್ಟೇ ಆಗಿದೆಯೇ ಹೊರತು ಯಾವುದೇ ರೀತಿಯ ಆದಾಯ ಕಾಣಲು ಸಾಧ್ಯವಾಗುತ್ತಿಲ್ಲ. ಈ ಮಳೆಯಿಂದ ರೈತರ ಬದುಕು ಸಂಪೂರ್ಣವಾಗಿ ಅತಂತ್ರವಾಗಿದೆ. ರೈತರು ಸಾಲಗಾರರಾಗಿದ್ದಾರೆ” ಎಂದು ಹೇಳಿದರು.
ರೈತ ಬಸಪ್ಪ ಸಂಗಣ್ಣವರ್ ಈ ದಿನ.ಕಾಮ್‌ನೊಂದಿಗೆ, “ಮನೆಯಲ್ಲಿ ಕೂಸು ಹುಟ್ಟಿದಾಗ, ಅಂದ್ರೆ ಹೆಣ್ಣೇ ಆಗಲಿ, ಗಂಡೇ ಆಗಲಿ ಯಾವುದೇ ಕೂಸು ಹುಟ್ಟಿದರೂ ಕೂಡ ಎಷ್ಟು ಸಂಭ್ರಮ ಪಡ್ತೇವೋ ಅದೇ ರೀತಿ ನಾವು ಬಿತ್ತನೆ ಮಾಡುವಾಗಲೂ ಮಂದಹಾಸದಿಂದ ಇರ್ತೇವೆ. ಎಷ್ಟೇ ನಷ್ಟವಾದ್ರೂ ಭೂಮಿತಾಯಿಗೆ ಉಡಿ ತುಂಬುತ್ತೀವಿ(ಬಿತ್ತನೆ ಮಾಡುವುದು). ಮಳೆ, ಗಾಳಿ, ಬಿಸಿಲು, ಹವಾಮಾನದ ಮೇಲಿನ ನಂಬಿಕೆಯಿಂದ ನಾವು ಬಿತ್ತನೆ ಮಾಡ್ತೇವೆ. ಯಾವುದೇ ಸರ್ಕಾರವನ್ನಾಗಲೀ, ಯಾವುದೇ ಮಂತ್ರಿಗಳನ್ನಾಗಲೀ ನಂಬಿ ನಾವು ಬಿತ್ತನೆ ಮಾಡುವುದಿಲ್ಲ. ಪರಿಸರವನ್ನು ನಂಬಿ ಭೂಮಿತಾಯಿಯನ್ನು ನಂಬಿ ಬದುಕುತ್ತಿದ್ದೀವಿ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

“ನಾವು ದೇಶಕ್ಕೇ ಅನ್ನ ಕೊಡ್ತೇವೆ. ಅಧ್ಯಯನದ ಪ್ರಕಾರ, ಒಬ್ಬರು ವಿಜ್ಞಾನಿಯೇ ಹೇಳಿದ್ದಾರೆ, ʼರೈತರು ಇಂದು 95 ಕೋಟಿ ಜನರಿಗೆ 2 ರೂಪಾಯಿಯಂತೆ ಒಂದು ಪ್ಲೇಟ್ ಊಟವನ್ನು ಕೊಡುತ್ತಿದ್ದಾರೆʼ ಅಂತ ಹೇಳಿದ್ರು. ಇದು ಸಮೀಕ್ಷೆಯಿಂದ ತಿಳಿದುಬಂದಿರೋದು. ಹುಟ್ಟಿದ ಎಲ್ಲ ಜೀವಿಗಳಿಗೂ ಅಂತ್ಯ ಎನ್ನುವುದು ಇದೆ. ಆದರೆ ಭೂಮಿತಾಯಿಗೆ ಅಂತ್ಯ ಎಂಬುದು ಇಲ್ಲ. ಪರಿಸರಕ್ಕೆ ಅಂತ್ಯ ಎಂಬುದು ಇಲ್ಲ. ಇಂದಲ್ಲ ನಾಳೆ ಭೂಮಿತಾಯಿ ಕೊಟ್ಟೇ ಕೊಡ್ತಳೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಎಲ್ಲರಿಗೂ ಒಮ್ಮೆ ಸಾವು ಬಂದರೆ, ರೈತರು ಎರಡು ಬಾರಿ ಸಾವಿಗೆ ಈಡಾಗುತ್ತಾರೆ. ಬೆಳೆನಷ್ಟದಿಂದ ಒಮ್ಮೆ ಸತ್ತಂತಾದ್ರೆ, ನಮ್ಮ ಅಂತ್ಯಕಾಲದ್ದು ಇನ್ನೊಂದು ಸಾವು. ಜೀವ ಕೊಟ್ಟಿರುವ ಆ ಭಗವಂತ ಯಾವಾಗ ಕರೆದುಕೊಳ್ತಾನೋ ಗೊತ್ತಿಲ್ಲ. ಆದ್ರೆ ನಾವು ಬೆಳೆನಷ್ಟದಿಂದ ಸತ್ತಂತಾದ್ರೂ ಕೂಡ, ಭೂಮಿತಾಯಿಗಾಗಿ ಮತ್ತೆ ಮತ್ತೆ ಹೊಸ ಹುಟ್ಟು ಪಡೆಯುತ್ತೇವೆ. ಬಿತ್ತನೆ ಮಾಡುತ್ತೇವೆ” ಎಂಬುದು ಬಸಪ್ಪ ಸಂಗಣ್ಣವರ್ ಅವರ ಮನದಾಳದ ಮಾತು.
ಇದನ್ನೂ ಓದಿದ್ದೀರಾ? ಕಾಡುಹಂದಿ, ಕರಡಿಗಳ ಹಾವಳಿಗೆ ಅಪಾರ ಬೆಳೆನಾಶ: ಮುಗಿಲು ಮುಟ್ಟಿದ ರೈತರ ರೋದನೆ, ಕೈಕಟ್ಟಿ ಕುಳಿತ ಅರಣ್ಯ ಇಲಾಖೆ
“ನಾವು ಅಷ್ಟು ಕಷ್ಟಪಟ್ಟು ಪ್ರೀತಿಯಿಂದ ಬೆಳೆ ಬೆಳೆದು, ಎಲ್ಲವನ್ನೂ ಒಪ್ಪ ಮಾಡಿ, ಉಳುಕ ಪಳಕ ಮನೆಗೆ ಇಟ್ಟುಕೊಂಡು, ಚನಾಗಿರುವ ಫಸಲನ್ನು ಮಾರ್ಕೆಟ್‌ಗೆ ತಗೊಂಡು ಹೋದ್ರೆ ಬೆಂಬಲ ಬೆಲೆಯೂ ಇರುವುದಿಲ್ಲ. ಒಮ್ಮೊಮ್ಮೆ ನಮ್ಮ ಮಾಲನ್ನು ಕೇಳುವವರೇ ಇರೋದಿಲ್ಲ. ಬೆಲೆ ನಿಗದಿ ಮಾಡುವುದು ಯಾರ ಕೈಯ್ಯಲ್ಲಿದೆ ಹೇಳಿ. ನಮ್ಮ ಸರ್ಕಾರಗಳೇ ಬೆಲೆ ನಿಗದಿ ಮಾಡಿ ರೈತರಿಗೆ ನೆರವಾಗಬಹುದು. ಆದರೆ ಅದು ಅವರಿಗೆ ಬೇಕಿಲ್ಲ. ನಾವೂ ಕೂಡ ಇಲ್ಲಿತನಕ ಯಾರದೇ ಉಪಕಾರದಲ್ಲಿ ಬದುಕಿಲ್ಲ. ನಮ್ಮ ಹಿರಿಯರ ಕಾಲದಿಂದಲೂ ನಾವು ಭೂಮಿಯನ್ನೇ ನಂಬಿ ಬದುಕುತ್ತಿದ್ದೀವಿ. ಈಗಲೂ ಭೂಮಿತಾಯಿಯನ್ನೇ ನಂಬುತ್ತೇವೆ. ಭೂಮಿತಾಯಿ ತನ್ನ ಮಕ್ಕಳನ್ನು ಕೈ ಬಿಡೋದಿಲ್ಲ, ಎಲ್ಲರನ್ನೂ ಸಾಕುತ್ತಾಳೆ. ಇವತ್ತು ಲುಕ್ಸಾನಾಗಿರಬಹುದು, ಮುಂದಿನ ವರ್ಷ ಅದ್ದೂರಿಯಾಗಿ ಕೊಡ್ತಳೆ. ಆದರೆ ಆಳುವ ಸರ್ಕಾರಗಳು ರೈತರಿಗೆ ಮೋಸ ಮಾಡುತ್ತವೆ. ಸರಿಯಾದ ಬೆಲೆ ನಿಗದಿ ಮಾಡುವುದಿಲ್ಲ, ಫಸಲನ್ನು ಖರೀದಿಸುವುದಿಲ್ಲ. ಆಡಳಿತಗಳು ರೈತರನ್ನು ಕಂಗಾಲು ಮಾಡುತ್ತಾರೆ” ಎಂದು ಆರೋಪಿಸಿದರು.