ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ಬಳಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿರುವ ನಡುವೆ ದೂರುದಾರನಿಗೆ ಬೆದರಿಕೆ ಬಂದಿದೆ. ಈ ಸಂಬಂಧ ದೂರು ನೀಡಿರುವ ಅನಾಮಧೇಯ ವ್ಯಕ್ತಿಗೆ ದೂರು ವಾಪಸ್ ಪಡೆಯುವಂತೆ ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್(ಎಸ್‌ಐ) ಮಂಜುನಾಥ್ ಗೌಡ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
“ನೀನು ದೂರು ನೀಡಿರುವುದರಿಂದ ನಿನಗೆಯೇ ಶಿಕ್ಷೆಯಾಗುತ್ತದೆ. ನೀನು ಜೀವಮಾನವಿಡೀ ಜೈಲಿನಲ್ಲಿರಬೇಕಾಗುತ್ತದೆ. ಪೊಲೀಸರು ನಿನ್ನನ್ನೇ ಬಂಧಿಸುತ್ತಾರೆ” ಎಂದು ಬೆದರಿಸಿ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಪೊಲೀಸರಿಂದ 15 ವರ್ಷಗಳ ಅಸ್ವಾಭಾವಿಕ ಸಾವುಗಳ ದಾಖಲೆ ನಾಶ!
ಅಷ್ಟು ಮಾತ್ರವಲ್ಲದೆ ದೂರು ವಾಪಸ್ ಪಡೆದು, ಈ ರೀತಿ ದೂರು ನೀಡುವಂತೆ ಹೊರಗಿನವರು ಪ್ರಚೋದಿಸಿದ್ದರು ಎಂದು ಹೇಳಿಕೆ ನೀಡುವಂತೆ ಮಾಡಿ ಅದನ್ನೆಲ್ಲ ತನ್ನ ಮೊಬೈಲ್‌ನಲ್ಲಿ ಎಸ್‌ಐ ಚಿತ್ರಿಸಿಕೊಂಡಿದ್ದಾರೆ. ಅದಾದ ಬಳಿಕ ಎಸ್‌ಐ ರಜೆಯ ಮೇಲೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈಗಾಗಲೇ ದೂರುದಾರನ ಪರ ವಕೀಲರು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಹೋರಾಟಗಾರರು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದು ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಒತ್ತಡ, ಬೆದರಿಕೆಗಳಿಗೆ ಯಾರೂ ಎಂದೂ ಮಣಿಯಬಾರದು. ಆತ್ಮಸಾಕ್ಷಿಗನುಗುಣವಾಗಿ ನಾವು ನಮ್ಮ ಕಾರ್ಯವನ್ನು ಮುಂದುವರಿಸುತ್ತಾ ಎದೆತುಂಬಿ ತಲೆಯೆತ್ತಿ
ಜೀವನವನ್ನು ಸಾಗಿಸಬೇಕು. ಬದುಕು ನಶ್ವರ. ಸಾಧನೆ ಶಾಶ್ವತ.