ವಿಶೇಷಚೇತನರ ಕಲ್ಯಾಣಕ್ಕಾಗಿ ರೂಪಿಸಿರುವ ಕಾಯ್ದೆ ಕಾನೂನುಗಳನ್ನು ಜಿಲ್ಲಾಡಳಿತ ಉಲ್ಲಂಘಿಸುತ್ತಿದೆ. ವಿಶೇಷಚೇತನರ ಅನುದಾನ ಪೂರ್ಣಪ್ರಮಾಣದ ಬಳಕೆಯಲ್ಲಿ ವಿಫಲವಾಗಿದೆ ಎಂದು ವಿಶೇಷಚೇತನರ ಆರ್‌ಪಿಡಿ ಟಾಸ್ಕ ಫೋರ್ಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಭಂಡಾರಿ ಮದುಗಲ್ ಆರೋಪಿಸಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿಶೇಷಚೇತನರಿಗಾಗಿ ಪ್ರತ್ಯೇಕ ಇಲಾಖೆ ಪ್ರಾರಂಭಿಸಿದ್ದರು ಇಲಾಖೆ ಅಧಿಕಾರಿಗಳು ವಿಕಲಚೇತನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ವಿಶೇಷಚೇತನರಿಗೆ ಗ್ರಾಮ, ತಾಲೂಕ ಮತ್ತು ಜಿಲ್ಲಾ ಪಂಚಾಯ್ತಿ ಹಾಗೂ ಶಾಸಕರು, ಸಂಸದರ ಅನುದಾನ ಮೀಸಲಿದ್ದರೂ ವಿಶೇಷಚೇತನರಿಗೆ ಬಳಕೆಯಾಗದೇ ಬೇರೆ ಕಾರ್ಯಗಳಿಗೆ ಅನುದಾನ ಬಳಸಲಾಗುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಗ್ರಾಮ ಪಂಚಾಯ್ತಿ ಅನುದಾನ ಬಳಕೆಯಾಗದೇ ಹೋಗಿದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಲ್ಲಿ ಅನುಷ್ಟಾನ ಸಮಿತಿ ರಚಿಸಲಾಗಿದೆ. ಆದರೆ ಇಲ್ಲಿಯವರೆಗೆ ಎರಡು ಸಭೆಗಳು ಮಾತ್ರ ಆಗಿವೆ. ಸಮಿತಿಗೆ ನಾಮನಿರ್ದೇಶನಗೊಂಡ ಸದಸ್ಯರನ್ನು ಮೂರು ವರ್ಷಗಳಿಗೊಮ್ಮ ಬದಲಾವಣೆ ಮಾಡಬೇಕೆಂಬ ನಿಯಮವಿದ್ದರೂ ಅವಧಿ ಮುಗಿದು ಎರಡು ವರ್ಷವಾದರೂ ಬದಲಾವಣೆ ಮಾಡುತ್ತಿಲ್ಲ. ತ್ರಿಚಕ್ರವಾಹನ ಫಲಾನುಭವಿಗಳ ಆಯ್ಕೆ ಸಮಿತಿಗೆ ನಾಮನಿರ್ದೇಶನಗೊಂಡಿರುವ ಸದಸ್ಯರು ಕಳೆದ 12 ವರ್ಷಗಳಿಂದ ಬದಲಾವಣೆ ಮಾಡದೇ ನಿಯಮ ಉಲ್ಲಂಘಿಸಲಾಗಿದೆ.
ವಿಕಲಚೇತನರಿಗೆ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳರ್ಯಾಂಪ್ ವ್ಯವಸ್ಥೆ ಮಾಡಿಲ್ಲ. ನಿರ್ಮಾಣವಾಗಿದ್ದರೂ ಅವೈಜ್ಞಾನಿಕವಾಗಿವೆ. ಇನ್ನೂ ಅನರ್ಹರಿಗೆ ವಿಕಲಚೇತನ ಪ್ರಮಾಣ ಪತ್ರ ನೀಡಲಾಗುತ್ತಿದೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಲಿಖಿತ, ದಾಖಲೆ ಸಹಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಅವರು ಸಹ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ತಾಲೂಕ ಮಟ್ಟದಲ್ಲಿಯೂ ಕುಂದುಕೊರತೆ ಸಭೆ ನಡೆಯುತ್ತಿಲ್ಲ. ವಿಕಲಚೇತನ ಇಲಾಖೆ ಅಧಿಕಾರಿಗಳು ತಮಗೆ ಬೇಕಾದವರಿಗೆ ಯೋಜನೆ ನೀಡಲಾಗುತ್ತಿದೆ.
ಹಣ ಪಡೆದ ಅನರ್ಹರನ್ನು ಆಯ್ಕೆ ಮಾಡಲಾಗುತ್ತಿದೆ. ಅನುದಾನ ಬಳಕೆಯಾಗದೇ ಇರುವದನ್ನು ಗಂಬೀರವಾಗಿ ಪರಿಗಣ ಸಿ ಜಿಲ್ಲಾಧಿಕಾರಿಗಳು ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಒದಗಿಸದೇ ಹೋದರೆ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಸಂಘಟನೆ ಭೀಮಸೇನ ಮಾತನಾಡಿ ವಿಶೇಷಚೇತನರನ್ನು ಬಿಕ್ಷಕರಂತೆ ಅಧಿಕಾರಿಗಳು ನೋಡುತ್ತಿದ್ದಾರೆ. ವಿಕಲಚೇತನರ ಅನುದಾನ ಅನ್ಯ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಸಂಸದರು, ಶಾಸಕರುಗಳು ವಿಕಲಚೇತನರಿಗೆ ಮೀಸಲಾದ ಅನುದಾನ ಸದ್ಭಳಕೆ ಮಾಡಲು ಬಿಡುತ್ತಿಲ್ಲ. ವಿಕಲಚೇತನ ಅಧಿಕಾರಿ ಕಚೇರಿಯಲ್ಲಿಯೇ ಇರದೇ ದೂರದ ಊರುಗಳಿಂದ ಬರುವ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ವಿಕಚೇತನ ಯೋಜನೆಗಳಿಗೆ ನಾಮನಿರ್ದೇಶನಗೊಂಡಿರುವವರು ಸಹ ಅಂಗವಿಕಲರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಅನುದಾನ ದುರ್ಬಳಕೆಯಾಗುತ್ತಿದೆ. ಕೂಡಲೇ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಡಿ. ಜಾಫರ್, ಮಹ್ಮದ ಅನ್ವರ್, ರಾಯಪ್ಪ, ನಾಗರಾಜ, ಹನುಮಯ್ಯ, ಅದೀಮ್ ಅಹ್ಮದ್ ಉಪಸ್ಥಿತರಿದ್ದರು.