ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ಕಾರ್ಯ ನಡೆಯುತ್ತಿದ್ದ ವೇಳೆ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ತೀವ್ರ ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ಭಾರತದ ಸಂವಿಧಾನದ ಮೇಲಿನ ನೇರ ದಾಳಿ. ಸನಾತನಿಗಳು ಸ್ವಾತಂತ್ರ್ಯ ದೊರೆತ ಕ್ಷಣದಿಂದಲೂ ಸಂವಿಧಾನವನ್ನು ವಿರೋಧಿಸುತ್ತಾ, ಮನುಸ್ಮೃತಿ ಆಧಾರಿತ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಯತ್ನಿಸುತ್ತಿದ್ದಾರೆ. ಇದೇ ಮನೋಭಾವದಿಂದ ಇಂತಹ ಅಘಾತಕಾರಿ ಕೃತ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅಹಿಂಸಾವಾದಿ ಮಹಾತ್ಮ ಗಾಂಧಿಯವರನ್ನೇ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಗೆ ಈ ಸನಾತನಿಗಳು ದೇವರ ಸ್ಥಾನ ನೀಡುತ್ತಾರೆ. ಇಂತಹ ಮನೋಭಾವ ಹೊಂದಿರುವವರು ದಲಿತ ಮೂಲದ ನ್ಯಾಯಮೂರ್ತಿ ಗವಾಯಿ ಅವರ ಪೀಠದಲ್ಲಿ ಕೂತು ನ್ಯಾಯ ನೀಡುವುದನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ಅವರ ಹಿಂದುತ್ವವಾದಿ, ವೈದಿಕಶಾಹಿ ಮನೋಭಾವದ ಪ್ರತಿಬಿಂಬ ಎಂದು ಕಿಡಿ ಕಾರಿದ್ದಾರೆ.
ಅಖಂಡ ಭಾರತ, ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ಬಡಾಯಿ ಹೊಡೆಯುವ ಇಂತಹ ಸನಾತನವಾದಿಗಳ ಹೇಯ ಅಂತರಂಗವನ್ನು ಈ ಘಟನೆ ಬಯಲುಗೊಳಿಸಿದೆ. ಸಂವಿಧಾನದ ಆಶಯಗಳ ಮೇಲೆ ದಾಳಿ ನಡೆಸುವ ಇಂಥ ದೇಶದ್ರೋಹಿಗಳನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.