ಶಿವಮೊಗ್ಗದ ಆರ್.ಎಂ.ಎಲ್ ನಗರದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ, ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಸ್ಕ್ರ್ಯಾಪ್ ವ್ಯಾಪಾರಿ ಅಮ್ಜದ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಕ್ಟೋಬರ್ 5 ರಂದು ನಡೆದಿದೆ.
ಅಮ್ಜದ್ (34) ಮೃತಪಟ್ಟವರೆಂದು ಗುರುತಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಇದರಲ್ಲಿ ಕೆಲವರು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ, ಅಕ್ಟೋಬರ್ 2 ರ ಸಂಜೆ ಅಮ್ಜದ್ ರವರು ಶಾಹೀದ್ ಎಂಬುವರ ಜೊತೆ ಮಾತನಾಡುತ್ತಿದ್ದ ವೇಳೆ, ಸ್ಥಳಕ್ಕಾಗಮಿಸಿದ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು.ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದರಲ್ಲಿ ಅಮ್ಜದ್ ಸ್ಥಿತಿ ಗಂಭೀರವಾಗಿತ್ತು. ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ದಾಳಿಗೆ ಕಾರಣವೇನು ಎಂಬುವುದರ ಮಾಹಿತಿ ತಿಳಿಯಬೇಕಿದೆ.