ಶಿಕ್ಷಣವೇ ಬೆಳವಣಿಗೆಗೆ ನಿಜವಾದ ಮಾರ್ಗ ಎಂಬ ವಾಕ್ಯವನ್ನು ಪ್ರತಿಯೊಬ್ಬ ರಾಜಕಾರಣಿಯೂ ಉಚ್ಚರಿಸುತ್ತಾರೆ. ಆದರೆ, ಆ ಮಾತು ಎಷ್ಟರ ಮಟ್ಟಿಗೆ ಕಾರ್ಯ ರೂಪದಲ್ಲಿದೆ ಎನ್ನುವುದಕ್ಕೆ ಅವರೇ ಉತ್ತರಿಸಬೇಕು. ಅದೆಷ್ಟೋ ಮಕ್ಕಳು ಇಂದಿಗೂ ಶಿಥಿಲ ಶಾಲೆಗಳೊಳಗೆ ತಮ್ಮ ಕನಸುಗಳನ್ನು ಬಿತ್ತುತ್ತಿದ್ದಾರೆ. ನೀರೂರಿ ಪೋಷಿಸಬೇಕಾದವರು ಭಾಷಣ, ಪ್ರಚಾರಗಳಲ್ಲಿ ತೊಡಗಿದ್ದಾರೆ. ಶಿವಮೊಗ್ಗ ಗ್ರಾಮಾಂತರದ ಬಿದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಂಥದ್ದೊಂದು ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಆದರೂ, ಶಾಲೆಯ ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಕೃತಜ್ಞತೆಯಾಗಿ ಶಾಲೆಯ ಶಿಥಿಲ ಕೊಠಡಿಗಳನ್ನು ತೆರವುಗೊಳಿಸಿ, ಪುನರ್ ನಿರ್ಮಾಣದ ಕನಸು ಕಟ್ಟುತ್ತಿದ್ದಾರೆ.
1960ರಲ್ಲಿ ಪ್ರಾರಂಭವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಜ್ಞಾನದ ಮಾರ್ಗ ತೋರಿರುವ ಈ ಶಾಲೆ ಇಂದು ಸರ್ಕಾರದ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಗೆ ತಲುಪಿದೆ. ಮಕ್ಕಳ ಸುರಕ್ಷತೆಗೆ ಧಕ್ಕೆ, ಮಳೆಗಾಲದಲ್ಲಿ ನೆನೆಯುವ ಕೊಠಡಿಗಳು, ಕುಸಿಯುವ ಮೆಲ್ಚಾವಣಿ ಇವೆಲ್ಲವೂ ಶಿಕ್ಷಣ ವ್ಯವಸ್ಥೆಯ ಬದ್ಧತೆಯ ಕುರಿತು ಪ್ರಶ್ನೆ ಹುಟ್ಟುಹಾಕುತ್ತವೆ.
ಕಳೆದ ವರ್ಷದಿಂದ ಶಾಲೆಗೆ ಅನುದಾನ ನೀಡಿ ಶಾಲೆಗೆ ನೂತನ ಕೊಠಡಿಗಳನ್ನು ನಿರ್ಮಿಸಿ ಕೊಡಬೇಕೆಂದು ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಯವರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು. ಇಲ್ಲಿವರೆಗೆ ಯಾವದೇ ಸ್ಪಂದನೆ ಬಾರದ ಕಾರಣ, ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ಶಿಥಿಲಾವಸ್ಥೆ ತಲುಪಿದ್ದ ಎರಡು ಕೊಠಡಿಗಳನ್ನು ಕೆಡವಿಸಿದ್ದಾರೆ.
ಹಾಗೂ ಶಾಲೆಯ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡಿಸಿ, ಕೈದೋಟಗಳನ್ನು ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿ ಪ್ರಸನ್ನ ಈದಿನಕ್ಕೆ ತಿಳಿಸಿದರು.
ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, “ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಅವರ ಗಮನಕ್ಕೂ ತಂದಿದ್ದು, ಶಾಲಾ ದಾಖಲೆಗಳು ನೀಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಾದರೂ ಸರ್ಕಾರಿ ಶಾಲೆಗಳ ಪರಿಸ್ಥಿತಿ ಸುಧಾರಿಸಲಿ” ಎಂದು ಆಶಿಸಿದರು.
ಬಿದರೆ ವ್ಯಾಪ್ತಿಯಲ್ಲಿ ಅಧಿಕಾರದಲ್ಲಿರುವುದು ಜೆಡಿಎಸ್ ಶಾಸಕಿ ಶಾರದಾ ಪೂರ್ವನಾಯ್ಕ್. ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಬಿದರೆ ಗ್ರಾಮದ ಸರ್ಕಾರಿ ಶಾಲೆಗೆ ಅನುದಾನ ಬರಲು ವಿಳಂಬವಾಗಿರುವುದಕ್ಕೆ ಈ ರಾಜಕೀಯ ಒಳ ಬಿಕ್ಕಟ್ಟೂ ಒಂದು ಕಾರಣವಿರಬಹುದು ಎಂದು ಸ್ಥಳೀಯರು ಸಂಶಯಿಸುತ್ತಾರೆ.
ಕಳೆದ ಬಾರಿ ಬಿದರೆ ಗ್ರಾಮದ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿದ್ದು, ಈ ಬಗ್ಗೆ ಕ್ರಮವಹಿಸಬೇಕೆಂದು ವರದಿ ಮಾಡಿದ್ದಾಗ, “ಬರಬೇಕಾದ ಅನುದಾನ ಬರುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಅಗತ್ಯವಿರುವ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ” ಎಂಬುದಾಗಿ ತಿಳಿಸಿದ್ದರು.
ರಾಜಕಾರಣಿಗಳ ಕಿತ್ತಾಟದಿಂದ ಸರ್ಕಾರಿ ಶಾಲೆಗೆ ಬರುವ ಬಡ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂದು ಇದಕ್ಕೆ ತಾರ್ಕಿಕ ಅಂತ್ಯ ಹಾಡಲು ಹಳೆ ವಿದ್ಯಾರ್ಥಿಗಳೇ ಕಟ್ಟಡ ನೆಲಸಮ ಮಾಡಿಸುವ ಮೂಲಕ ಶಾಲೆಗೆ ಮರು ಜೀವ ನೀಡಲು ಹೊರಟಿದ್ದಾರೆ.
ಇನ್ನಾದರೂ ಈ ಶಾಲೆಯ ವಿಚಾರದಲ್ಲಿ ಶಿಕ್ಷಣ ಸಚಿವರು ರಾಜಕೀಯ ಬಿಡಬೇಕು. ತಮಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಪಣ ತೊಟ್ಟು ನಿಂತಿದ್ದೇನೆ ಎಂದು ಪದೆ ಪದೆ ಹೇಳಿಕೊಳ್ಳುವವರು ಈ ವಿದ್ಯಾರ್ಥಿಗಳೆಡಗೂ ಗಮನ ಕೊಡುವುದು ಅತ್ಯಗತ್ಯ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಮತ್ತು ಅಮೆರಿಕ: ಏನದು ಎಪ್‌ಸ್ಟೀನ್ ಫೈಲ್ಸ್?
ಬಿದರೆ ಗ್ರಾಮದ ಶಾಲೆಯ ಕಥೆ ಒಂದು ಶಿಥಿಲ ಕಟ್ಟಡದ ಕುರಿತಲ್ಲ; ಅದು ಶಿಥಿಲವಾಗುತ್ತಿರುವ ಜವಾಬ್ದಾರಿಗಳ ಕುರಿತು. ಸರ್ಕಾರದಿಂದ, ಶಾಸಕರಿಂದ ಮತ್ತು ಶಿಕ್ಷಣ ಇಲಾಖೆಯಿಂದ ಸಿಗಬೇಕಾದ ಸಣ್ಣ ಸ್ಪಂದನೆಯಿಲ್ಲದೇ ಮಕ್ಕಳ ಭವಿಷ್ಯ ಮಳೆಗಾಲದಲ್ಲಿ ತೊಯ್ದ ಬಣ್ಣದ ಬೊಂಬೆಯಂತಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಇಚ್ಛಾಶಕ್ತಿ, ಸಂಬಂಧಪಟ್ಟವರ ನೈತಿಕತೆ ಮೇಲೆ ಬರೆ ಎಳೆದಂತಾಗಿದೆ. “ಸರ್ಕಾರ ನಿರ್ಲಕ್ಷಿಸಿದರೆ ನಾವು ಕೈಜೋಡಿಸೋಣ” ಎಂಬ ಧೈರ್ಯ ಅನೇಕ ಬಡ ಮಕ್ಕಳ ಕನಸುಗಳಿಗೆ ಹೊಸ ಆಸರೆಯಾಗಿ ಪರಿಣಮಿಸಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.