ರಾಜ್ಯದಲ್ಲಿ ಹಲವು ಕಡೆ ಉತ್ತಮ ಮಳೆಯಿಂದಾಗಿ ಎಲ್ಲ ಜಲಾಶಯಗಳು ನೀರಿನ ಕೊರತೆಯಾಗದಂತೆ ತುಂಬಿದೆ. ನೀರಾವರಿ ಪ್ರದೇಶದಲ್ಲಿ ಕೂಡ ತುಂಬಿದ್ದು, ಭತ್ತವನ್ನು ಈಗಾಗಲೇ ನಾಟಿಮಾಡಿದ್ದಾರೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ರಸಗೊಬ್ಬರ ತೆಗೆದುಕೊಳ್ಳಲಿಕ್ಕೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಎಪಿ, ಎನ್‌ಪಿಕೆ, ಯೂರಿಯಾ, ಪೊಟಾಷ್ ರಸಗೊಬ್ಬರ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗದೆ ಪರದಾಡಬೇಕಿದೆ. ಈಗಾಗಲೇ ಹಲವು ಕಡೆ ಬಿತ್ತನೆ ಮಾಡಿದ್ದಾರೆ. ಕೆಲ ವಾರಗಳಿಂದ ರಸಗೊಬ್ಬರ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ದುಬಾರಿ ಬೆಲೆ ತೆತ್ತು ಇತರೆ ಗೊಬ್ಬರ ಖರೀದಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಭರ್ಜರಿಯಾಗಿ ಸಾಗಿದ್ದು, ಹೆಚ್ಚಾಗಿ ರಸಗೊಬ್ಬರಕ್ಕೆ ಬೇಡಿಕೆಯಿದೆ. ರೈತರು ಮಳಿಗೆಗಳಲ್ಲಿ ಕ್ಯೂ ನಿಂತು ಸಿಕ್ಕಷ್ಟು ರಸಗೊಬ್ಬರ ಖರೀದಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ವಿವಿಧ ಕೃಷಿಗೆ ರಸಗೊಬ್ಬರ ಖರೀದಿ ಆರಂಭಗೊಂಡಿದ್ದು, ಅಗತ್ಯ ಪ್ರಮಾಣದ ಪೂರೈಕೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ ಎಂದು ಹೇಳಿದರು.
ಸಹಕಾರ ಸಂಘಗಳು, ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ರಸಗೊಬ್ಬರ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ನಿಗದಿ ಬೆಲೆಗಿಂತ ಅಧಿಕ ಮಾರಾಟ ವಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪ ಮಾಡಿದರು.
ಕೇಂದ್ರ ಸರ್ಕಾರ ನ್ಯಾನೋ ತಂತ್ರಜ್ಞಾನ ಪರಿಚಯಿಸಿದೆ. ಇದರ ಬಗ್ಗೆ ಕೃಷಿ ವಿಜ್ಞಾನಿಗಳು ರೈತರಿಗೆ ಮಾಹಿತಿಯನ್ನು ನೀಡಬೇಕು. ಸಂಸದರು ಸಂಸತ್ತಿನಲ್ಲಿ ರಸಗೊಬ್ಬರ ಬಗ್ಗೆ ಧ್ವನಿ ಪ್ರಸ್ತಾಪ ಮಾಡಬೇಕು. ಅದರ ಜೊತೆಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಬೇಕು. ರೈತರು ಪ್ರತಿ ಬಾರಿ ಬೀದಿಗಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ನೀರಾವರಿಯ ಉಪ ಕಾಲುವೆ ದುರಸ್ತಿ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾವು ಕಡಿತ 4 ವರ್ಷದ ಬಾಲಕಿ ಸಾವು
ಪತ್ರಿಕಾಗೋಷ್ಠಿಯಲ್ಲಿ ಹನುಮೇಶ ನಾಯಕ, ಪ್ರಭಾಕರ್ ಪಾಟೀಲ, ಶಂಕರ ಗೌಡ, ಬಸವರಾಜ ನವಲಕಲ್, ಬೂದಯ್ಯ ಸ್ವಾಮಿ ಉಪಸ್ಥಿತರಿದ್ದರು.
