ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಕೊನೆ ಹಂತದಲ್ಲಿ ರದ್ದಾಗಿದೆ. ಹೀಗಾಗಿ 50ಕ್ಕೂ ಹೆಚ್ಚು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರದಾಡಿದ್ದಾರೆ. ತಾಂತ್ರಿಕ ಸಮಸ್ಯೆ ನೆಪ ಹೇಳಿ ಇಂದು ಸ್ಟಾರ್ ಏರ್‌ಲೈನ್ಸ್ ಸಂಸ್ಥೆ ವಿಮಾನವನ್ನು ರದ್ದು ಮಾಡಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕೂಡಾ ಶಿವಮೊಗ್ಗದಿಂದ ಗೋವಾಕ್ಕೆ ವಿಮಾನ ಹಾರಾಟ ರದ್ದು ಮಾಡಲಾಗಿತ್ತು. ಬುಧವಾರವೂ ವಿಮಾನ ಹಾರಾಟ ರದ್ದಾಗಿದೆ. ಹೀಗಾಗಿ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.
ಬುಧವಾರ ಬೆಳಗ್ಗೆ 11ಕ್ಕೆ ವಿಮಾನ ಶವಮೊಗ್ಗದಿಂದ ಗೋವಾಗೆ ತೆರಳಬೇಕಿತ್ತು. ಆದರೆ, ವಿಮಾನ ರದ್ದಾಗಿದೆ. ಹೀಗಾಗಿ, ಗೋವಾ ಪ್ರವಾಸಕ್ಕೆ ತೆರಳಲು ಬಂದಿದ್ದ ಪ್ರಯಾಣಿಕರು ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯ ಅಧಿಕಾರಗಳ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.
ಇತ್ತೀಚೆಗೆ ಹವಾಮಾನ ವೈಪರೀತ್ಯ ಹಿನ್ನೆಲೆ ಜಿಲ್ಲೆಯಿಂದ ಹೈದರಾಬಾದ್ಗೆ ತೆರಳಬೇಕಿದ್ದ ಸ್ಟಾರ್ ಏರ್‌ಲೈನ್ಸ್ ವಿಮಾನ ಹಾರಾಟ ರದ್ದುಗೊಳಿಸಲಾಗಿತ್ತು. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್ಗೆ ಈ ವಿಮಾನ ತೆರಳಬೇಕಿತ್ತು.
ಶಿವಮೊಗ್ಗದಿಂದ ಹೈದರಾಬಾದ್ಗೆ ಸ್ಟಾರ್ ಏರ್‌ಲೈನ್ಸ್ ವಿಮಾನದಲ್ಲಿ ಸುಮಾರು 70 ಪ್ರಯಾಣಿಕರು ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದುಗೊಂಡ ಹಿನ್ನೆಲೆ 3 ಗಂಟೆ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಪರದಾಡಿದ್ದರು. ವಿಮಾನ ಹಾರಾಟಕ್ಕಾಗಿ ಕಾದು ಸುಸ್ತಾಗಿದ್ದರು.