ರಾಯಚೂರು | ಸ್ಮಶಾನವಿಲ್ಲದೆ ಮನೆ ಮುಂದೆಯೇ ಅಂತ್ಯಕ್ರಿಯೆ; ನಾಲ್ಕು ದಶಕಗಳ ಸಮಸ್ಯೆಗೆ ಪರಿಹಾರ ಯಾವಾಗ?

Date:

Advertisements

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಲಸೌಕರ್ಯಗಳಿಲ್ಲದಿರುವ ಪರಿಸ್ಥಿತಿ ಇದೆ. ಕೆಲವೆಡೆ ಸತ್ತಾಗ ಹೂಳೋಕೆ ಸ್ಮಶಾನವೂ ಇಲ್ಲದೆ ಮನೆಯ ಮುಂದೆಯೇ ಅಂತಿಮ ಸಂಸ್ಕಾರ ಮಾಡಿಕೊಳ್ಳಬೇಕಾಗ ದುಸ್ಥಿತಿ ಇದೆ. ಇದು ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ರಂಗಾಪುರ ಗ್ರಾಮದ ಚಿತ್ರಣ. ಸ್ಮಶಾನ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ಇಂದಿಗೂ ತಮ್ಮ ತಮ್ಮ ಮನೆಯ ಮುಂಭಾಗದಲ್ಲೇ ಅಂತ್ಯಕ್ರಿಯೆ ನೆರವೇಸಿಕೊಳ್ಳುತ್ತಾರೆ.

ನಿಗದಿತ ಸ್ಥಳವಿಲ್ಲದೆ ಮನೆಗಳ ಅಂಗಳದಲ್ಲೋ, ಕೃಷಿ ಜಮೀನಿನ ಅಂಚಿನಲ್ಲೋ ಅಂತ್ಯಕ್ರಿಯೆ ನೆರವೇರಿಸಿಕೊಂಡು ಬರುತ್ತಿರುವ ಪದ್ಧತಿ ಇಂದು ನಿನ್ನೆಯದಲ್ಲ. ಕಳೆದ ನಾಲ್ಕೈದು ದಶಕಗಳಿಂದಲೂ ಈ ಸಮಸ್ಯೆ ಇದ್ದು, ಇಂದಿಗೂ ಮುಂದುವರೆದಿರುವುದು ಅಲ್ಲಿನ ಗ್ರಾಮಸ್ಥರ ಅಸಹನೆ ಬಹುಮುಖ್ಯ ಕಾರಣವಾಗಿದೆ. ಎಲ್ಲೆಂದರಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಆರೋಗ್ಯದ ಜೊತೆಗೆ ಅಲ್ಲಿನ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಇದರಿಂದ ಮುಕ್ತಿ ಪಡೆಯಲು ಇನ್ನೂ ಎಷ್ಟು ವರ್ಷ ಕಾಯಬೇಕು ಎಂಬುದು ಅಲ್ಲಿನ ಅಮಾಯಕ ಜನರ ನ್ಯಾಯಬದ್ಧ ಪ್ರಶ್ನೆ.

ಮೃತರ ಅಂತ್ಯಸಂಸ್ಕಾರವನ್ನು ಮನೆಯ ಅಂಗಳದಲ್ಲೇ ಮಾಡುವುದರಿಂದ ಚಿಕ್ಕ ಮಕ್ಕಳ ಮನಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅವರಲ್ಲಿ ಭಯ, ಮೌಢ್ಯದಂತಹ ಬೇಡದ ಯೋಚನೆಗಳನ್ನು ತುಂಬಿ, ಅವರ ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಲವು ಬಾರಿ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ, ಮರಳಿ ಆಶ್ವಾಸನೆಯನ್ನು ಮಾತ್ರ ಪಡೆಯುತ್ತಿದ್ದೇವೆ. “ಭೂಮಿ ತೋರಿಸಿ ಕೊಡೋಣ” ಎನ್ನುತ್ತಾರಷ್ಟೇ, ವರ್ಷಗಳಾದರೂ ಆ ಆಶ್ವಾಸನೆ ಕಾರ್ಯರೂಪಕ್ಕೆ ಬರುವುದಿಲ್ಲ.

ಈ ಬಗ್ಗೆ ಗ್ರಾಮದ ನಿವಾಸಿ ಖಾಜಾಬಾನು ಮಾತನಾಡಿ, “ಸ್ಮಶಾನದ ಅಭಾವದಿಂದಾಗಿ ಮನೆಯ ಮುಂದೆಯೇ ಅಂತ್ಯಕ್ರಿಯೆಗಳು ನಡೆಯುತ್ತಿವೆ. ದಶಕಗಳಿಂದಲೂ ಮುಂದುವರೆದಿರುವ ಈ ದುರಾವಸ್ಥೆಯು ಸ್ಥಳೀಯರ ಜೀವನವನ್ನು ತೀವ್ರವಾಗಿ ಪ್ರಭಾವಿಸಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ದಶಕದಿಂದಲೂ ಸ್ಮಶಾನ ಭೂಮಿಯನ್ನು ನಿರ್ಮಾಣ ಮಾಡುವ ಭರವಸೆ ನೀಡಿದರೂ, ಇಂದಿಗೂ ಯಾವುದೇ ಪ್ರಗತಿ ಕಂಡಿಲ್ಲ. ಇದರಿಂದಾಗಿ, ಮರಣಿಸಿದವರ ಶವಗಳನ್ನು ಮನೆಯ ಮುಂದಿನ ರಸ್ತೆಯಲ್ಲಿ ಅಥವಾ ಖಾಲಿ ಜಾಗದಲ್ಲಿ ದಹಿಸುವುದು ನಮಗೆಲ್ಲರಿಗೂ ಕಷ್ಟವಾಗಿದೆ. ಅಲ್ಲದೆ ಇದು ನಮ್ಮ ಧರ್ಮಕ್ಕೂ ವಿರುದ್ಧ, ಆರೋಗ್ಯಕ್ಕೂ ಧಕ್ಕೆ ತರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಮುಸ್ಲಿಂ ಮುಖಂಡ ಅಮ್ಜದ್ ಮಾತನಾಡಿ, “ಗ್ರಾಮದಲ್ಲಿ 30 ಕ್ಕೂ ಹೆಚ್ಚು ಕುಟುಂಬಗಳಿವೆ. ಕಳೆದ ಐದು ವರ್ಷಗಳಲ್ಲಿ 20 ಕ್ಕೂ ಹೆಚ್ಚು ಅಂತ್ಯಕ್ರಿಯೆಗಳು ಮನೆಯ ಮುಂದೆ ನಡೆದಿವೆ ಎಂದು ಸ್ಥಳೀಯ ಪಂಚಾಯಿತಿ ದಾಖಲೆಗಳು ತೋರುತ್ತವೆ. ಈ ಸಮಸ್ಯೆಯು ಮಾತ್ರವಲ್ಲ, ಸಾಂಸ್ಕೃತಿಕವಾಗಿ ಸೂಕ್ಷ್ಮವಾಗಿದ್ದು, ಹೆಣ್ಣು ಮಕ್ಕಳು ಮತ್ತು ವಯೋವೃದ್ಧರಿಗೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಇದ್ದರೆ ಶವವನ್ನು ದಹಿಸುವುದು ಕಷ್ಟ. ಸ್ಥಳೀಯರಲ್ಲಿ ಭಯ ಮತ್ತು ಅನಾರೋಗ್ಯ ಹೆಚ್ಚಾಗುತ್ತಿದೆ. ಈ ದುರಾವಸ್ಥೆ ದಶಕಗಳಿಂದ ಮುಂದುವರಿದಿದ್ದು, ಸ್ಮಶಾನ ಭೂಮಿ ಒದಗಿಸದಿದ್ದರೆ ಚಳವಳಿ ಆರಂಭಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಮ್ಮ ಊರಿಗೆ ಸ್ಮಶಾನವೇ ಇಲ್ಲ. ಬದುಕಿದರೂ ಸತ್ತಂತೆ ಆಗಿದೆ. ಮನೆಗೆ ಯಾರೂ ಬರೋದಿಲ್ಲ, ನಾವು ಯಾರ ಮನೆಗೂ ಹೋಗೋದಿಲ್ಲ. ಸ್ಮಶಾನದ ಕೊರತೆಯಿಂದಾಗಿ ಗ್ರಾಮದಲ್ಲಿ ಮನೆಯ ಮುಂದೆಯೇ ಅಂತ್ಯಕ್ರಿಯೆ ನಡೆಸುವ ದುರಾವಸ್ಥೆ ಇದೆ. ಇಲ್ಲಿನ ಮಹಿಳೆಯರ ಜೀವನವನ್ನು ತೀವ್ರವಾಗಿ ಪ್ರಭಾವಿಸಿದೆ. ತಮ್ಮ ಕುಟುಂಬದ ದುಃಖವನ್ನು ಹಂಚಿಕೊಳ್ಳುತ್ತಾ, ನಮ್ಮ ತಂದೆಯ ಅಂತ್ಯಕ್ರಿಯೆಯನ್ನು ಮನೆಯ ರಸ್ತೆಯಲ್ಲೇ ಮಾಡಬೇಕಾಯಿತು. ಮಕ್ಕಳ ಮುಂದೆ, ಇಡೀ ಊರಿನವರ ಕಣ್ಣ ಮುಂದೆ ಇದನ್ನು ಮಾಡುವಾಗ ಎಷ್ಟು ನಾಚಿಕೆ, ದುಃಖ ಆಗಿತ್ತು ಹೇಳಲಾಗದು” ಎಂದು ಕಣ್ಣೀರಿಟ್ಟರು.

ಗ್ರಾಮದ ಇತರ ಮಹಿಳೆಯರೂ ಇದೇ ಗೋಳನ್ನು ಹೇಳುತ್ತಾರೆ. ಸಾಮಾಜಿಕ ಕಾರ್ಯಕ್ರಮಗಳಿಗೆ ಯಾರೂ ನಮ್ಮ ಮನೆಗೆ ಬರೋದಿಲ್ಲ. ನಮ್ಮ ಮಕ್ಕಳಿಗೆ ಮದುವೆ ಸಂಬಂಧ ಕಷ್ಟವಾಗುತ್ತಿದೆ. ಈ ದುರವಸ್ಥೆಯಿಂದಾಗಿ ಸಮಾಜದಿಂದ ಬೇರ್ಪಟ್ಟಂತಾಗಿದೆ ಗ್ರಾಮದಲ್ಲಿ ಸ್ಮಶಾನಕ್ಕಾಗಿ ದಶಕಗಳಿಂದ ಕಾಯುತ್ತಿರುವ ಜನರಿಗೆ, ಈ ಸಮಸ್ಯೆ ಕೇವಲ ಆರೋಗ್ಯದ ದೃಷ್ಟಿಯಿಂದಲ್ಲ, ಸಾಮಾಜಿಕ ಮತ್ತು ಭಾವನಾತ್ಮಕವಾಗಿಯೂ ಗಾಯವಾಗಿದೆ. ನಾವು ಪಂಚಾಯಿತಿಗೆ, ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಕ್ರಮವಿಲ್ಲ. ಇದೀಗ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಿದ್ದೇವೆ. ರಾಜ್ಯದ ಹಲವು ಗ್ರಾಮೀಣ ಭಾಗಗಳಲ್ಲಿ ಇಂತಹ ದುರಾವಸ್ಥೆ ಕಂಡುಬರುತ್ತಿದೆ. “ಸರ್ಕಾರ ಗ್ರಾಮೀಣ ಜನರಿಗೆ ಮೂಲ ಸೌಕರ್ಯ ಕೊಡದಿದ್ದರೆ, ನಾವು ಯಾವ ಗೌರವದಿಂದ ಬದುಕಬೇಕು? ಈ ಗೋಳು, ಸರ್ಕಾರದ ಗಮನಕ್ಕೆ ಬಂದು ಪರಿಹಾರ ಸಿಕ್ಕರೆ ಅಷ್ಟೇ ಸಾಕು” ಎಂದರು.

ಇದನ್ನೂ ಓದಿ: ರಾಯಚೂರು | ಒಂದೇ ಮನೆಗೆ ಮೂರು ಬಾರಿ ಜಿಪಿಎಸ್ : ರೈತ ಸಂಘಟನೆಯಿಂದ ಪ್ರತಿಭಟನೆ

ಸ್ಥಳೀಯ ನಿವಾಸಿ ವಿರುಪಮಾ ಮಾತನಾಡಿ, “ಸುಮಾರು 40 ವರ್ಷಗಳಿಂದ ಅವರವರ ಮನೆಯ ಮುಂದೇನೆ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದಾರೆ. ಇಂತಹ ದುರಾವಸ್ಥೆಯು ರಾಜಕೀಯ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲವೇ? ಜನಪ್ರತಿನಿಧಿಗಳು ಅವರ ಮನೆಯ ಮುಂದೆ ಶವವನ್ನು ಹೂಳಲಿ ಪ್ರಭಾವ ಏನು ಬೀಳುತ್ತೆ ಎಂದು ಗೊತ್ತಾಗುತ್ತೆ. ಮುಂದೆ ಗ್ರಾಮದಲ್ಲಿ ಸಾವಾದರೆ ತಹಶೀಲ್ದಾರ್ ಕಚೇರಿ ಮುಂದೆ ಶವವನಿಟ್ಟು ಪ್ರತಿಭಟನೆ ಮಾಡಲಾಗುವುದು ಇಲ್ಲದಿದ್ದರೆ ಕಚೇರಿ ಅಂಗಳದಲ್ಲಿ ಅಂತ್ಯಕ್ರಿಯೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

Download Eedina App Android / iOS

X