ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ ಕಾವಲು ಸಮಿತಿ ಜಂಟಿಯಾಗಿ ನಗರದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಯಾತ್ರೆಯು ಕೇಂದ್ರ ಬಸ್ ನಿಲ್ದಾಣ ಹಾಗೂ ಮಹಾನಗರ ಪಾಲಿಕೆ ಕಚೇರಿ ಮಾರ್ಗವಾಗಿ ಟಿಪ್ಪು ಸುಲ್ತಾನ್ ಉದ್ಯಾನದವರೆಗೆ ಸಾಗಿತು. ತ್ರಿವರ್ಣ ಧ್ವಜಗಳನ್ನು ಹಿಡಿದು ಸಾಗಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ನ್ಯಾಯಯುತ ಹಕ್ಕುಗಳಿಗಾಗಿ ಧ್ವನಿ ಎತ್ತುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಮೂಲಕ ಕೇಂದ್ರ ಸರ್ಕಾರ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಪಕ್ಷಗಳು ಹಾಗೂ ಯುವಕರು ನಡೆಸುತ್ತಿರುವ ನಿರಂತರ ಪ್ರತಿಭಟನೆಗಳಿಗೆ ಅಡ್ಡಿಪಡಿಸುವ ಉದ್ದೇಶದಿಂದ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ಮೊಟಕುಗೊಳಿಸುವ ಕ್ರಮವಾಗಿದೆ. ಕೇಂದ್ರ ಸರ್ಕಾರದ ನಡೆ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಎಸ್‌ಐಆರ್ ಪ್ರಕ್ರಿಯೆಯ ಮೂಲಕ ದಲಿತರು, ಅಲ್ಪಸಂಖ್ಯಾತರು ಹಾಗೂ ಆದಿವಾಸಿ ಸಮುದಾಯಗಳ ಮತದಾನದ ಹಕ್ಕಿಗೆ ಧಕ್ಕೆಯಾಗುತ್ತಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?
ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಾಂತಪ್ಪ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, ಮತ ಕಾವಲು ಸಮಿತಿಯ ಸಂಚಾಲಕರಾದ ಮಾರೆಪ್ಪ ಹರವಿ ಹಾಗೂ ಶರಣಕುಮಾರ, ಸಂಯುಕ್ತ ಹೋರಾಟ ಸಮಿತಿಯ ಕೆ.ಜಿ. ವೀರೇಶ, ಡಿ.ಎಸ್. ಶರಣಬಸವ, ಖಾಜಾ ಅಸ್ಲಂ ಅಹ್ಮದ್, ಜಮಾತೆ ಇಸ್ಲಾಂ ಹಿಂದ್ ಸ್ಥಾನಿಕ ಅಧ್ಯಕ್ಷ ಅಸಿಮುದ್ದೀನ್ ಅಕ್ತರ್, ದಲಿತಪರ ಹೋರಾಟಗಾರ ಎಂ.ಆರ್.ಬೇರಿ, ಎಚ್. ಪದ್ಮಾ, ಜಾನ್ ವೆಸ್ಲಿ, ಆಂಜನೇಯ ಕುರುಬದೊಡ್ಡಿ, ಮುದುಕಪ್ಪ ನಾಯಕ, ಸಾಜೀದ್ ಹುಸೇನ್, ಜಾವೀದ್ ಖಾನ್, ಎಸ್ ಡಿಪಿಐ ಜಿಲ್ಲಾ ನಾಯಕರಾದ ಮುಸ್ತಾಕ್ ಅಹ್ಮದ್, ಮುಹಮ್ಮದ್ ಅತೀಕ್, ಮತೀನ್ ಅನ್ಸಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






