ಶಿವಮೊಗ್ಗ, ಹೊಸನಗರ ತಾಲೂಕಿನ ಕರಿನಗೊಳ್ಳಿ ಗ್ರಾಮದಲ್ಲಿ 14 ವರ್ಷದ ಬಾಲಕನ ಸಾವು ಆಘಾತ ಮೂಡಿಸಿದೆ. ಮೇ 26 ರಂದು ಸುರೇಶ್ ಎಂಬುವರ ಪುತ್ರ ಸುಬ್ರಹ್ಮಣ್ಯ(14) ಮನೆಯ ಸಮೀಪದ ಶುಂಠಿ ತೋಟದಲ್ಲಿದ್ದ ಕೃತಕ ನೀರಿನ ಹೊಂಡದಲ್ಲಿ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ದುರಂತದ ಕರಿ ನೆರಳನ್ನು ಬೀರಿದೆ.
ಪೊಲೀಸರು ಇದನ್ನು “ಆಕಸ್ಮಿಕ ಸಾವು” ಎಂದು ದಾಖಲಿಸಿ ಪ್ರಕರಣ ದಾಖಲಿಸಿಕೊಂಡರೂ , ಮಗನನ್ನು ಕಳೆದುಕೊಂಡ ಪೋಷಕರು ಮತ್ತು ಕುಟುಂಬಸ್ಥರು ಕಣ್ಣೀರಿನಿಂದ ಹೇಳುತ್ತಿರುವುದು, “ಇದು ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೊಲೆ.” ಎಂದು.ಮೇ 26 ರ ಮಧ್ಯಾಹ್ನ ಮಳೆ ಸುರಿಯುತ್ತಿತ್ತು. ಆ ಸಮಯದಲ್ಲಿ ಸುರೇಶ್ ಅವರ ಪುತ್ರನು ಅಜ್ಜಿಯ ಮನೆಗೆ ನಾಗದೇವರ ಪ್ರಸಾದ ಕೊಡುವುದಾಗಿ ಹೇಳಿ ಹೊರಟಿದ್ದ.
ಗಂಟೆಗಳಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ಆರಂಭಿಸಿದರು. ಸಂಜೆ ವೇಳೆಗೆ ಮನೆ ಹಿಂಭಾಗದಲ್ಲಿದ್ದ ಶುಂಠಿ ತೋಟದ ಬಳಿ ಟಾರ್ಪಲ್ ಹಾಕಿ ನಿರ್ಮಿಸಿದ್ದ ನೀರಿನ ಹೊಂಡದಲ್ಲಿ ಬಾಲಕನ ಶವ ಪತ್ತೆಯಾಗಿತ್ತು ಆದರೆ ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಪೋಷಕರು ಆರೋಪಿಸುತಿದ್ದಾರೆ.
ಮೃತ ಬಾಲಕನ ತಂದೆ ಸುರೇಶ್ ಅವರು ಹೇಳುವಂತೆ “ಮಳೆ ಬರುವ ಸಮಯದಲ್ಲಿ ಮಕ್ಕಳು ಆಟವಾಡಲು ಕೆರೆಗೆ ಇಳಿಯುವುದು ಅಸಾಧ್ಯ. ನಮ್ಮ ಮಗ ಮನೆಯಲ್ಲಿದ್ದಾಗಲೂ ಎಂದಿಗೂ ನಗ್ನವಾಗಿ ಸ್ನಾನ ಮಾಡಿರಲಿಲ್ಲ. ಆದರೆ ಶವ ಪತ್ತೆಯಾದಾಗ ಅವನು ಬಟ್ಟೆಯಿಲ್ಲದೇ ಕಂಡುಬಂದಿದ್ದಾನೆ.
ಇಷ್ಟೇ ಅಲ್ಲ, ಅವನ ಸೊಂಟದಲ್ಲಿ ಸದಾ ಇರುತ್ತಿದ್ದ ರೇಷ್ಮೆಯ ಉಡುದಾರ ಕಾಣಿಸದೆ ಹೋಯಿತು. ಇವೆಲ್ಲವೂ ಅವನನ್ನು ಯಾರೋ ಚಿತ್ರಹಿಂಸೆ ನೀಡಿ ಕೊಲೆಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಆರೋಪಿಸುತ್ತಾರೆ.
ಕುಟುಂಬ ಸದಸ್ಯರ ಪ್ರಕಾರ, ಶವ ಪತ್ತೆಯಾದ ಸ್ಥಳದಲ್ಲೇ ಪಂಚನಾಮೆ ಮಾಡಬೇಕಾಗಿದ್ದರೂ, ಪೊಲೀಸರು ಬೇರೆ ಕೆರೆಯ ಬಳಿ ದಾಖಲಾತಿ ಮಾಡಿದ್ದಾರೆ. ಇಂತಹ ನಿರ್ಲಕ್ಷ್ಯದಿಂದ ಪೊಲೀಸರು ಯಾರನ್ನಾದರೂ ಉಳಿಸಲು ಯತ್ನಿಸುತ್ತಿದ್ದಾರೆಯೇ ಎಂಬುದು ಪೋಷಕರಲ್ಲಿ ಅನುಮಾನ ಮೂಡಿಸಿದೆ.