ಗ್ರಾಮಾಂತರ ಪ್ರದೇಶದ ಹಲವಾರು ಹಿರಿಯರು ವಯಸ್ಸಾದ ಕಾರಣದಿಂದ ದೂರ ಪ್ರಯಾಣಿಸಲು ಆಗದೆ, ಕುಟುಂಬದ ಖರ್ಚು ನಿರ್ವಹಣೆಗೆ ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ಚರಕ ಕಲಿಯುವ ಪ್ರಯತ್ನ ಲಿಂಗಸೂಗೂರು ತಾಲ್ಲೂಕು ಚಿಕ್ಕಹೆಸರೂರು ಗ್ರಾಮದ ಹೊರವಲಯದ ಹಂಚಿಕೆ ಕೇಂದ್ರದಲ್ಲಿ ಶುರುವಾಗಿದೆ.
ಈ ಪ್ರಯೋಗದ ಮೂಲಕ ಹಿರಿಯರು ತಮ್ಮ ಮನೆಯಲ್ಲೇ ಕೂತು ಚರಕದಲ್ಲಿ ಹತ್ತಿ ಕಟ್ಟಿ, ಅದರಿಂದ ದಾರ ನುಲಿಯಬಹುದು. ವಯಸ್ಸಾದವರ ಕೈಚಳಕದಿಂದ ಇದೊಂದು ಹೊಸ ಪ್ರಯೋಗ ಜಿಲ್ಲೆಯಲ್ಲಿ ತರಬೇತಿ ಕ್ರಿಯೆ ಪ್ರಾರಂಭಗೊಂಡಿದೆ.
ವಯಸ್ಸಾದವರು ಹಾಗೂ ಅಂಗವಿಕಲರು ಈಗ ಕೃಷಿಯಲ್ಲಿ ಶ್ರಮಿಸಲು ಅಸಮರ್ಥರಾಗಿದ್ದಾರೆ. ಆದರೂ ತಮ್ಮ ಶ್ರಮವನ್ನು ವ್ಯರ್ಥವಾಗದಂತೆ ಮಾಡುವ ನಿಟ್ಟಿನಲ್ಲಿ ಚರಕವು ಹೊಸ ಆಶಾಕಿರಣವಾಗಿದೆ. ಇದರಿಂದ, ಹಿರಿಯರಿಗೆ ಮನೆಯಲ್ಲೇ ಕೆಲಸ, ಆದಾಯ ಹಾಗೂ ಜೀವನದಲ್ಲಿ ಆತ್ಮವಿಶ್ವಾಸ ಮುರುಗು ಸಹಾಯವಾಗುತ್ತಿದೆ.

ಈ ತರಬೇತಿಯ ಬಗ್ಗೆ ರಾಜ್ಯ ಮಹಿಳಾ ಒಕ್ಕೂಟ ಅಧ್ಯಕ್ಷೆ ವಿದ್ಯಾ ಪಾಟೀಲ್ ಮಾತನಾಡಿ, ರಾಜ್ಯ ಮಹಿಳಾ ಒಕ್ಕೂಟ ರಾಯಚೂರು ಘಟಕದ ವತಿಯಿಂದ ಸಮಾಜದ ಅಂಚಿನಲ್ಲಿರುವ ದೇವದಾಸಿ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳು ನೋಡದೆ ಊಟಕ್ಕಾಗಿ ಪರದಾಡುತ್ತಿರುವ ತಾಯಂದಿರ ಜೀವನದಲ್ಲಿ ತೊಂದರೆ ತಗ್ಗಿಸಲು ಮಹತ್ವದ ಹೆಜ್ಜೆ ಇಡಲಾಗಿದೆ.
ಇದಕ್ಕಾಗಿ ಮಹಿಳೆಯರ ಮೂಲವನ್ನು ಬಲಪಡಿಸುವ ಉದ್ದೇಶದಿಂದ ನೂಲಿನಿಂದ ದಾರ ತಯಾರಿಸುವ ಚರಕ ಕಾರ್ಯದಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಮೂಲಕ ಸ್ವಾವಲಂಬನೆ ಸಾಧಿಸಲು ಅವಕಾಶ ಒದಗಿಸಲಾಗುತ್ತಿದ್ದು, ಕುಟುಂಬಕ್ಕೆ ಆರ್ಥಿಕ ನೆರವು ದೊರಕುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಕಾರ್ಯಕ್ರಮದಿಂದ ಸಮಾಜದ ನಿರ್ಲಕ್ಷಿತ ವರ್ಗದ ಮಹಿಳೆಯರು ತಮಗೆ ತಾವು ನಿಲ್ಲುವ ಶಕ್ತಿ ಪಡೆದು, ಬದುಕಿನ ಹಾದಿಯಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸುಮಾರು 20 ಮಹಿಳೆಯರು ಪ್ರಾಯೋಗಿಕ ಕಲಿಕೆಯನ್ನು ಶುರು ಮಾಡಿದ್ದಾರೆ. ಹಸ್ತಕಲಾ ಉದ್ಯಮಕ್ಕೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಿದ್ದು, ಸ್ವಾವಲಂಬನೆಯತ್ತ ಯುವಕರು ಹೆಜ್ಜೆ ಇಡುವುದಕ್ಕೆ ಈ ತರಬೇತಿ ಸಹಾಯಕವಾಗಲಿದೆ. ಈ ತರಬೇತಿಯಲ್ಲಿ ನೂಲು ಸಿದ್ಧತೆ, ದಾರ ತಿರುಗಿಸುವ ವಿಧಾನ, ಗುಣಮಟ್ಟ ಕಾಪಾಡುವ ತಂತ್ರಗಳು ಸೇರಿದಂತೆ ಪ್ರಾಯೋಗಿಕ ಪಾಠಗಳನ್ನು ನೀಡಲಾಗುತ್ತದೆ ಎಂದರು.

ತರಬೇತಿ ಪಡೆದ ರತ್ನಮ್ಮ ತಮ್ಮ ಭಾವನೆ ಹಂಚಿಕೊಂಡು, “ನಾವು ವಯಸ್ಸಾದಾಗ ಯಾವುದೇ ಆದಾಯ ಇರುವುದಿಲ್ಲ. ಪ್ರತಿದಿನ ಬೆಲೆ ಏರಿಕೆ ಹೆಚ್ಚುತ್ತಿರುವ ಈ ಕಾಲದಲ್ಲಿ ಮಕ್ಕಳು ಸಹ ನೋಡದಿದ್ದರೆ ಬದುಕು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಚರಕ ತರಬೇತಿ ನಮಗೆ ಆದಾಯದ ಒಂದು ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.
ತರಬೇತಿ ಸಚ್ಚಿದಾನಂದ ಮೈಸೂರು ಅವರು ಕಳೆದ ಆರು ವರ್ಷಗಳಿಂದ ನುಲಿ ಚರಕವನ್ನು ತಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದಾರೆ. ಕೈಗಾರಿಕಾ ಯುಗದಲ್ಲೂ ಕೈಚರಕದ ಮಹತ್ವವನ್ನು ಜೀವಂತವಾಗಿಟ್ಟುಕೊಳ್ಳುವ ದೃಷ್ಟಿಯಿಂದ ಅವರು ಈ ಪಥವನ್ನು ಆರಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗ್ಯಾರಂಟಿ ಯೋಜನೆ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಬೇಡಿ – ಪಾಮಯ್ಯ ಮುರಾರಿ
ಸಚ್ಚಿದಾನಂದ ಅವರ ಮಾತುಗಳಲ್ಲಿ, “ಚರಕದಲ್ಲಿ ನೂಲಾಡುವುದು ಕೇವಲ ಉದ್ಯೋಗವಲ್ಲ, ಅದು ಆತ್ಮಸಾಕ್ಷಾತ್ಕಾರದ ಮಾರ್ಗ, ನಮ್ಮ ಸಂಸ್ಕೃತಿ, ನಮ್ಮ ಹೋರಾಟ, ನಮ್ಮ ಸ್ವಾವಲಂಬನೆ ಎಂದು ಹೇಳಿದ್ದಾರೆ.

