ರಾಜ್ಯದಲ್ಲಿ ನವಜಾತ ಶಿಶು ಮರಣ ಪ್ರಮಾಣ ಇಳಿಕೆಯಾಗುತ್ತಿದ್ದರೂ, ರಾಯಚೂರು ಜಿಲ್ಲೆಯಲ್ಲಿ ನವಜಾತ ಶಿಶು ಶಿಶು ಮರಣ ಪ್ರಮಾಣ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ನೀಡಿದ ಅಂಕಿ-ಅಂಶಗಳ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ವರದಿಯಾದ ಶಿಶು ಮರಣ ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ 2022 ರಿಂದ 2025ರವರೆಗೆ ಮೂರು ವರ್ಷದಲ್ಲಿ 1,450 ಶಿಶು ಮರಣ ಹೊಂದಿರುವ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
2022-23ನೇ ಸಾಲಿನಲ್ಲಿ (625), 2023-24ರಲ್ಲಿ (397), ಹಾಗೂ 2024-25ರಲ್ಲಿ (428) ನವಜಾತ ಶಿಶು ಮರಣ ಪ್ರಕರಣ ವರದಿಯಾಗಿವೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 162 ಶಿಶು ಮರಣ ಪ್ರಕರಣ ವರದಿಯಾದರೆ, ನಗರ ಪ್ರದೇಶದಲ್ಲೇ ಹೆಚ್ಚು 1,288 ಪ್ರಕರಣಗಳು ವರದಿಯಾಗಿರುವುದು ಯೋಚಿಸಬೇಕಾದ ವಿಷಯ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಶಿಶು ಮರಣ ಪ್ರಕರಣ ವರದಿಯಾದ ಜಿಲ್ಲೆಗಳಲ್ಲಿ ರಾಯಚೂರು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಕೊಪ್ಪಳ (1272) ಹಾಗೂ ಬಳ್ಳಾರಿ (1231) ಜಿಲ್ಲೆಗಳಿವೆ. ವಿಜಯನಗರದಲ್ಲಿ (106) ಕಡಿಮೆ ಪ್ರಕರಣ ವರದಿಯಾಗಿವೆ. ಕಲ್ಯಾಣ ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ ಶಿಶು ಮರಣ ಪ್ರಕರಣಗಳಲ್ಲಿ ಏರಿಳಿತ ಕಂಡುಬಂದಿದ್ದು, ಏಳು ಜಿಲ್ಲೆಗಳಲ್ಲಿ ಒಟ್ಟು 6,074 ಶಿಶು ಮರಣ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ದಾಖಲಾದ ಒಟ್ಟು ಶಿಶು ಮರಣ ಪ್ರಕರಣಗಳಲ್ಲಿ ಶೇ 25ಕ್ಕಿಂತ ಹೆಚ್ಚು ವರದಿಯಾಗಿದ್ದು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಎಂಬುದು ಗಮನಾರ್ಹ ಸಂಗತಿ.
ಶಿಶು ಮರಣ ಹೆಚ್ಚಾಗಲು ಕಾರಣವೇನು?
ಅವಧಿ ಪೂರ್ವ ಜನನ, ಶಿಶುವಿನ ಕಡಿಮೆ ತೂಕದಿಂದ ಉಂಟಾಗುವ ತೊಂದರೆಗಳು, ಜನನ ಸಮಯದ ಉಸಿರುಗಟ್ಟುವಿಕೆ, ನ್ಯೂಮೋನಿಯಾ ಸೆಪ್ಪಿಸ್, ಜನ್ಮಜಾತ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಇತರೆ ಕಾಯಿಲೆಗಳು ನವಜಾತ ಶಿಶು ಮರಣಕ್ಕೆ ಕಾರಣಗಳಾಗಿವೆ.
ʼಅಪೂರ್ಣ ಅವಧಿಯಲ್ಲಿ ಹುಟ್ಟುವ ಮಕ್ಕಳು ಸಾಮಾನ್ಯವಾಗಿ ಉಸಿರಾಟ, ದೇಹದ ತೂಕ, ಹಾಗೂ ದೇಹದ ಅಂಗಾಂಗಗಳ ಪೂರ್ಣಾಭಿವೃದ್ಧಿಯ ಕೊರತೆಯಿಂದಾಗಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಾರೆ. ಆದರೆ, ಜನನದ ಕ್ಷಣದಿಂದಲೇ ನೀಡಲಾಗುವ ನವಜಾತ ಶಿಶುಗಳ ತೀವ್ರ ನಿಗಾ ಚಿಕಿತ್ಸೆಯಿಂದ ಬದುಕುಳಿಯುವ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆʼ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ನವಜಾತ ಶಿಶುಗಳ ಮರಣವನ್ನು ಕಡಿಮೆ ಮಾಡುವುದರ ಜೊತೆಗೆ ಅವರ ಆರೋಗ್ಯವನ್ನು ಸುಧಾರಿಸುವ ಉದ್ದೇಶದಿಂದ, ರಾಜ್ಯದಲ್ಲಿ ವೈದ್ಯಕೀಯ ಸೇವೆಗಾಗಿ ಬಹುಹಂತದ ಸೌಲಭ್ಯ ಆಧಾರಿತ ಸೇವೆಗಳು ಹಾಗೂ ನವಜಾತ ಶಿಶು ಸಪ್ತಾಹ ಸೇರಿದಂತೆ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಶಿಶು ಆರೈಕೆ ಘಟಕ ಸ್ಥಾಪನೆ, ತಾಯಿ-ಮಗು ಆರೋಗ್ಯದ ಮೇಲಿನ ಹೆಚ್ಚಿನ ಗಮನ, ಮೂಲಸೌಕರ್ಯ ಬಲಪಡಿಸುವುದು ಹಾಗೂ ತುರ್ತು ವೈದ್ಯಕೀಯ ಸೇವೆಗಳ ಲಭ್ಯತೆ ಹೆಚ್ಚಿಸುವುದರ ಮೂಲಕ ನವಜಾತ ಶಿಶು ಮರಣವನ್ನು ತಡೆಹಿಡಿಯಲು ಸಾಧ್ಯವಾಗಲು ಮುಂದಾಗಿದೆ.
ಜಿಲ್ಲೆಯಲ್ಲಿ ಇಲ್ಲ ನವಜಾತ ಶಿಶು ಆರೈಕೆ ಘಟಕ :
ರಾಜ್ಯದಲ್ಲಿ ನವಜಾತ ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಸರ್ಕಾರ ರಾಜ್ಯದ 9 ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ಸ್ಥಾಪಿಸಿದೆ. ಆದಾಗ್ಯೂ, ಗಣನೀಯ ಪ್ರಮಾಣದಲ್ಲಿ ಶಿಶು ಮರಣ ಪ್ರಕರಣ ಪತ್ತೆಯಾಗುತ್ತಿರುವ ರಾಯಚೂರು ಜಿಲ್ಲೆಯ ಯಾವುದೇ ತಾಲೂಕು ಆಸ್ಪತ್ರೆಯಲ್ಲಿ ವಿಶೇಷ ನವಜಾತ ಶಿಶು ಆರೈಕೆ ಘಟಕಗಳಿಲ್ಲ.
ʼಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ್, ಕಲಬುರಗಿ ಜಿಲ್ಲೆಯ ಜೇವರ್ಗಿ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಆಸ್ಪತ್ರೆಯಲ್ಲಿ ಶಿಶು ಆರೈಕೆ ಘಟಕಗಳಿವೆ. ರಾಯಚೂರು ಜಿಲ್ಲೆಯಲ್ಲಿ ಶಿಶು ಆರೈಕೆ ಘಟಕ ಸ್ಥಾಪಿಸುವ ಅವಶ್ಯಕತೆ ತುರ್ತಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಸಮರ್ಪಿತ ಘಟಕ ಸ್ಥಾಪನೆಯ ಮೂಲಕ ನವಜಾತ ಶಿಶುಗಳಿಗೆ ತಕ್ಷಣದ ಚಿಕಿತ್ಸೆ ದೊರೆತರೆ, ಜೀವ ಹಾನಿ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆʼ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ʼಮಹಿಳಾ ಸಂಘಟನೆಯ ಅಧ್ಯಕ್ಷೆ ವಿದ್ಯಾ ಪಾಟೀಲ್ ಮಾತನಾಡಿ, ʼಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದ, ರಾಯಚೂರಿನಲ್ಲಿ ಶೀಘ್ರದಲ್ಲೇ ಶಿಶು ಆರೈಕೆ ಘಟಕ ಸ್ಥಾಪನೆಗೆ ಮುಂದಾಗಬೇಕು. ಜನನದ ತಕ್ಷಣವೇ ನೀಡುವ ತೀವ್ರ ಆರೈಕೆ, ಅವಕಾಲದಲ್ಲಿ (7-8 ತಿಂಗಳು) ಹುಟ್ಟುವ ಶಿಶುಗಳ ಬದುಕುಳಿಯುವ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿದೆʼ ಎಂದರು.
ʼಕುಟುಂಬಕ್ಕೆ ಭರವಸೆ ಮತ್ತು ಮಾನಸಿಕ ಶಾಂತಿ ಮಗುವಿನ ಆರೈಕೆಯ ಭರವಸೆಯೊಂದಿಗೆ ಪೋಷಕರು ಆತಂಕದಿಂದ ಮುಕ್ತರಾಗುತ್ತಾರೆ. ಕುಟುಂಬಕ್ಕೆ ಭದ್ರತೆ ಹಾಗೂ ಶಾಂತಿಯ ಭಾವನೆ ದೊರಕುತ್ತದೆ. ಕೂಡಲೇ ಸರ್ಕಾರ ಜಿಲ್ಲೆಯಲ್ಲಿ ಶಿಶು ಮರಣ ತಡೆಯಲು ಶಿಶು ಮರಣ ಘಟಕ ಸ್ಥಾಪಿಸಿ ಜಿಲ್ಲೆಯಲ್ಲಿ ನಡೆಯುವ ಶಿಶು ಮರಣಕ್ಕೆ ಕಡಿವಾಣ ಹಾಕಬೇಕುʼ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುರೇಂದ್ರ ಮಾತನಾಡಿ, ʼಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಏರಿಳಿತ ಆಗುತ್ತಿರುವುದು ಕಂಡುಬರುತ್ತಿದೆ. ಪ್ರತಿ ವರ್ಷ ರಾಯಚೂರು ಜಿಲ್ಲೆಯಲ್ಲಿ ಸರಾಸರಿ 40,000 ಬಾಣಂತಿಯರು ಜನಿಸುತ್ತಿದ್ದಾರೆ. ಈ ಅಂಕಿ–ಅಂಶದ ಆಧಾರದ ಮೇಲೆ ರಾಯಚೂರು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಶಿಶು ಮರಣ ಘಟಕ ಸಿಂಧನೂರು ಹಾಗೂ ಲಿಂಗಸೂಗೂರು ತಾಲ್ಲೂಕಿನಲ್ಲಿ ಪ್ರಕ್ರಿಯೆ ನಡೆದಿದೆ. ನವಜಾತ ಶಿಶುಗಳನ್ನು ಆರೈಕೆ ಮೂಲಕ ಬಾಧಿಸುವ ಕಾಯಿಲೆಗಳಿಂದ ತಡೆಯಲು ಸಾಧ್ಯವಾಗಬಹುದು ಮತ್ತು ನವಜಾತ ಶಿಶುಗೆ ಉತ್ತಮ ಚಿಕಿತ್ಸೆ ನೀಡಬಹುದುʼ ಎಂದು ಹೇಳಿದರು.
ಇದನ್ನೂ ಓದಿ : ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ: ಸಿಎಂ ಸಿದ್ದರಾಮಯ್ಯ
ಆರೋಗ್ಯ ಕೇಂದ್ರಗಳಲ್ಲಿ ತಕ್ಷಣದ ಸೇವೆ ಲಭ್ಯವಾಗಬೇಕು. ಶಿಶುಗಳ ಆರೋಗ್ಯಕ್ಕಾಗಿ ತಾಯಿ-ಮಗುವಿಗೆ ನೀಡುವ ಪೋಷಕಾಂಶ ಶಿಶು ಮರಣ ಪ್ರಮಾಣ ಇನ್ನೂ ಗಂಭೀರ ಸವಾಲಾಗಿ ಮುಂದುವರಿಯುತ್ತಿದ್ದು, ಇದರ ಬಗ್ಗೆ ಸರಕಾರ ಗಮಹರಿಸಿ ಕಡಿವಾಣ ಹಾಕುವುದಕ್ಕೆ ಮುಂದಾಗಬೇಕು ಸಾಮಾಜಿಕ ಹೋರಾಟಗಾರರ ಒತ್ತಾಸೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್