ಪಹಣಿ ತಿದ್ದುಪಡಿ ಅರ್ಜಿ ಸಲ್ಲಿಸಿ ಸುಮಾರು ಐದು ವರ್ಷವಾದರೂ ಇನ್ನೂ ದಾಖಲೆ ತಿದ್ದುಪಡಿ ಮಾಡದೇ ಇರುವುದರಿಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ದಾಖಲೆಗಳನ್ನು ಕಾನೂನುಬದ್ಧವಾಗಿ ಸಲ್ಲಿಸಿದ್ದರೂ, ಹಣ ನೀಡದ ಕಾರಣದಿಂದ ಹಿಂಬರಹ ಬರೆದು ಉದ್ದೇಶಪೂರ್ವಕವಾಗಿ ಕೆಲಸಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಅಸಮಾಧಾನಗೊಂಡು ಪ್ರತಿಭಟನೆ ನಡೆಸಿದರು.
ಲಿಂಗಸೂಗೂರು ಸಹಾಯಕ ಆಯುಕ್ತರ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ರೈತರ ಹಕ್ಕಿನ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದು, ಲಂಚ ನೀಡದಿದ್ದಕ್ಕೆ ಅನ್ಯಾಯ ಮಾಡುವುದು ಸಂಪೂರ್ಣ ಅಸಮಂಜಸ. ತಕ್ಷಣ ಪಹಣಿ ತಿದ್ದುಪಡಿ ಮಾಡಿ ರೈತರ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಲಿಂಗಸುಗೂರು ತಾಲ್ಲೂಕು ಮುದಗಲ್ಲ ಹೋಬಳಿಯ ಭೂಪೂರ ಗ್ರಾಮದ ಮೂಲದ ಮಲ್ಲಿಕಾರ್ಜುನ, ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರ.ದ.ಸ. ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಕೆಲಸ ಮಾಡಿಕೊಡುವ ಪ್ರಕ್ರಿಯೆ ಮಾಡುತ್ತಿದ್ದಾರೆ ಕೂಡಲೇ ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ರೈತರು ಕಿಡಿಕಾರಿದರು.
ರೈತರು ಹಾಗೂ ಸಾಮಾನ್ಯ ಜನರು ಅರ್ಜಿಗಳು, ದಾಖಲೆ ತಿದ್ದುಪಡಿ ಸೇರಿದಂತೆ ಸರಕಾರಿ ಸೇವೆಗಳಿಗಾಗಿ ಕಚೇರಿಯನ್ನು ಸಂಪರ್ಕಿಸಿದಾಗ, ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ಕೆಲಸಗಳನ್ನು ಸುಗಮವಾಗಿ ಮುಗಿಸುತ್ತಿದ್ದಾರೆ. ಇವರ ಪ್ರಕ್ರಿಯೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು ಕೂಡಲೇ ಅಮಾನತು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪೋತ್ನಾಳ ಗ್ರಾಮಸ್ಥರಿಂದ ಮೂಲಸೌಕರ್ಯಕ್ಕಾಗಿ ಪ್ರತಿಭಟನೆ
ಈ ವೇಳೆ ಶಿವಪುತ್ರಗೌಡ ಪೊಲೀಸ್ ಪಾಟೀಲ್, ಆನಂದ ಕುಂಬಾರ, ದುರ್ಗಾಪ್ರಸಾದ, ಮಹಾಂತಗೌಡ, ಲಾಲಸಾಬ, ಮಹ್ಮದ ಖಾಜಾಸಾಬ, ಹನಮಂತ ಪೈದೊಡ್ಡಿ , ಭೀಮಣ್ಣ ಪೂಜಾರಿ, ಕರಿಯಪ್ಪ ಬಸಣ್ಣ ಚಲುವಾದಿ ಇನ್ನಿತರರು ಇದ್ದರು.