ರಾಯಚೂರು ತಾಲ್ಲೂಕು ಅತ್ಕೂರ ಗ್ರಾಮದಲ್ಲಿ ದಸರಾ ಹಬ್ಬದ ನಿಮಿತ್ತ ಅಂಬಾಭವಾನಿ ದೇವಾಲಯದಲ್ಲಿ ದಲಿತ ಸಮುದಾಯದವರು ಮಾಲೆ ಹಾಕಲು ತೆರಳಿದ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿ ಹಾಗೂ ಕೆಲವರು ತಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ವಾಗ್ವಾದ ಉಂಟಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ದಸರಾ ನವರಾತ್ರಿ ಸಂದರ್ಭದಲ್ಲಿ ಗ್ರಾಮದಲ್ಲಿ ಎಲ್ಲಾ ಜಾತಿ ಸಮುದಾಯದ ಭಕ್ತರು ದೇವಾಲಯ ಪ್ರವೇಶಿಸಿ ಮಾಲೆ ಅರ್ಪಿಸುವುದು ದೀರ್ಘಕಾಲದ ಸಂಪ್ರದಾಯ. ಆದರೆ ದಲಿತರು ದೇವಾಲಯ ಪ್ರವೇಶಿಸಲು ಹೋದಾಗ ಅವರನ್ನು “ನೀವು ಒಳಬರಬಾರದು, ಹೊರಗಡೆಯಿಂದಲೇ ಮಾಲೆ ಹಾಕಬೇಕು” ಎಂದು ತಡೆದಿದ್ದಾರೆ.
ಈ ವಿಷಯವಾಗಿ ಗ್ರಾಮದ ನಿವಾಸಿ ರಮೇಶ್ ಮಾತನಾಡಿ, “ನಾವು ಮಾಲೆ ಹಾಕಲು ಹೋದಾಗ ಕೆಲವರು ತಡೆದರು. ನಮ್ಮ ತಾತನ ಕಾಲದಿಂದಲೇ ದಲಿತರಿಗೆ ಒಳಗಡೆ ಪ್ರವೇಶವಿಲ್ಲ, ನೀವು ಹಾಕಿದರೆ ನಾವು ಮಾಲೆ ತೆಗೆಯುತ್ತೇವೆ ಎಂದು ಹೇಳಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಂದೇ ಮನೆಗೆ ಮೂರು ಬಾರಿ ಜಿಪಿಎಸ್ : ರೈತ ಸಂಘಟನೆಯಿಂದ ಪ್ರತಿಭಟನೆ
ಗ್ರಾಮದ ಎಲ್ಲ ಸಮುದಾಯದ ಭಕ್ತರು ದೇವಾಲಯ ಪ್ರವೇಶಿಸಿ ಮಾಲೆ ಹಾಕಲು ಅವಕಾಶವಿದ್ದರೂ, ಮಾದಿಗ ಸಮುದಾಯದವರಿಗೆ ಮಾತ್ರ ಈ ಹಕ್ಕು ನಿರಾಕರಿಸಿರುವುದರಿಂದ ಸ್ಥಳೀಯ ದಲಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

