ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ನೇರ ಭರ್ತಿಗೆ ಸೂಚನೆ ನೀಡಲಾಗಿದೆ. ಎಷ್ಟು ಹುದ್ದೆಗಳು ಖಾಲಿ ಇವೆ ಹಾಗೂ ಎಷ್ಟು ಮಂದಿಗೆ ಬಡ್ತಿ ನೀಡಬೇಕು ಎಂಬ ಅಂಕಿಅಂಶಗಳ ಅನುಪಾಲನಾ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಉಪಸಮಿತಿ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ಹಂಚಿಕೊಂಡರು.
“ಮುಂಬಡ್ತಿ ವಿಚಾರದಲ್ಲಿ ಕೆಲವು ಇಲಾಖೆಗಳಲ್ಲಿ ಗೊಂದಲಗಳಿತ್ತು. ಇದರಿಂದಾಗಿ ನೇಮಕಾತಿಗೆ ಹಿನ್ನಡೆ ಉಂಟಾಗಿದೆ. ಮುಂಬಡ್ತಿಯಲ್ಲಿ ಹಿರಿತನ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶವಿದೆ. ಸೇವಾ ಹಿರಿತನ ಕಾಯ್ದುಕೊಂಡು ಮುಂಬಡ್ತಿಯ ಸರ್ಕಾರಿ ಆದೇಶ ಹೊರಡಿಸಲಾಗುವುದು” ಎಂದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಹುದ್ದೆಗಳ ನೇರ ಭರ್ತಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ. ಕಾನೂನಿನಲ್ಲಿಯೇ ಆ ಅಂಶವಿದೆ. ಅದನ್ನು ಬಳಕೆ ಮಾಡಿ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಹಳಷ್ಟು ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಸಮರ್ಪಕವಾಗಿ ನಡೆಯುತ್ತಿಲ್ಲ ಹಾಗೂ ಅಭಿವೃದ್ಧಿ ಕೆಲಸಗಳಲ್ಲಿ ಪ್ರಗತಿ ಆಗುತ್ತಿಲ್ಲ” ಎಂದು ಹೇಳಿದರು.
B.com m.s.w iti fitter complete my education