ಸೆಪ್ಟಂಬರ್ 15ರಿಂದ 45ದಿನಗಳವರೆಗೆ ದೇವದಾಸಿ ಅಭಿವೃದ್ಧಿ ನಿಗಮದಿಂದ ವಿಮುಕ್ತ ದೇವದಾಸಿಯರ ಸಮೀಕ್ಷೆ ನಡೆಯಲಿದ್ದು, ಪಟ್ಟಿಯಲ್ಲಿ ಬಿಟ್ಟು ಹೋದ ವಿಮುಕ್ತ ದೇವದಾಸಿಯರ ಕುಟುಂಬ ಸದಸ್ಯರ ಹೆಸರು ಸೇರಿಸಿ ಸೌಲಭ್ಯ ಪಡೆಯಲು ಮುಂದಾಗಬೇಕು ಎಂದು ವಿಮುಕ್ತ ದೇವದಾಸಿ ತಾಯಂದಿರ ಮತ್ತು ಮಕ್ಕಳ ವೇದಿಕೆಯ ಸಲಹೆಗಾರ ಎಂ.ಆರ್.ಭೇರಿ ತಿಳಿಸಿದರು.
ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, 2023-24ರ ರಾಜ್ಯ ಬಜೆಟ್‍ನಲ್ಲಿ ದೇವದಾಸಿ ವಿಮುಕ್ತ ಮಹಿಳೆಯರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ದೇವದಾಸಿಯರ ಮಕ್ಕಳ ಹಾಗೂ ಮೊಮ್ಮಕ್ಕಳ ಹೆಸರನ್ನೂ ಸೇರ್ಪಡೆಗೊಳಿಸಬೇಕು ಎಂದು ರಾಜ್ಯದಲ್ಲಿ ಸಮಗ್ರ ದೇವದಾಸಿ ಪುನರ್ವಸತಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ ಅನೇಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ರಾಜ್ಯದ ಬೆಳಗಾವಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ಶಿವಮೊಗ್ಗ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ದೇವದಾಸಿ ಮಹಿಳೆಯರಿದ್ದು, ಸುಮಾರು 40 ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ರಾಯಚೂರು ಜಿಲ್ಲೆಯಲ್ಲಿ ಸುಮಾರು 3000 ಕುಟುಂಬಗಳಿದ್ದು, ಪುನರ್ವಸತಿ ಸೌಲಭ್ಯಗಳು ಪಡೆಯಲು ಅರ್ಹರು ವಂಚಿತರಾಗುತ್ತಿದ್ದು ನಕಲಿ ಫಲಾನುಭವಿಗಳ ಪಾಲಾಗುತ್ತಿದೆ ಹೀಗಾಗಿ ಸರ್ಕಾರ ಸಮೀಕ್ಷೆಗೆ ಮುಂದಾಗಿದೆ ಎಂದು ಹೇಳಿದರು.
ವಿಮುಕ್ತ ದೇವದಾಸಿಯರ ಹೆಣ್ಣು ಮಕ್ಕಳನ್ನು ಮದುವೆಯಾದರೆ ರೂ. 5 ಲಕ್ಷ ಹಾಗೂ ಗಂಡು ಮದುವೆಯಾದರೆ 3 ಲಕ್ಷ ಸಹಾಯಧನ ನೀಡಲಾಗುತ್ತದೆ. ಗಂಡು ಮತ್ತು ಹೆಣ್ಣು ಇಬ್ಬರೂ ದೇವದಾಸಿ ಮಕ್ಕಳಾದರೆ ಅವರ ಮದುವೆ 5 ಲಕ್ಷ ಸಹಾಯಧನ ನೀಡಬೇಕೆನ್ನುವ ಬೇಡಿಕೆ ಸರ್ಕಾರದ ಮುಂದೆ ವೇದಿಕೆಯಿಂದ. ಇಡಲಾಗಿದೆ. ಸಮಗ್ರ ದೇವದಾಸಿ ಕಾಯ್ದೆಗೆ ನಿಯಮಗಳನ್ನು ಸರ್ಕಾರ ರೂಪಿಸಿಲ್ಲ ಕೂಡಲೇ ನಿಯಮಗಳನ್ನು ರೂಪಿಸಬೇಕು. ಜೊತೆಗೆ ಜಿಲ್ಲೆಯಲ್ಲಿ ಸಮೀಕ್ಷೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಿಲ್ಲ ಕೂಡಲೇ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಬೇಕೆಂದು ಮನವಿ ಮಾಡಿದರು.
ಈ ಮುಂಚೆ ದೇವದಾಸಿ ಮಕ್ಕಳ ತಂದೆಯ ಹೆಸರನ್ನು ಸೇರಿಸಲು ಮಕ್ಕಳಿಗೆ ಮುಜುಗರ ಉಂಟಾಗುತ್ತಿತ್ತು. ಇದೀಗ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ತಂದೆ ಯಾರೆಂದು ಗೊತ್ತಿದ್ದರೆ. ಅವರ ಹೆಸರನ್ನು ಸೇರಿಸಬಹುದಾಗಿದೆ ಮತ್ತು ಆಸ್ತಿಯಲ್ಲೂ ಪಾಲು ಕೇಳಲು ಕಾಯ್ದೆ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗ್ಯಾರಂಟಿ ಯೋಜನೆ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಬೇಡಿ – ಪಾಮಯ್ಯ ಮುರಾರಿ
ವೇದಿಕೆ ಸಂಚಾಲಕಿ ನಾಗರತ್ನ, ಹುಚ್ಚಾರೆಡ್ಡಿ, ಹುಲಿಗೆಮ್ಮ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
