ಎಸ್‌ಡಿಪಿಐ ಕೇವಲ ರಾಜಕೀಯ ಪಕ್ಷವಲ್ಲ, ಇದು ಶೋಷಿತರ ಕೂಗಿನ ಪ್ರತಿಧ್ವನಿ, ಸಾಮಾನ್ಯ ಜನರ ಕನಸುಗಳ ಪ್ರತೀಕ ಎಂದು ಎಸ್ ಡಿಪಿಐ ಪಕ್ಷದ ರಾಜ್ಯ ಮುಖಂಡರಾದ ಅಪ್ಸರ್ ಕೂಡ್ಲಿಪೇಟೆ ಹೇಳಿದರು.
ಲಿಂಗಸೂಗೂರು ತಾಲ್ಲೂಕು ಮುದಗಲ್ ಪಟ್ಟಣದ ಶಾದಿಮಹಲ್‌ನಲ್ಲಿ ನಡೆದ ನಾಯಕರ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಶೋಷಿತ ಜನರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಬಡವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ನೊಂದ ಜನರ ಹಕ್ಕುಗಳಿಗಾಗಿ ನಮ್ಮ ಕಾರ್ಯಕರ್ತರು ಪೊಲೀಸ್ ದೌರ್ಜನ್ಯ, ಸುಳ್ಳು ಕೇಸುಗಳು ಮತ್ತು ಬಂಧನಗಳನ್ನು ಎದುರಿಸುತ್ತಿದ್ದರೂ ಹೋರಾಟವನ್ನು ನಿಲ್ಲಿಸಿಲ್ಲ. ಹೋರಾಟವೇ ನಮ್ಮ ಬದ್ಧತೆಯ ನಿಜವಾದ ಸಾಕ್ಷಿ ಎಂದು ಸ್ಪಷ್ಟಪಡಿಸಿದರು.
ಬದಲಾವಣೆಯ ಹಾದಿ ದೀರ್ಘ ಮತ್ತು ಕಠಿಣವಾದದ್ದಾಗಿದ್ದರೂ ಇದು ಪ್ರತಿಯೊಬ್ಬರ ಜವಾಬ್ದಾರಿ. ನ್ಯಾಯ, ಸಮಾನತೆ ಮತ್ತು ಸಹೋದರತ್ವವನ್ನು ಸ್ಥಾಪಿಸಲು ನಂಬಿಕೆ, ಶ್ರಮ ಮತ್ತು ಬದ್ಧತೆ ಅಗತ್ಯ. ನಮ್ಮ ಸದಸ್ಯರು ತಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಸಮಾಜಮುಖಿ ಹೋರಾಟಗಳಿಗೆ ಸಮರ್ಪಿಸಬೇಕು. ಸಮಾಜದಲ್ಲಿ ಬದಲಾವಣೆಯನ್ನು ತರಲು ಕೇವಲ ಕನಸು ಕಾಣುವುದರಿಂದ ಪ್ರಯೋಜನ ಇಲ್ಲ, ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಿದಾಗ ಮಾತ್ರ ಬದಲಾವಣೆ ಸಾಧ್ಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಕಳ್ಳತನ ಪ್ರಕರಣ ; ನಾಲ್ವರಿಗೆ 10 ವರ್ಷ ಜೈಲು ಶಿಕ್ಷೆ
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಾಷ ಕಡ್ಡಿಪುಡಿ, ಪ್ರಧಾನ ಕಾರ್ಯದರ್ಶಿ ಮೀರ್ ಅಲಿ, ಜಿಲ್ಲಾ ಸಮಿತಿ ಸದಸ್ಯರು ಮತ್ತು ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
