ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ್ದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೂಲಿಕಾರ್ಮಿಕರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೇಲಿ ಹಾಕಿದ ಘಟನೆ ಶನಿವಾರ ಮಾನ್ವಿ ತಾಲ್ಲೂಕಿನ ಸುಂಕೇಶ್ವರ ಗ್ರಾಮದಲ್ಲಿ ಜರುಗಿದೆ.
ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆ ಕಾಮಗಾರಿಗೆ ಕೆಲಸ ಮಾಡಿದ್ದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ಅಧಿಕಾರಿಗಳು ನಿರಾಕರಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ.
ಶನಿವಾರ ಮತ್ತೆ ಅದೇ ನಾಲಾ ಹೂಳೆತ್ತುವ ಕಾಮಗಾರಿಗೆ ಕೆಲಸ ಮಾಡಲು ಬರುವಂತೆ ಅಧಿಕಾರಿಗಳು ಕೂಲಿಕಾರ್ಮಿಕರಿಗೆ ಹೇಳಿದ್ದರು. ಆದರೆ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತಿತರ ಸಿಬ್ಬಂದಿ ಗೈರಾಗಿದ್ದರು. ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಮೂರ್ನಾಲ್ಕು ತಾಸು ಕಾದು ಕುಳಿತ ಕೂಲಿಕಾರ್ಮಿಕರು ಅಸಮಾಧಾನಗೊಂಡಿದ್ದಾರೆ.ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿ ಕೆಲಹೊತ್ತು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಯಾವುದೇ ಅಧಿಕಾರಿ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಗ್ರಾಮ ಪಂಚಾಯಿತಿ ಕಚೇರಿಗೆ ಬೇಲಿ ಹಾಕಿದರು ಎಂದು ಪ್ರತ್ಯೇಕದರ್ಶಿಗಳು ತಿಳಿಸಿದ್ದಾರೆ.ಈ ಹಿಂದೆ ಮಾಡಿದ್ದ ಕೆಲಸಕ್ಕೆ ಕೂಲಿಕಾರ್ಮಿಕರಿಗೆ ಕೂಲಿ ಹಣ ನೀಡಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರಿನ ಟೈರ್ ಬ್ಲಾಸ್ಟ್ ಸ್ಥಳದಲ್ಲಿಯೇ ಓರ್ವ ಯುವಕ ಸಾವು; ಓರ್ವ ಗಾಯ
ಘಟನೆ ಕುರಿತು ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಭೂಷಣ ಕಾಂಬ್ಳೆ, ‘ ವೈಯಕ್ತಿಕ ಕೆಲಸ ನಿಮಿತ್ತ ನಾನು ಬೇರೆ ಊರಿಗೆ ಬಂದಿರುವೆ. ನೈಜ ಕೂಲಿಕಾರ್ಮಿಕರಿಗೆ ಮಾತ್ರ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮತ್ತು ಕೂಲಿ ಹಣ ಪಾವತಿಸುವ ಬಗ್ಗೆ ಕೂಲಿಕಾರ್ಮಿಕರಿಗೆ ತಿಳಿಸಲಾಗಿತ್ತು. ಕೂಲಿಕಾರ್ಮಿಕರ ಹೆಸರಿನಲ್ಲಿ ಬೇರೆಯವರಿಗೆ ಹಣ ಪಾವತಿಸಲು ನಿರಾಕರಿಸಿದ ಕಾರಣ ಇಂದಿನ ಘಟನೆ ನಡೆದಿದೆ’ ಎಂದು ತಿಳಿಸಿದರು.

