ಏಮ್ಸ್ ಹೋರಾಟಗಾರ ಬಸವರಾಜ್ ಕಳಸ, ಅಶೋಕ ಜೈನ್ ಸೇರಿ ಹಲವರು ನನ್ನ ವಿರುದ್ಧ ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮುಂದೆ ಅನಾಹುತವಾದರೆ ನಾನು ಜವಾಬ್ದಾರರಲ್ಲ ಎಂದು ನಗರ ಬಿಜೆಪಿ ಶಾಸಕ ಶಿವರಾಜ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದ ತಮ್ಮ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ‘ಏಮ್ಸ್ ಹೋರಾಟದ ಮುಖಂಡ ಬಸವರಾಜ ಕಳಸ ನನಗೆ ಷಂಡ ಎಂದು ಅವಾಚ್ಯ ಪದ ಬಳಕೆ ಮಾಡಿದ್ದು, ತಾನೇ ಷಂಡನಾಗಿದ್ದಾನೆ. ಅನೇಕರು ಏಮ್ಸ್ ಗಾಗಿ ಹೋರಾಟ ಮಾಡುತ್ತಿಲ್ಲ. ಕೇವಲ ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ನಮ್ಮ ರಾಜ್ಯಕ್ಕೆ 5 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಅಂತಹ ಪ್ರಭಾವಿ ಸಚಿವರೊಬ್ಬರಿಗೆ ಚಪ್ಪಲಿ ತಗೊಂಡು ಹೊಡೆಯುತ್ತೇವೆ ಎಂದು ಹೇಳಿದ್ದ ಅಶೋಕ ಕುಮಾರ್ ಜೈನ್ ಅವರಿಗೆ ಅದನ್ನೇ ಬಾಯಿಯಲ್ಲಿ ಇಟ್ಟು ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇವೆ’ ಎಂದರು.
‘ಏಮ್ಸ್ ಬಗ್ಗೆ ಹೋರಾಟ ಮಾಡುವವರು ನಗರಕ್ಕೆ ಸಿಎಂ ಬಂದಾಗ ಮನವಿ ಏಕೆ ಕೊಡಲಿಲ್ಲ. ಸಿಎಂ ಬಂದಾಗ ಏಮ್ಸ್ ಬಗ್ಗೆ ನೀವು ಏನು ಮಾಡಿದ್ದೀರಿ, ಪ್ರಶ್ನೆ ಮಾಡಬೇಕಿತ್ತು. ಏಮ್ಸ್ ಹೋರಾಟ ಮಾಡುತ್ತಿರುವ ಮುಖಂಡರಿಗೆ ಏಮ್ಸ್ ಬೇಕಾಗಿಲ್ಲ ಶಾಸಕನನ್ನು ತೇಜೋವಧೆ ಮಾಡುವುದೇ ಉದ್ದೇಶವಾಗಿದೆ. ಬಿಜೆಪಿ ಸಚಿವರು ಜಿಲ್ಲೆಗೆ ಬಂದಾಗ ಮಾತ್ರ ಏಮ್ಸ್ ಹೋರಾಟ ಮಾಡುವುದೇ ಕೆಲಸವಾಗಿದೆ. ಅವರಾಗಿಯೇ ಏಮ್ಸ್ ಹೋರಾಟ ಮಾಡುತ್ತಿಲ್ಲ, ಮಾಡಿಸುತ್ತಿದ್ದಾರೆ’ ಎಂದು ದೂರಿದರು.
‘ಅಸಂವಿಧಾನಿಕ ಪದ ಬಳಕೆ ನನಗೂ ಬರುತ್ತದೆ. ಆದರೆ ನಾನು ಶಾಸಕನಾಗಿ ಮಾತನಾಡಲ್ಲ, ನನ್ನ ಭಾಷೆ ಅವರಿಗಿಂತ ಕೆಟ್ಟದಾಗಿದೆ, ಅವರು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ನಾನು ಜವಾಬ್ದಾರನಲ್ಲ’ ಎಂದು ಎಚ್ಚರಿಸಿದರು.
ಏಮ್ಸ್ ಗಾಗಿ ಜಿಲ್ಲೆಯ ಎಲ್ಲ 7 ಶಾಸಕರು, ಸಂಸದರು ರಾಜೀನಾಮೆ ನೀಡಿ ಧರಣಿಗೆ ಕುಳಿತುಕೊಳ್ಳೋಣ ಧಮ್ ಇದ್ರೆ ರಾಜಿನಾಮೆ ನೀಡಲಿ. ನಾನು ರೆಡಿ, ನಾವೆಲ್ಲರೂ ಕುಳಿತರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತಾನೇ ಪ್ರತಿಭಟನಾ ಸ್ಥಳಕ್ಕೆ ಬರುತ್ತದೆ’ ಎಂದು ಸವಾಲು ಹಾಕಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಚರಂಡಿ ,ಬೋರವೆಲ್ ದುರಸ್ತಿಗೆ ಕೆ ಆರ್ ಎಸ್ ಆಗ್ರಹ
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಆಂಜನೇಯ ಕಡಗೋಲ್, ಪಿ.ಯಲ್ಲಪ್ಪ, ಈ.ಶಶಿರಾಜ, ಎನ್.ಕೆ.ನಾಗರಾಜ, ರಾಘವೇಂದ್ರ ಊಟ್ಕೂರು, ಶಂಶಾಲಂ ಸನ್ನಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
