ಶಿವಮೊಗ್ಗ, “ವಿದ್ಯಾರ್ಥಿ ಜೀವನದಲ್ಲಿ ಕಲಿಯಬೇಕಾದ ಅಂಶಗಳು ಹಲವಾರು. ಆದರ್ಶ ವ್ಯಕ್ತಿತ್ವವನ್ನು ರೂಡಿಸಿಕೊಳ್ಳುವುದಕ್ಕೆ ಈ ವಿದ್ಯಾರ್ಥಿ ಜೀವನವೇ ತಳಪಾಯ ಹಾಕುತ್ತದೆ. ಕೆಲವು ಬಾರಿ ಸಾಮಾನ್ಯ ವಿಷಯಗಳತ್ತ ಗಮನ ಹರಿಸದೆ ದೊಡ್ಡ ದೊಡ್ಡ ಮಾತುಗಳಲ್ಲಿ ಸಮಯ ವ್ಯರ್ಥ ಮಾಡುತ್ತೇವೆ.
ಬದಲಾವಣೆ ಎನ್ನುವುದು ನಮ್ಮಿಂದಲೇ ಪ್ರಾರಂಭವಾಗಬೇಕು. ನಾವೆಷ್ಟು ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಸಮಾಜಕ್ಕೆ ಬದ್ಧರಾಗಿದ್ದೇವೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಪ್ರಾಮಾಣಿಕತೆ ಸ್ವಚ್ಛತೆ ಸಹಭಾಗಿತ್ವ ಈ ಮೊದಲಾದ ಆದರ್ಶ ಗುಣಗಳನ್ನು ನಾವು ಮೈಗೂಡಿಸಿಕೊಂಡು ನಾವು ಬದುಕುವ ಪರಿಸರವನ್ನು ಸುಂದರವಾಗಿಟ್ಟುಕೊಳ್ಳುವುದೇ ನಿಜವಾದ ಶಿಕ್ಷಣ” ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶರತ್ ಅನಂತಮೂರ್ತಿಯವರು ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನ’ ದಿನದ ಕಾರ್ಯಕ್ರಮ ಪ್ರಯುಕ್ತ ಕುವೆಂಪು ವಿ.ವಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರು ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯು ಎಸ್ ಎಂ ಆರ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನ’ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ತಮ್ಮ ಉಪನ್ಯಾಸದಲ್ಲಿ ” ರಾಷ್ಟ್ರೀಯ ಸೇವಾ ಯೋಜನೆ ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ. ಸಾಮಾಜಿಕ ನ್ಯಾಯ, ಸೌಹಾರ್ದತೆ, ಭ್ರಾತೃತ್ವ, ಸೇವಾ ಗುಣಗಳು ನಮ್ಮಲ್ಲಿ ಬೆಳೆಯುವಂತೆ ಮಾಡುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜದೊಂದಿಗೆ ಬೆರೆತಾಗಲೆ ನಮ್ಮ ವ್ಯಕ್ತಿತ್ವ ವಿಕಸನ ಸಾಧ್ಯ. ಕೌಶಲ್ಯವಿಲ್ಲದ ಶಿಕ್ಷಣವಿಲ್ಲ. ನಮ್ಮ ಸಾಮರ್ಥ್ಯ ವರ್ಧನೆಗೆ ಕೆಲವದರೂ ಕೌಶಲ್ಯಗಳನ್ನು ಕಲಿಯುವುದು ಅಗತ್ಯ.
ಜಾತಿ ವರ್ಗ ಧರ್ಮ ಆಧಾರಿತ ಸಮಾಜವನ್ನು ಸಮಾನತೆಯ ದಾರಿಯಲ್ಲಿ ಕಟ್ಟಬೇಕಾದರೆ ನಾವು ಜಾಗೃತರಾಗಬೇಕು. ಸಂವಿಧಾನದ ಆಶಯಗಳನ್ನು ಗೌರವಿಸಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಎ ಎಲ್ ಮಂಜುನಾಥ್ ಅವರು ತಮ್ಮ ಮಾತನಾಡಿ,
“ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನಿಡಲಾಗುತ್ತದೆ. ಸ್ವಚ್ಛತೆ ಹಾಗೂ ಪರಿಸರ ಪ್ರೀತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಆರ್.ತಿಮ್ಮರಾಯಪ್ಪ, ಪ್ರಾಂಶುಪಾಲರಾದ ಪ್ರೊ. ಎ.ಟಿ ಪದ್ಮೇಗೌಡ, ಯು.ಎಸ್ ಎಂ ಆರ್ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಧರ್ಮೇಗೌಡ ಎಚ್ ಎಂ, ಎನ್ ಎಸ್ ಎಸ್ ಸಲಹಾ ಸಮಿತಿಯ ಸದಸ್ಯರಾದ ಜೆ ಎಫ್ ಎಂ ದಿವ್ಯಾ ವಿ. ಪಿ. ಉಪಸ್ಥಿತರಿದ್ದರು.
ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಗಿರಿಧರ್ ಕಾರ್ಯಕ್ರಮ ನಿರೂಪಿಸಿದರು. ಕುವೆಂಪು ವಿವಿ ಕಾರ್ಯಕ್ರಮಾಧಿಕಾರಿಗಳಾದ ಡಾ. ಶ್ರೀಶೈಲ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.