ಶಿವಮೊಗ್ಗ, ವೈದ್ಯ ಸಾಹಿತ್ಯ ಇಂದು ಹೆಚ್ಚು ರಚನೆಯಾಗುತ್ತಿದ್ದು, ಈ ಸಾಹಿತ್ಯದ ಓದಿನಿಂದ ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಕುವೆಂಪು ವಿವಿ ಕನ್ನಡ ಭಾರತಿ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಅಭಿಪ್ರಾಯ ಪಟ್ಟರು.
ಶಿವಮೊಗ್ಗದ ಸುಕ್ಷೇಮ ಆಯುರ್ವೇದ ಚಿಕಿತ್ಸಾಲಯ ಮಂಗಳವಾರ ಏರ್ಪಡಿಸಿದ್ದ ಚರಕ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದರು.ವೈದ್ಯಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆಯಿದೆ. ಹಿಂದಿನ ಕಾಲದಲ್ಲಿ ಉತ್ಕೃಷ್ಟವಾದ ವೈದ್ಯ ಸಾಹಿತ್ಯ ಕೃತಿಗಳು ರಚನೆಯಾಗಿದ್ದು ಇಂದಿಗೂ ಅಧ್ಯಯನ ಯೋಗ್ಯವಾಗಿವೆ. ವೈದ್ಯಸಾಹಿತ್ಯದ ಅಧ್ಯಯನದಿಂದ ವ್ಯಕ್ತಿ ಮತ್ತು ಸಮಾಜ ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ ಎಂದರು.
ಬಿ.ಎ.ಎಂ.ಎಸ್. ಕೋರ್ಸ್ ನಂತರ ಮುಂದೇನು ಎನ್ನುವ ವಿಷಯ ಕುರಿತು ಮಾತಾಡಿದ ಡಾ! ನಾಗೇಂದ್ರ ಆಚಾರ್ಯರು, ಇಂದು ಆಯುರ್ವೇದ ಅಧ್ಯಯನದ ಮೂಲಕ ಉತ್ತಮ ಸಮಾಜ ಸೇವೆಯನ್ನು ಮಾಡಲು ಸಾಧ್ಯವೆಂದರು.
ವೈದ್ಯರತ್ನಂ ಉತ್ಪನ್ನಗಳನ್ನು ಕುರಿತು ಶ್ರೀ ಜಿತ್ ರವಿಚಂದ್ರನ್ ಮಾತಾಡಿದರು. ಡಾ. ರವಿರಾಜ್ ಅವರು ಚರಕ ಮಹರ್ಷಿ ಕುರಿತು ಮಾತಾಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವೀಣಾ, ಆಯುರ್ವೇದ ಔಷಧಿ ಮತ್ತು ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ. ಶ್ರದ್ಧೆಯಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.