ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಬೀದರ ಜಿಲ್ಲಾ ಪೊಲೀಸ್ ಇಲಾಖೆಯು ರಚಿಸಿದ ಮಹಿಳಾ ಪೊಲೀಸ್ ʼಅಕ್ಕ ಪಡೆʼ ಯನ್ನು ರಾಜ್ಯಾದ್ಯಂತ ವಿಸ್ತರಿಸಲು ಗೃಹ ಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಕಲಬುರಗಿ ವಿಭಾಗ ಮಟ್ಟದಲ್ಲಿ ಐಸಿಡಿಎಸ್ ಶಾಖೆಯಲ್ಲಿ ಕೈಗೊಂಡಿರುವ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರ ರಕ್ಷಣೆ ಹಾಗೂ ಸಮಸ್ಯೆ ಬಗೆಹರಿಸಲು ಮಹಿಳಾ ಪೊಲೀಸರ ತಂಡ ಅಕ್ಕ ಪಡೆ ಮಾದರಿ ಹಾಗೂ ಶ್ಲಾಘನೀಯ. ಇಂತಹ ಪಡೆಯನ್ನು ಪ್ರತಿ ಜಿಲ್ಲೆಯಲ್ಲೂ ರಚಿಸುವಂತೆ ಗೃಹಸಚಿವರೊಂದಿಗೆ ಚರ್ಚಿಸುವುದಾಗಿ ಸಚಿವೆ ಹೆಬ್ಬಾಳಕರ್ ತಿಳಿಸಿದರು.
ಕಳೆದೆರಡು ದಿನಗಳಿಂದ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ಅಧಿಕಾರಿಗಳ ಸಭೆಯಲ್ಲಿ ಹಲವಾರು ವಿಷಯಗಳನ್ನು ಸುಧೀರ್ಘವಾಗಿ ಚರ್ಚಿಸಲಾಗಿದೆ. ಮಕ್ಕಳ, ಮಹಿಳೆಯರ, ಗರ್ಭೀಣಿಯರ, ಅಂಗವಿಕಲರ ಹಾಗೂ ಹಿರಿಯ ನಾಗರಿಕರಿಗೆ ಸರಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕ್ಷೇತ್ರ ಮಟ್ಟದಲ್ಲಿ ಯೋಜನೆಗಳನ್ನು ಹೆಚ್ಚು ಪ್ರಚಾರ ಕೈಗೊಂಡು ಸಮಸ್ಯೆಗಳನ್ನು ಬಗೆಹರಿಸಿ ಕಾಲಕಾಲಕ್ಕೆ ನೀಡಲಾಗುವ ಗುರಿಯನ್ನು ತಲುಪಿಸಬೇಕುʼ ಎಂದರು.
ʼಅಂಗನವಾಡಿ ಸಹಾಯಕಿಯರ ನೇಮಕಾತಿಯನ್ನು ಸರಳ ಹಾಗೂ ಪಾರದರ್ಶಕಗೊಳಿಸಲು 90 ದಿನಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ ರಾಜ್ಯಾದ್ಯಂತ 1.60 ಸಾವಿರ ಹೆಣ್ಣು ಮಕ್ಕಳಿಗೆ ಬಾಂಡ್ ವಿತರಿಸಲು ಕ್ರಮ ಕೈಗೊಳ್ಳುತ್ತಿದ್ದು, ಈ ಪೈಕಿ 20 ಸಾವಿರ ಜನರ ವಿಳಾಸ ಸರಿಯಾಗಿ ಸಿಗುತ್ತಿಲ್ಲ. ಅವರ ಪಾಲಕರು ಸಂಪರ್ಕಿಸಿ ಪಡೆಯಬಹುದಾಗಿದೆʼ ಎಂದು ತಿಳಿಸಿದರು.
ʼಗೃಹಲಕ್ಷ್ಮೀ ಯೋಜನೆಯಡಿ ಕಲಬುರಗಿ ವಿಭಾಗದಲ್ಲಿ 10 ಸಾವಿರ ಕೋಟಿ ಅನುದಾನವನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಸಂದಾಯವಾಗಿದೆ. ಈ ಕುರಿತು ಕಿರುಚಿತ್ರವೊಂದನ್ನು ನಿರ್ಮಿಸಲಾಗುವುದು. ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಶೀಘ್ರವೇ ಆರಂಭಿಸಲಾಗುವುದು. ಈ ಸಂಘಗಳ ಮೂಲಕ ವಿವಿಧ ರೀತಿಯ ಸಹಾಯ ಸೌಲಭ್ಯಗಳನ್ನು ವಿತರಿಸಲಾಗುವುದುʼ ಎಂದು ಮಾಹಿತಿ ನೀಡಿದರು.
ʼಅಂಗವಿಕಲರ ಯುಡಿಐ ಕಾರ್ಡ ವಿತರಣೆಯಲ್ಲಿರುವ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಹಾಗೂ ಮಹಿಳೆಯರ ಕಳ್ಳ ಸಾಗಾಣಿಕೆ, ಭಿಕ್ಷಾಟನೆ ಕುರಿತು ತೀವ್ರ ನಿಗಾ ವಹಿಸುವಂತೆ ಅದಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅಪೌಷ್ಠಿಕತೆ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೀದರ ಜಿಲ್ಲೆಯಲ್ಲಿ ಮೊಟ್ಟೆ ವಿತರಣೆ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು, ರಾಜ್ಯದ ಇತರೆ ಜಿಲ್ಲೆಗಳಂತೆ ಬಾಲವಿಕಾಸ ಸಮಿತಿಗೆ ಮೊಟ್ಟೆ ಅನುದಾನ ಸಂದಾಯವಾಗುವಂತೆ ಕ್ರಮಕೈಗೊಳ್ಳಲಾಗುವುದುʼ ಎಂದು ಹೇಳಿದರು.
ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಚಿವರು 7 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, 5 ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್ ಮತ್ತು 7 ಮಂದಿಗೆ ಶ್ರವಣದೋಷ ಇರುವವರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಇದನ್ನೂ ಓದಿ : ಬೀದರ್ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ; ಅರ್ಥಪೂರ್ಣವಾಗಿ ನಡೆಸಲು ಒಕ್ಕೊರಲ ತೀರ್ಮಾನ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಇಲಾಖೆಯ ನಿರ್ದೇಶಕ ರಾಘವೇಂದ್ರ, ಜಂಟಿ ಕಾರ್ಯದರ್ಶಿ ಹಾಗೂ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಸೇರಿದಂತೆ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.