ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ ಯುವಕನೊಬ್ಬ ದುರ್ಘಟನಾತ್ಮಕವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೃತನನ್ನು ಗ್ರಾಮಸ್ಥ ನರಸಿಂಹಲು (22) ಎಂದು ಗುರುತಿಸಲಾಗಿದೆ. ಗಣೇಶೋತ್ಸವದ ಅಂಗವಾಗಿ ಯುವಕರು ಸೇರಿಕೊಂಡು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ವಿಸರ್ಜನೆಗಾಗಿ ಸಮೀಪದ ಇರಾಪುರ ಕ್ರಾಸ್ ಕಾಲುವೆಯತ್ತ ಪಿಕಪ್ ವಾಹನದಲ್ಲಿ ಮೂರ್ತಿಯನ್ನು ಸಾಗಿಸುತ್ತಿದ್ದರು.
ವಾಹನದಲ್ಲಿ ಇರಿಸಿದ್ದ ಮೂರ್ತಿಯನ್ನು ಮೂವರಿಂದ ನಾಲ್ವರ ವರೆಗೆ ಯುವಕರು ಹಿಡಿದುಕೊಂಡಿದ್ದರು. ಈ ವೇಳೆ ಮೂರ್ತಿ ವಿದ್ಯುತ್ ಕಂಬಕ್ಕೆ ತಗುಲಿದ ಪರಿಣಾಮ ನರಸಿಂಹ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದವರು ಶಾಕ್ ಹೊಡೆದ ತಕ್ಷಣ ವಾಹನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪತಿ ಕೈಯಿಂದ ಪತ್ನಿ ಕೊಲೆ
ಈ ಘಟನೆ ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
