ಶಿವಮೊಗ್ಗ, ಅಡಕೆ ಬೆಳೆಗಾರರಿಗೆ ನೆರವಾಗುತ್ತಿದ್ದ ಮಾಮ್‌ಕೋಸ್, ಈಗ ಬ್ಯಾಂಕಿಂಗ್ ಮತ್ತು ವಾಣಿಜ್ಯ ವಹಿವಾಟನ್ನೂ ಆರಂಭಿಸಲು ನಿರ್ಧರಿಸಿದೆ. ಚಿನ್ನಾಭರಣ, ಗೃಹೋಪಯೋಗಿ, ಕೃಷಿ ಉಪಕರಣ, ಶಿಕ್ಷಣ ಸಾಲ ಸೇರಿದಂತೆ ಹಲವು ಹೊಸ ಸಾಲಗಳನ್ನೂ ನೀಡಲಿದೆ.
ಶೈಕ್ಷಣಿಕ ಸಂಸ್ಥೆ, ಕೃಷಿ ಯಂತ್ರೋಪಕರಣ ಮಾರಾಟ, ಗೊಬ್ಬರ ಮಳಿಗೆಗಳಂತಹ ವಾಣಿಜ್ಯ ಚಟುವಟಿಕೆಗಳನ್ನೂ ಸಂಸ್ಥೆ ಆರಂಭಿಸಲಿದೆ.
ಇದರ ಜೊತೆಗೆ ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಾದ್ಯಂತ ವಿಸ್ತರಿಸಲು ಮತ್ತು ಕಾಫಿ, ಕೋಕೋ, ತೆಂಗು ಬೆಳೆಗಳನ್ನೂ ಸೇರಿಸಿಕೊಳ್ಳಲು ಯೋಜಿಸಿದೆ.
ಮಲೆನಾಡಿನಿಂದ ರಾಜ್ಯದೆಲ್ಲೆಡೆಗೆ ವಾಣಿಜ್ಯ ವಹಿವಾಟು ವಿಸ್ತರಿಸಲು ನಿರ್ಧರಿಸಿರುವ ಮಾಮ್‌ಕೋಸ್‌ನಿಂದ ಬ್ಯಾಂಕಿಂಗ್ ಸೇವೆಯನ್ನೂ ಆರಂಭಿಸಲಿದೆ.
ಅಡಕೆ ಬೆಳೆಗಾರರು ಮತ್ತು ವ್ಯಾಪಾರಿಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ (ಮಾಮ್‌ಕೋಸ್) ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬ್ಯಾಂಕಿಂಗ್ ವಹಿವಾಟು ವಿಸ್ತರಣೆಯೊಂದಿಗೆ ವಾಣಿಜ್ಯ ವಹಿವಾಟು ಆರಂಭಿಸಲು ನಿರ್ಧರಿಸಿದೆ.
ದಲ್ಲಾಳಿಗಳು ಮತ್ತು ವ್ಯಾಪಾರಿಗಳ ಶೋಷಣೆ ತಪ್ಪಿಸುವ ಸಲುವಾಗಿ ಅಡಕೆ ಬೆಳೆಗಾರರಿಗೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ 1939ರಲ್ಲಿ ಅಸ್ತಿತ್ವಕ್ಕೆ ಬಂದ ಮಾಮ್‌ಕೋಸ್ ಆನಂತರದಲ್ಲಿ ಧಾರಣೆ ಕುಸಿದಾಗ ರೈತರಿಗೆ ನೆರವಾಗುವ ಸಲುವಾಗಿ ಖರೀದಿಯನ್ನೂ ಆರಂಭಿಸಿತು.
ಪ್ರಸ್ತುತ ತನ್ನ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಬೆಳೆಗಾರರಿಗೆ ಬೇರೆಲ್ಲಾ ವ್ಯಾಪಾರಿಗಳು ಮತ್ತು ಸಂಘಗಳಿಗಿಂತ ಉತ್ತಮ ಧಾರಣೆಯನ್ನು ಮಾಮ್‌ಕೋಸ್ ನೀಡುತ್ತಿದೆ.ಸದಸ್ಯರಿಂದ ಉಳಿತಾಯ ಮತ್ತು ಚಾಲ್ತಿ ಖಾತೆಗಳ ಮೂಲಕ ಠೇವಣಿ ಸಂಗ್ರಹ ಆರಂಭಿಸಿ ಸೀಮಿತ ಅವಕಾಶದಲ್ಲಿ ಬ್ಯಾಂಕಿಂಗ್ ವಹಿವಾಟು ಸಹ ನಡೆಸುತ್ತಿತ್ತು.
ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವ ಸಲುವಾಗಿ ಅಡಕೆ ಆಧಾರ ಸಾಲ, ಕಟಾವು ಸಾಲ, ಕೊಳೆ ಔಷಧ ಸಾಲ, ಠೇವಣಿ ಆಧಾರ ಸಾಲವನ್ನು ಮಾತ್ರ ನೀಡುತ್ತಿತ್ತು. ಹೀಗಾಗಿ ಬೆಳೆಗಾರರು ಇತರೆ ಉದ್ದೇಶಗಳಿಗೆ ಮತ್ತೊಂದು ಬ್ಯಾಂಕ್ ಅಥವಾ ಸಹಕಾರ ಸಂಘವನ್ನು ಅವಲಂಬಿಸಬೇಕಾಗಿತ್ತು.ಬೆಳೆಗಾರರು ಮತ್ತೊಂದು ಸಂಘವನ್ನು ಅವಲಂಬಿಸುವುದನ್ನು ತಪ್ಪಿಸುವ ಸಲುವಾಗಿ ಬ್ಯಾಂಕಿಂಗ್ ವಹಿವಾಟು ವಿಸ್ತರಿಸಲು ನಿರ್ಧರಿಸಲಾಗಿದೆ. ಅದಕ್ಕೆ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಚಿನ್ನಾಭರಣ ಸಾಲ, ಗೃಹೋಪಯೋಗಿ ಸಾಲ, ಕೃಷಿ ಉಪಕರಣಗಳು, ಸಲಕರಣೆಗಳು ಮತ್ತು ಯಂತ್ರೋಪಕರಗಳ ಸಾಲ, ಬೆಳೆಗಾರರ ಮಕ್ಕಳಿಗೆ ಶಿಕ್ಷಣ ಸಾಲ, ಸ್ಥಿರಾಸ್ತಿ ಖರೀದಿ ಸಾಲ, ಟ್ರ್ಯಾಕ್ಟರ್, ನಾಲ್ಕು ಚಕ್ರ, ಮತ್ತು ದ್ವಿ ಚಕ್ರ ವಾಹನಗಳ ಖರೀದಿ ಸಾಲ, ಮನೆ ನಿರ್ಮಾಣ, ಖರೀದಿ ಮತ್ತು ದುರಸ್ತಿ ಸಾಲ, ನಿವೇಶನ ಖರೀದಿ ಸಾಲಗಳನ್ನು ಮಾಮ್‌ಕೋಸ್‌ನಲ್ಲೇ ಪಡೆಯಬಹುದು. ಈ ವ್ಯವಸ್ಥೆಯು ಬಹುತೇಕ ಡಿಸೆಂಬರ್‌ನಿಂದ ಜಾರಿಯಾಗುವ ಸಾಧ್ಯತೆ ಇದೆ.