ಶಿವಮೊಗ್ಗ, ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಆದೇಶಿಸಿದ್ದಾರೆ.
ಜನ ಸಂಗ್ರಾಮ ಪರಿಷತ್‌ನಿಂದ ದೂರು ಸ್ವೀಕರಿಸಿದ ಸಚಿವರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ನಡೆಸಿ 10 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಕಾಳಿಂಗ ಸರ್ಪ ಸಂಶೋಧನೆ ಹೆಸರಲ್ಲಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ (ಎಆರ್‌ಆರ್‌ಎಸ್) ವಂಚನೆ, ಕಾನೂನು ಉಲ್ಲಂಘನೆ ಬಗ್ಗೆ ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಅಖಿಲೇಶ್ ಚಿಪ್ಲಿ ಅವರು ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕಾಳಿಂಗ ಸರ್ಪ ಮತ್ತದರ ಮರಿಗಳ ವಿಡಿಯೋ ಅಂತಾರಾಷ್ಟ್ರೀಯ ವನ್ಯಜೀವಿ ಚಲನಚಿತ್ರದಲ್ಲಿ ಬಳಕೆ ಮಾಡುತ್ತಿದ್ದು, ಚಿತ್ರೀಕರಣದ ತುಣುಕಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಹಣದ ಆಸೆಗೆ ಸಂಶೋಧನಾ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿ ತಲ್ಲೂರು ಗ್ರಾಮದ ಸರ್ವೆ ನಂ.11ರ ಸೋಮೇಶ್ವರ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಆಗುಂಬೆಯ ಎಆರ್‌ಆರ್‌ಎಸ್‌ನವರು ಅಕ್ರಮವಾಗಿ ಜಮೀನು ಖರೀದಿಸಿದ್ದಾರೆ. ಯಾವುದೇ ಸಂಶೋಧನೆಗೆ ನಿರ್ದಿಷ್ಟ ಸಮಯಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. ಆದರೆ, ಇಲ್ಲಿ ವರ್ಷವಿಡೀ ಸಂಶೋಧನೆ ಹೆಸರಲ್ಲಿ ಛಾಯಾಗ್ರಹಣ ನಡೆಸಲಾಗುತ್ತಿದೆ.
ಕಾಳಿಂಗ ಸರ್ಪಗಳ ಸೆರೆ, ರಕ್ಷಣೆ ಹೆಸರಲ್ಲಿ ಪರಿಶಿಷ್ಟರ ಮೇಲೆ ಆಗುತ್ತಿರುವ ಶೋಷಣೆ ಬಗ್ಗೆ ದೂರುದಾರರು ಪ್ರಸ್ತಾಪಿಸಿದ್ದರು.
ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅರಣ್ಯ ಭೂಮಿ ಒತ್ತುವರಿ, ಕಟ್ಟಡ ನಿರ್ಮಾಣ, ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯೊಳಗೆ ಪರಿಸರ ಸೂಕ್ಷ್ಮ ಪ್ರದೇಶದ ಭೂಮಿ ಖರೀದಿ ಮಾಡಿರುವ ಗಂಭೀರ ಅಕ್ರಮಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದರು.
ಕಾಳಿಂಗ ಸರ್ಪಗಳ ಆವಾಸದಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳು, ಅರಣ್ಯ ಮತ್ತು ವನ್ಯಜೀವಿ ಕಾಯಿದೆಗಳ ನೇರ ಉಲ್ಲಂಘನೆ ಬಗ್ಗೆ ಉನ್ನತ ಮಟ್ಟದ ಪಾರದರ್ಶಕ ತನಿಖೆಗೆ ಮನವಿ ಮಾಡಿದ್ದರು.ಇತ್ತೀಚಿಗೆ ಕೊಡಗು ಸಮೀಪದಲ್ಲಿ ಅಕ್ರಮವಾಗಿ ಕಾಳಿಂಗ ಸರ್ಪ ಹಿಡಿದುಕೊಂಡು ವಿಡಿಯೋ, ಫೋಟೋ ಛಾಯಾಗ್ರಹಣ ಮಾಡುತ್ತಿದ್ದ ಮಹಾರಾಷ್ಟ್ರದ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ಇದು ಮಾಸುವ ಮುನ್ನವೇ ಆಗುಂಬೆಯ ಎ ಆರ್ ಆರ್ ಎಸ್ ಖಾಸಗಿ ಸಂಸ್ಥೆಯ ಸಿಬ್ಬಂದಿ ಅಕ್ರಮವಾಗಿ ಕಾಳಿಂಗ ಸರ್ಪ ಮತ್ತು ಮರಿಗಳನ್ನು ತಂದು ಇಟ್ಟುಕೊಂಡು ತಮ್ಮ ಜಾಗದಲ್ಲಿ ವನ್ಯಜೀವಿ ಛಾಯಾಗ್ರಾಹಕರಿಗೆ ಫೋಟೋ ವಿಡಿಯೋ ಶೂಟ್ ಮಾಡಲು ವ್ಯವಸ್ಥೆ ಮಾಡಿದೆ ಎಂದು ಆರೋಪಿಸಿದ್ದಾರೆ.