ಶಿವಮೊಗ್ಗ, ಹಿಂದೂಗಳ ಧಾರ್ಮಿಕ ಕ್ಷೇತ್ರದ ಬಗ್ಗೆ ಹಾಗೂ ಪುಣ್ಯಕ್ಷೇತ್ರ ಧರ್ಮಸ್ಥಳದ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಾ, ವೀರೇಂದ್ರ ಹೆಗ್ಗಡೆ ಅವರಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ರಾಷ್ಟ್ರಭಕ್ತರ ಬಳಗದಿಂದ ಧರ್ಮಸ್ಥಳಕ್ಕೆ ಶಿವಮೊಗ್ಗದಿಂದ ಧರ್ಮರಕ್ಷಾ ಜಾಥಾ ಹಮ್ಮಿಕೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಮಂಗಳವಾರ ಸ್ವಗೃಹದಿಂದ ಧರ್ಮಸ್ಥಳಕ್ಕೆ ಧರ್ಮರಕ್ಷಾ ಜಾಥಾಕ್ಕೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಧರ್ಮಸ್ಥಳ ದೇವಾಲಯವನ್ನು ನಾವು ಪ್ರಾಣಕೊಟ್ಟಾದರೂ ಉಳಿಸಿಕೊಳ್ಳುತ್ತೇವೆ. ಹಿಂದೂಗಳಿಗೆ ಅದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಇದರ ವಿರುದ್ಧ ಷಡ್ಯಂತ್ರ ಮಾಡಿದವರಿಗೆ
ದೇಶ-ವಿದೇಶಗಳಿಂದ ಹಣ ಹರಿದು ಬರುತ್ತಿದೆ. ಇದರ ಮೂಲ ಕಂಡು ಹಿಡಿದು ಅಪಪ್ರಚಾರ ಮಾಡುವವರಿಗೆ ತಕ್ಕಪಾಠ ಕಲಿಸಲು ಎಸ್ ಐಟಿ ತನಿಖೆ ಸಾಕಾಗುವುದಿಲ್ಲ. ಇದನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸುಮಾರು 250ಕ್ಕೂ ಹೆಚ್ಚು ಕಾರುಗಳಲ್ಲಿ ಮತ್ತು,5 ಟಿಟಿ ವಾಹನಗಳಲ್ಲಿ ರಾಷ್ಟ್ರಭಕ್ತರು ಮತ್ತು ಕ್ಷೇತ್ರದ ಭಕ್ತರು ಧರ್ಮಸ್ಥಳಕ್ಕೆ ಹೊರಟಿದ್ದೇವೆ. ಧರ್ಮವನ್ನು ಉಳಿಸಲು ಕುತಂತ್ರಿಗಳ ಷಡ್ಯಂತ್ರವನ್ನು ಬಯಲು ಮಾಡಲು ವೀರೇಂದ್ರ ಹೆಗ್ಗಡೆಯವರಿಗೆ ಧೈರ್ಯ ತುಂಬಿ ನೈತಿಕ ಬೆಂಬಲ ನೀಡುವುದಾಗಿ ಹೇಳಿದರು.