ಮನುಷ್ಯನ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯೊಂದೇ ಅನೀಮಿಯಾ (ರಕ್ತಹೀನತೆ) ಸಮಸ್ಯೆಗೆ ರಾಮಬಾಣ ಎಂದು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕರಾಂ ಪಾಂಡ್ವೆ ಅವರು ಹೇಳಿದರು.
ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್ ವಿಭಾಗ ರಾಯಚೂರು ಇವರ ಸಂಯುಕ್ತಾಶ್ರದಲ್ಲಿ ಆಯೋಜಿಸಲಾಗಿದ್ದ ʼಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಅಂಗವಾಗಿ ಅನೀಮಿಯ ಕುರಿತು ಅರಿವು, ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಪ್ರತಿಯೊಬ್ಬರಲ್ಲೂ ಹಿಮೋಗ್ಲೋಬಿನ್ ಅಂಶ ಶೇ.12 ರಷ್ಟು ಇರಬೇಕು. ರಕ್ತಹೀನತೆಯಿಂದ ಮಕ್ಕಳಲ್ಲಿ ಏಕಾಗ್ರತೆ ಶಕ್ತಿ ಕಡಿಮೆ ಯಾಗುತ್ತದೆ. ಮಹಿಳೆಯರಲ್ಲಿ ಪದೇ ಪದೇ ಗರ್ಭಪಾತ ಉಂಟಾಗುತ್ತದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡು ಬರುತ್ತದೆ. ಹೆಣ್ಣು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಅತ್ಯಗತ್ಯವಾಗಿದೆ. ಬಡತನ ಮುಂತಾದ ಕಾರಣಗಳಿಂದ ಪೌಷ್ಟಿಕ ಆಹಾರ ಪಡೆಯಲು ಬಹುತೇಕ ಜನ ಅಸಮರ್ಥರಾಗಿದ್ದಾರೆ. ಅದು ಬದಲಾಗಬೇಕು. ಪ್ರತಿಯೊಬ್ಬರೂ ಸಮರ್ಪಕ ಆಹಾರ ಪಡೆಯುವಷ್ಟು ಸಾಮರ್ಥ್ಯ ಹೊಂದಬೇಕು” ಎಂದರು.
“ಅನೀಮಿಯಾ ಮುಕ್ತ ಕರ್ನಾಟಕ ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 6 ತಿಂಗಳಿನಿಂದ 18 ವರ್ಷದೊಳಗಿನ ಎಲ್ಲಾ ಗಂಡು ಮತ್ತು ಹೆಣ್ಣು ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳ ತಪಾಸಣೆ ಮಾಡಲಾಗುತ್ತಿದೆ. ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವವರಿಗೆ ಕಬ್ಬಿಣಾಂಶದ ಮಾತ್ರೆ, ತೀವ್ರವಾಗಿ ಅನೀಮಿಯಾದಿಂದ ಬಳಲುತ್ತಿದ್ದರೆ ಕಬ್ಬಿಣಾಂಶದ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಳ್ಳಬೇಕು” ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, “ಆರೋಗ್ಯವೇ ಸಂಪತ್ತು. ಹೆಣ್ಣುಮಕ್ಕಳು ಸಮರ್ಪಕ ಆಹಾರ ಸೇವನೆ ಮಾಡದಿರುವುದರಿಂದ ಇವರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡು ಬರುತ್ತಿದೆ. ಆಹಾರದಲ್ಲಿ ಮೊಳಕೆ ಕಾಳುಗಳು, ತರಕಾರಿ, ಸೊಪ್ಪು, ತುಪ್ಪ ಹೆಚ್ಚಾಗಿ ಸೇವಿಸಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದುವ ಮೂಲಕ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಆರೋಗ್ಯ ಅರಿವು ಹೊಂದಿ ಇತರರಿಗೂ ಅರಿವು ಮೂಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಖರೀದಿ ಕೇಂದ್ರದಲ್ಲೇ ತೊಗರಿ ಖರೀದಿಗೆ ಅನುಕೂಲ ಮಾಡಿಕೊಡಲು ಎಐಡಿವೈಒ ಒತ್ತಾಯ
ಈ ವೇಳೆ ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ, ಎಲ್.ಬಿ.ಎಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸುಷ್ಮಾ ಪಾಟೀಲ್, ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ಗೋವಿಂದಪ್ಪ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಬಸಯ್ಯ, ಶಿವುಕುಮಾರ್, ಸಂಧ್ಯಾ ನಾಯಕ ಸೇರಿದಂತೆ ಆಶಾ ಕಾರ್ಯಕರ್ತಯರು ಇದ್ದರು.
