ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ, ಇದೇ ಸೆಪ್ಟೆಂಬರ್.13 ರಂದು ಶನಿವಾರ ಸಂಜೆ 7 ಗಂಟೆಗೆ ಸಿದ್ವಿಕ್ ನಗರದಲ್ಲಿರುವ ಮಿಲನ್ ಫಂಕ್ಷನ್ ಹಾಲ್ ನಲ್ಲಿ ‘ಪ್ರವಾದಿ ಮುಹಮ್ಮದ್(ಸ) ನ್ಯಾಯದ ಹರಿಕಾರ’ ವಿಷಯದಲ್ಲಿ ಸೀರತ್ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರವಾದಿ ಮುಹಮ್ಮದ್ (ಸ) ರವರು ಅರೆಬಿಕ್ ಕ್ಯಾಲೆಂಡರ್ ಪ್ರಕಾರ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಜನಿಸಿದರು. ಅವರ ಸಾರ್ವಕಾಲಿಕ ಬೋಧನೆಗಳನ್ನು ಜನತೆಗೆ ತಿಳಿಯಪಡಿಸಲು ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕದ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಶೀರ್ಷಿಕೆಯಡಿ ಸೆಪ್ಟೆಂಬರ್ 3 ರಿಂದ 14ರ ವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾದಿ ಮುಹಮ್ಮದ್ (ಸ) ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಸೀರತ್ ಭಾಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ನಗರ ಶಾಖೆವತಿಯಿಂದ ಈಗಾಗಲೇ, ರಕ್ತದಾನ ಶಿಬಿರ ಮತ್ತು ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದ್ದು, ಇನ್ನೊಂದು ಸ್ವಚ್ಛತಾ ಕಾರ್ಯವನ್ನು ಸೆಪ್ಟೆಂಬರ್. 3 ರಂದು ನಡೆಸಲಾಗುವುದು. ಅಭಿಯಾನದ ಸಂದರ್ಭದಲ್ಲಿ ಸಮಾಜದ ಗಣ್ಯ ವ್ಯಕ್ತಿಗಳನ್ನು ಹಾಗೂ ಜನ ಸಾಮಾನ್ಯರನ್ನು ಭೇಟಿಯಾಗಿ ಪ್ರವಾದಿ ಮುಹಮ್ಮದರು ಸಾರಿದ ಜೀವನ ಮೌಲ್ಯಗಳನ್ನು, ಜಾತಿ- ಮತ-ಧರ್ಮ-ಲಿಂಗ ವ್ಯತ್ಯಾಸವಿಲ್ಲದೇ ಪರಿಚಯಿಸಲಾಗುವುದು ಎಂದು ವಲಯ ಸಂಚಾಲಕರಾದ ಅಬ್ದುಲ್ ಸಲಾಂ. ಯು. ಅವರು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಮುಖಂಡ ಕೆ.ಶಿವರಾಮು, ಮೆಸ್ಕೊ ಕಲೀಮ್ ಅಹಮದ್, ಮೈಸೂರು ನಗರ ಸ್ಥಾನಿಕ ಅಧ್ಯಕ್ಷ ಮುಹಮ್ಮದ್ ಅಸ್ಲಾಂ, ಸೀರತ್ ಅಭಿಯಾನದ ಸಂಚಾಲಕ ಖಲಿಲ್ ಉರ್ ರೆಹಮಾನ್, ನೂರ್ ಮರ್ಚೆಂಟ್, ಮುಹಮ್ಮದ್ ಉಮರ್ ಫಾಝಿಲ್, ಸ್ಥಾನಿಕ ಉಪಾಧ್ಯಕ್ಷ ಶೇಕ್ ಅಸಾದುಲ್ಲಾ ಇದ್ದರು.