ದೇವದುರ್ಗ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ವಿದ್ಯಾಗಿರಿ ಪ್ರದೇಶದಲ್ಲಿನ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮರ್ಪಕ ಬಸ್ಸೌಲಭ್ಯ ಹಾಗೂ ಬಸ್ ನಿಲುಗಡೆ ಕಲ್ಪಿಸುವಂತೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ ಮಾತನಾಡಿ, ವಿದ್ಯಾಗಿರಿ ಪ್ರದೇಶದಲ್ಲಿ 8ಕ್ಕೂ ಹೆಚ್ಚು ವಿವಿಧ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಪ್ರತಿನಿತ್ಯ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ತೆರಳುತ್ತಾರೆ. ಆದರೆ ವಸತಿ ನಿಲಯಗಳಿಂದ ಮುಖ್ಯ ರಸ್ತೆಯವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಬಸ್ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾಗಿರಿ ಪ್ರದೇಶವು ರಾಯಚೂರು ಮುಖ್ಯ ರಸ್ತೆಯ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್ಗಳು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿಲುಗಡೆ ಮಾಡುತ್ತಿಲ್ಲ. ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ನಿಲುಗಡೆ ಮಾಡುವುದರಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಸುಮಾರು 4 ಕಿ.ಮೀ.ವರೆಗೆ ಕಾಲ್ನಡಿಗೆಯಲ್ಲಿ ಸಂಚರಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳ ಅಮೂಲ್ಯ ಸಮಯ ವ್ಯರ್ಥವಾಗುವುದರ ಜೊತೆಗೆ, ಬಿಸಿಲು, ಮಳೆ ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ತೊಂದರೆ ಅನುಭವಿಸುವಂತಾಗಿದೆ ಎಂದರು.
ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳ ಸಮಸ್ಯೆಯನ್ನು ಈ ಬಾರಿ ಕೂಡ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಡಿಪೋ ಮುತ್ತಿಗೆ ಹಾಕಿ ಹೋರಾಟ ನಡೆಸಬೇಕಾಗುತ್ತದೆ. ಅಂತಹ ಪರಿಸ್ಥಿತಿಗೆ ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ಎಸ್ಎಫ್ಐ ತಾಲೂಕು ಖಜಾಂಚಿ ದಿಲ್ಶಾದ್ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾಗಿರಿ ಪ್ರದೇಶದ ಸಮೀಪದಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಕೆಎಸ್ಆರ್ಟಿಸಿ ಹಾಗೂ ಇತರೆ ಬಸ್ಗಳಿಗೆ ಕಡ್ಡಾಯ ನಿಲುಗಡೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ಗಳ ವ್ಯವಸ್ಥೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದರು.
ವಿದ್ಯಾಗಿರಿ ಪ್ರದೇಶದ ರಸ್ತೆಯ ಎರಡೂ ಬದಿಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಆರಂಭಿಕ ಕಾಮಗಾರಿ ನಡೆದಿದ್ದರೂ, ಕಾಮಗಾರಿ ಪೂರ್ಣಗೊಳ್ಳದೆ ಹಲವು ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳು ಬಿಸಿಲು ಹಾಗೂ ಮಳೆಯಲ್ಲಿಯೇ ನಿಂತು ಬಸ್ಗಾಗಿ ಕಾಯುವಂತಾಗಿದೆ. ಕೂಡಲೇ ಬಸ್ ನಿಲ್ದಾಣಗಳ ಕಾಮಗಾರಿ ಪೂರ್ಣಗೊಳಿಸಿ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳ ಭೇಟಿ: ಬೇಡಿಕೆ ಈಡೇರಿಸುವ ಭರವಸೆ
ಪ್ರತಿಭಟನಾ ಸ್ಥಳಕ್ಕೆ ಡಿಪೋ ಮ್ಯಾನೇಜರ್, ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳನ್ನು ಇಂದೇ ಹಾಗೂ ನಾಳೆಯೊಳಗೆ ಈಡೇರಿಸುವ ಭರವಸೆ ನೀಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಪ್ರತ್ಯೇಕವಾಗಿ ಮೂರು ಸಮಯಗಳಲ್ಲಿ ಬಸ್ಗಳ ವ್ಯವಸ್ಥೆ ಮಾಡಲಾಗುವುದು. ಗ್ರಾಮ ಪಂಚಾಯಿತಿ ವತಿಯಿಂದ ರಾಜ್ಯ ಹೆದ್ದಾರಿಯಿಂದ ವಸತಿ ನಿಲಯಗಳವರೆಗೆ ಬೀದಿ ದೀಪ ಅಳವಡಿಸಲಾಗುವುದು. ವಸತಿ ನಿಲಯಗಳಿಗೆ ತೆರಳುವ ರಸ್ತೆಯ ಅಕ್ಕಪಕ್ಕದಲ್ಲಿರುವ ಜಾಲಿ ಗಿಡಗಳನ್ನು ತೆರವುಗೊಳಿಸಿ, ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಶಾರ್ಟ್ ಸರ್ಕ್ಯೂಟ್ಗೆ ದನಗಳ ಶೆಡ್ ಬೆಂಕಿಗಾಹುತಿ: 4 ಎಮ್ಮೆ, ಎತ್ತು ಸಾವು
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ, ಯೂಸುಫ್ ಗ್ವಾಡಕರ್, ಎಸ್ಎಫ್ಐ ತಾಲೂಕು ಅಧ್ಯಕ್ಷ ಭಾಷಾ ಶಾನ್ಯರ್, ಕಾರ್ಯದರ್ಶಿ ಸಂತೋಷ್ ತ್ಯಾಪ್ಲಿ, ಬಾಬು ಶ್ಯಾನೇರ್, ಅಭಿಷೇಕ್, ಶಿವು, ನಿಂಗಯ್ಯ ಸುಣದಕಲ್, ಯಲ್ಲಪ್ಪ ಸುಣದಕಲ್, ಶಿವರಾಜ ಮುಂಡರಗಿ, ಲಕ್ಷ್ಮಣ ಪರಪೂರ, ರಂಗನಾಥ, ಹನುಮಂತ, ನಾಗರಾಜ ಪರಪೂರ, ಅಮೀರ್ ಹುಸೇನ್ ಹಾಗೂ ವಿದ್ಯಾರ್ಥಿಗಳಾದ ಅನೀತಾ, ಶಿಲ್ಪಾ, ರೇಷ್ಮಾ, ಸುನೀತಾ, ಬಂಧನ ವಾಜ, ಆಜಿಮಲಾಗಾ, ಹನುಮಂತ ಗಲಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.




