ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಟಿಕೆಟ್ಗಾಗಿ ತೆರೆಮರೆಯ ಕಸರತ್ತು ಜೋರಾಗಿದೆ. ಇದರ ನಡುವೆ, ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆಯೇ ಅಥವಾ ನಾಯಕರ ಆಪ್ತರು, ಕುಟುಂಬದ ಸದಸ್ಯರು ಮತ್ತು ಹಣಬಲ ಹೊಂದಿರುವವರಿಗೆ ಮಣೆ ಹಾಕಲಾಗುತ್ತದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದಿದೆ.
ಜಿಲ್ಲೆಯ 39 ಜಿಲ್ಲಾ ಪಂಚಾಯಿತಿ ಮತ್ತು 133 ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವ ಆಕಾಂಕ್ಷಿಗಳು ಈಗಿನಿಂದಲೇ ತಮ್ಮ ಕ್ಷೇತ್ರಗಳ್ಲಲಿ ಜನಸಂಪರ್ಕ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಬಿದ್ದಿದ್ದಾರೆ. ಸ್ಥಳೀಯ ಶಾಸಕರು ಮತ್ತು ಪ್ರಮುಖ ನಾಯಕರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿರುವ ಆಕಾಂಕ್ಷಿಗಳು, ಕ್ಷೇತ್ರದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಗುರುತಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಒತ್ತು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಅಬ್ಬರ:
ಚುನಾವಣೆಗೆ ಇನ್ನೂ ಅಧಿಕೃತ ಅಧಿಸೂಚನೆ ಹೊರಬೀಳದಿದ್ದರೂ, ಆಕಾಂಕ್ಷಿಗಳ ಪ್ರಚಾರದ ಭರಾಟೆ ಮಾತ್ರ ಈಗಾಗಲೇ ಆರಂಭವಾಗಿದೆ. ಫೇಸ್ಬುಕ್, ವಾಟ್ಸ್ಆಪ್, ಇನ್ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಸಂದೇಶಗಳು, ಜನಸೇವೆಯ ಭರವಸೆಗಳು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪೋಸ್ಟರ್ಗಳು ಹರಿದಾಡುತ್ತಿವೆ.
ವಿಶೇಷವೆಂದರೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಆಕರ್ಷಕ ಪೋಸ್ಟರ್ಗಳನ್ನು ಸಿದ್ಧಪಡಿಸಿ, ವಿವಿಧ ಸಾಮಾಜಿಕ ಜಾಲತಾಣಗಳ ಪೇಜ್ಗಳು ಹಾಗೂ ವಾಟ್ಸ್ಆಪ್ ಗುಂಪುಗಳಲ್ಲಿ ಹಂಚಿಕೊಳ್ಳುವ ಮೂಲಕ ಡಿಜಿಟಲ್ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೆಲವರು ತಮ್ಮ ಜನಸೇವೆಯ ಕಾರ್ಯಗಳನ್ನು ಬಿಂಬಿಸುತ್ತಿದ್ದರೆ, ಇನ್ನೂ ಕೆಲವರು ಶುಭಾಶಯಗಳ ಹೆಸರಿನಲ್ಲಿ ಕ್ಷೇತ್ರದ ಜನರಿಗೆ ನಿರಂತರವಾಗಿ ಸಂದೇಶ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಪ್ರಚಾರಕ್ಕೂ ಕ್ಷೇತ್ರದಲ್ಲಿ ನಿಜವಾಗಿ ಜನರೊಂದಿಗೆ ಹೊಂದಿರುವ ಸಂಪರ್ಕಕ್ಕೂ ವ್ಯತ್ಯಾಸವಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಆನ್ಲೈನ್ ಪ್ರಚಾರದ ಆರ್ಭಟ ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಎಂಬುದು ಚುನಾವಣೆಯ ಸಂದರ್ಭದಲ್ಲಿ ಸ್ಪಷ್ಟವಾಗಲಿದೆ.
ನಾಯಕರ ಮನೆಬಾಗಿಲಿಗೆ ಆಕಾಂಕ್ಷಿಗಳ ದೌಡು:
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಚೇರಿಗಳು ಹಾಗೂ ಪ್ರಮುಖ ನಾಯಕರ ನಿವಾಸಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಓಡಾಟ ಹೆಚ್ಚಾಗಿದೆ. ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ತಮ್ಮ ರಾಜಕೀಯ ಹಿನ್ನೆಲೆ, ಕ್ಷೇತ್ರದಲ್ಲಿನ ಜನಬೆಂಬಲ ಹಾಗೂ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ವಿವರಿಸುವ ಮೂಲಕ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಸ್ಥಳೀಯ ಶಾಸಕರ ಆಪ್ತರು, ಹಿಂಬಾಲಕರು ಹಾಗೂ ರಾಜಕೀಯ ಕುಟುಂಬಗಳಿಗೆ ಸೇರಿದವರು ಟಿಕೆಟ್ಗಾಗಿ ಪ್ರಯತ್ನಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಆರ್ಥಿಕವಾಗಿ ಪ್ರಬಲರಾಗಿರುವ ಕೆಲವರು ಸಮಾಜಸೇವೆ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ತಮ್ಮ ಪ್ರಭಾವ ವಿಸ್ತರಿಸಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ, ಪಕ್ಷದ ಸಂಘಟನೆಗಾಗಿ ಹಲವು ವರ್ಷಗಳಿಂದ ದುಡಿದಿರುವ ಮೂಲ ಕಾರ್ಯಕರ್ತರಲ್ಲಿ ಟಿಕೆಟ್ ಕೈತಪ್ಪುವ ಆತಂಕವೂ ಮನೆಮಾಡಿದೆ. ಚುನಾವಣೆಯ ಸಮಯದಲ್ಲಿ ಮಾತ್ರ ಸಕ್ರಿಯರಾಗುವವರಿಗೆ ಆದ್ಯತೆ ನೀಡಿದರೆ, ನಿರಂತರವಾಗಿ ಪಕ್ಷಕ್ಕಾಗಿ ಶ್ರಮಿಸಿದ ತಮ್ಮ ಸೇವೆಗೆ ಬೆಲೆ ಸಿಗುವುದಿಲ್ಲ ಎಂಬ ಅಸಮಾಧಾನ ಅವರಲ್ಲಿದೆ.
ಪಕ್ಷದ ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ಏನು ಎಂಬ ಬಗ್ಗೆಯೂ ಕೆಲವರು ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ. ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮೀಸಲಾತಿ ಬದಲಾವಣೆ; ಆಕಾಂಕ್ಷಿಗಳ ಲೆಕ್ಕಾಚಾರಕ್ಕೆ ಹೊಡೆತ:
ಕ್ಷೇತ್ರವಾರು ಮೀಸಲಾತಿ ಬದಲಾವಣೆಯು ಚುನಾವಣೆಗೆ ಸಿದ್ಧತೆ ನಡೆಸಿದ್ದ ಅನೇಕ ಆಕಾಂಕ್ಷಿಗಳ ಲೆಕ್ಕಾಚಾರವನ್ನು ಬದಲಿಸಿದೆ. ತಾವು ಸ್ಪರ್ಧಿಸಲು ಉದ್ದೇಶಿಸಿದ್ದ ಕ್ಷೇತ್ರದಲ್ಲಿ ಮೀಸಲಾತಿ ಬದಲಾವಣೆಯಾಗಿರುವುದರಿಂದ ಕೆಲವರು ಪರ್ಯಾಯ ಕ್ಷೇತ್ರಗಳತ್ತ ಗಮನಹರಿಸುತ್ತಿದ್ದರೆ, ಇನ್ನು ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ.
ಮಹಿಳೆಯರಿಗೆ ಶೇ.50ರಷ್ಟು ಪ್ರಾತಿನಿಧ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಆಕಾಂಕ್ಷಿಗಳಿಗೂ ಅವಕಾಶಗಳು ಹೆಚ್ಚಿವೆ. ಆದರೆ, ಮೀಸಲಾತಿ ಮಹಿಳೆಯರಿಗೆ ಅನುಕೂಲವಾಗಿರುವ ಕ್ಷೇತ್ರಗಳಲ್ಲಿ ಪಕ್ಷಗಳು ಸ್ವತಂತ್ರವಾಗಿ ಗುರುತಿಸಿಕೊಂಡಿರುವ ಮಹಿಳಾ ಮುಖಂಡರಿಗೆ ಅವಕಾಶ ನೀಡುತ್ತವೆಯೇ ಅಥವಾ ರಾಜಕೀಯ ನಾಯಕರ ಕುಟುಂಬದ ಮಹಿಳೆಯರಿಗೆ ಆದ್ಯತೆ ನೀಡುತ್ತವೆಯೇ ಎಂಬ ಕುತೂಹಲವೂ ಮೂಡಿದೆ.
ಕರಡು ಮೀಸಲಾತಿಯಿಂದ ಅಸಮಾಧಾನಗೊಂಡಿರುವ ಕೆಲವು ಮುಖಂಡರು ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ದೇವದುರ್ಗ ತಾಲೂಕು ಜಾಲಹಳ್ಳಿ ಕ್ಷೇತ್ರದಲ್ಲಿ ಕಳೆದ ಎರಡ್ಮೂರು ದಶಕಗಳಿಂದ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ. ಈ ಕುರಿತು ಸಲ್ಲಿಕೆಯಾಗಿರುವ ಮನವಿಗಳ ಬಗ್ಗೆ ಅಂತಿಮ ನಿರ್ಧಾರ ಏನಾಗಲಿದೆ ಎಂಬುದರ ಮೇಲೆ ಸ್ಥಳೀಯ ರಾಜಕೀಯ ಲೆಕ್ಕಾಚಾರವೂ ಅವಲಂಬಿತವಾಗಿದೆ.
ಆಕ್ಷೇಪಣೆಗಳ ವಿಲೇವಾರಿ ಬಳಿಕ ಪ್ರಕಟವಾಗುವ ಅಂತಿಮ ಮೀಸಲಾತಿ ಪಟ್ಟಿ ಚುನಾವಣಾ ಸ್ಪರ್ಧೆಯ ಚಿತ್ರಣವನ್ನು ಇನ್ನಷ್ಟು ಸ್ಪಷ್ಟಪಡಿಸಲಿದೆ.
ನಿಷ್ಠಾವಂತರಿಗೆ ಮನ್ನಣೆಯೋ, ಹಣಬಲಕ್ಕೆ ಆದ್ಯತೆಯೋ?
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಹಲವು ವರ್ಷಗಳ ಬಳಿಕ ನಡೆಯಲಿರುವ ಹಿನ್ನೆಲೆಯಲ್ಲಿ, ಕಳೆದ ಏಳೆಂಟು ವರ್ಷಗಳಿಂದ ವಿವಿಧ ಪಕ್ಷಗಳ ಕಾರ್ಯಕರ್ತರು ಕ್ಷೇತ್ರಗಳಲ್ಲಿ ಜನಸಂಪರ್ಕ ಬೆಳೆಸಿಕೊಂಡು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಗ್ರಾಮೀಣ ಪ್ರದೇಶಗಳ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ ಹಾಗೂ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ತಮ್ಮದೇ ಆದ ನೆಲೆ ರೂಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಆದರೆ, ಚುನಾವಣಾ ರಾಜಕೀಯದಲ್ಲಿ ಹಣಬಲ ಮತ್ತು ಕುಟುಂಬದ ಪ್ರಭಾವ ಹೆಚ್ಚಾಗುತ್ತಿರುವ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಪಕ್ಷದ ಕಷ್ಟದ ಸಮಯದಲ್ಲೂ ಸಂಘಟನೆಗಾಗಿ ದುಡಿದವರನ್ನು ಕಡೆಗಣಿಸಿ, ಚುನಾವಣೆ ಸಮೀಪಿಸಿದಾಗ ಪ್ರಭಾವ ಬೀರುವವರಿಗೆ ಟಿಕೆಟ್ ನೀಡಿದರೆ ನಿಷ್ಠಾವಂತ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಗ್ರಾಮೀಣ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಪ್ರಮುಖ ವೇದಿಕೆಗಳಾಗಿವೆ. ಹೀಗಾಗಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಜನರೊಂದಿಗೆ ಹೊಂದಿರುವ ನಿಕಟ ಸಂಪರ್ಕ, ಪಕ್ಷದ ಸಂಘಟನೆಗೆ ಸಲ್ಲಿಸಿರುವ ಸೇವೆ, ಕ್ಷೇತ್ರದ ಸಮಸ್ಯೆಗಳ ಅರಿವು ಮತ್ತು ಜನರ ವಿಶ್ವಾಸಕ್ಕೆ ಆದ್ಯತೆ ನೀಡಬೇಕೆಂಬ ನಿರೀಕ್ಷೆ ಕಾರ್ಯಕರ್ತರಲ್ಲಿದೆ.
ಬಣ ರಾಜಕೀಯದ ನಡುವೆ ಆಕಾಂಕ್ಷಿಗಳಿಗೆ ಟಿಕೆಟ್ ಗೊಂದಲ:
ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳೊಳಗೆ ಬಣ ರಾಜಕೀಯವೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಲ್ಲಿ ಗೊಂದಲ ಹಾಗೂ ಆತಂಕ ಮೂಡಿಸಿದೆ. ಪಕ್ಷದೊಳಗಿನ ನಾಯಕರು ಪ್ರತ್ಯೇಕ ಬಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ, ಯಾವ ನಾಯಕರ ಬೆಂಬಲ ಪಡೆದರೆ ಟಿಕೆಟ್ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳು ತೊಡಗಿದ್ದಾರೆ. ಒಂದು ಬಣದ ನಾಯಕರ ಆಪ್ತರಾಗಿರುವವರಿಗೆ ಮತ್ತೊಂದು ಬಣದ ನಾಯಕರ ಬೆಂಬಲ ಸಿಗುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.
ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಸೂಚಿಸುವ ಅಭ್ಯರ್ಥಿಗಳಿಗೂ ಪಕ್ಷದ ಹಿರಿಯ ನಾಯಕರು ಬೆಂಬಲಿಸುವ ಆಕಾಂಕ್ಷಿಗಳಿಗೂ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಇದರಿಂದ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಜನಸಂಪರ್ಕ ಹೊಂದಿರುವ ಕಾರ್ಯಕರ್ತರು ಕೂಡ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ. ಯಾರನ್ನು ಸಂಪರ್ಕಿಸಬೇಕು, ಯಾರ ಬೆಂಬಲ ಪಡೆಯಬೇಕು, ಟಿಕೆಟ್ಗಾಗಿ ಯಾವ ನಾಯಕರ ಬಳಿ ಒತ್ತಡ ಹೇರಬೇಕು ಎಂಬ ವಿಚಾರದಲ್ಲಿ ಆಕಾಂಕ್ಷಿಗಳು ತಲೆಕೆಡಿಸಿಕೊಳ್ಳುವಂತಾಗಿದೆ.
ಅಭ್ಯರ್ಥಿಗಳ ಆಯ್ಕೆಯೇ ಪಕ್ಷಗಳಿಗೆ ಅಗ್ನಿಪರೀಕ್ಷೆ:
ಒಟ್ಟಿನಲ್ಲಿ, ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯ ಗ್ರಾಮೀಣ ರಾಜಕೀಯದಲ್ಲಿ ಹೊಸ ಚಟುವಟಿಕೆಗಳು ಆರಂಭವಾಗಿವೆ. ಒಂದು ಕಡೆ ಮೀಸಲಾತಿ ಕುರಿತ ಆಕ್ಷೇಪಣೆಗಳು, ಮತ್ತೊಂದೆಡೆ ಟಿಕೆಟ್ಗಾಗಿ ಪೈಪೋಟಿ, ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಅಬ್ಬರ—ಇವೆಲ್ಲವೂ ಚುನಾವಣಾ ಕಣದ ಕಾವನ್ನು ಹೆಚ್ಚಿಸಿವೆ.
ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾದ ಬಳಿಕ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ. ಆದರೆ, ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡುತ್ತವೆಯೇ, ಹಣಬಲ ಮತ್ತು ರಾಜಕೀಯ ಕುಟುಂಬಗಳ ಪ್ರಭಾವಕ್ಕೆ ಮಣಿಯುತ್ತವೆಯೇ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ. ಅಂತಿಮವಾಗಿ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




