ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹುರಳಿ ಗ್ರಾಮ ಪಂಚಾಯತ್‌ನ ಕಂಪ್ಯೂಟರ್ ಆಪರೇಟರ್ ಒಬ್ಬರು ಮನರೇಗಾ (ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ನಿಧಿಯ ಹಣದ ದುರುಪಯೋಗದಲ್ಲಿ ಪಾಲ್ಗೊಂಡಿದ್ದು, ಅವರ ವಿರುದ್ಧ ಎರಡು ವರ್ಷಗಳ ಹಿಂದೆಯೇ ನಡೆದ ತಪಾಸಣೆಯಲ್ಲಿ ಆರೋಪ ಸಾಬೀತಾದರೂ, ಈವರೆಗೆ ಯಾವುದೇ ಶಿಸ್ತಿನ ಕ್ರಮ ಜಾರಿಯಾಗಿಲ್ಲ ಎಂಬ ಆರೋಪಗಳು ಮತ್ತೊಮ್ಮೆ ಬೆಳಕಿಗೆ ಬಂದಿವೆ.
2024ರ ಆಗಸ್ಟ್‌ನಲ್ಲಿ, ಈದಿನ.ಕಾಂ ಈ ಅಕ್ರಮವನ್ನು ಬಹಿರಂಗಪಡಿಸಿತ್ತು. “ಶಿವಮೊಗ್ಗ ಮನರೇಗಾ ಹಣ ದುರುಪಯೋಗ ಸಾಬೀತು: ಗ್ರಾಪಂ ಸಿಬ್ಬಂದಿ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದ ಜಿಪಂ!” ಶೀರ್ಷಿಕೆಯಡಿ ವರದಿಯನ್ನೂ ಪ್ರಕಟಿಸಿತ್ತು. ಅಂದಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಓಂಬುಡ್ಸ್ಮನ್ ಆದೇಶದಂತೆ ಆರೋಪಿಯ ಅಮಾನತು ಹಾಗೂ ಹಣ ವಸೂಲಿ ಮಾಡಲು ಆದೇಶಿಸಿದ್ದರು.
ಆದೇಶ ಹೊರಡಿಸಿದ ಮೇಲೂ ಮನರೇಗಾ ನಿಧಿಗೆ ಹಣ ಜಮೆ ಮಾಡಲಾಗಿಲ್ಲ ಮತ್ತು ಪ್ರಕರಣದ ತನಿಖಾ ವರದಿ ಉಳಿದ ಸದಸ್ಯರಿಗೆ ಬಹಿರಂಗಪಡಿಸಲ್ಪಟ್ಟಿಲ್ಲ. ಇದೀಗ ಲಭ್ಯವಾದ ದಾಖಲೆಗಳ ಪ್ರಕಾರ, ಪ್ರಸ್ತುತ ಸಿಇಒ ಹೇಮಂತ್ ಎನ್ ಅವರು ಆರೋಪಿಯ ಕೋರಿಕೆಯ ಮೇರೆಗೆ ಅವನನ್ನು ಪ್ರಭಾವ ಉಳ್ಳ ಸೊರಬ ತಾಲೂಕಿನ ಮೂಡಿದೊಡ್ಡಿಕೊಪ್ಪ ಪಂಚಾಯತ್‌ಗೆ ವರ್ಗಾವಣೆ ಮಾಡಿದ್ದಾರೆ.
ಸಾಮಾನ್ಯವಾಗಿ ಓಂಬುಡ್ಸ್ಮನ್ ಮೇಲ್ಮನವಿ ಪ್ರಾಧಿಕಾರವು ಎರಡು ತಿಂಗಳೊಳಗೆ ತೀರ್ಪು ನೀಡಬೇಕಾಗಿದ್ದರೆ, ಈಗ 20 ತಿಂಗಳುಗಳ ಕಾಲ ಯಾವುದೇ ತೀರ್ಪು ಪ್ರಕಟವಾಗಿಲ್ಲ. ಈ ನಿರ್ಲಕ್ಷ್ಯ ಕೂಡ ಆಡಳಿತದ ಶಿಥಿಲತೆಗೆ ಸಾಕ್ಷಿಯಾಗಿದೆ ಎನ್ನುವುದು ಸ್ಥಳೀಯರ ಆಕ್ಷೇಪ.
ಇತ್ತೀಚೆಗೆ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಮುಖಂಡ ಮಂಜುನಾಥ್ ಅವರು ಈ ಕುರಿತಂತೆ ಸಿಇಒ ಹೇಮಂತ್ ಅವರನ್ನು ಭೇಟಿ ಮಾಡಿ, ಘಟನೆ ಮತ್ತು ಕ್ರಮವನ್ನು ಪ್ರಶ್ನಿಸಿದಾಗ, “ಈ ವಿಷಯವನ್ನು ಲೋಕಾಯುಕ್ತಕ್ಕೆ ಕೊಡಿ” ಎಂದು ಸಿಇಒ ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಶಿವಮೊಗ್ಗ | ಮನರೇಗಾ ಹಣ ದುರುಪಯೋಗ ಸಾಬೀತು: ಗ್ರಾಪಂ ಸಿಬ್ಬಂದಿ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದ ಜಿಪಂ!
ಇದರಿಂದಾಗಿ ಮಂಜುನಾಥ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಪ್ರಕರಣದ ಕುರಿತು ತನಿಖೆ ನಡೆಸಿ, ಪ್ರಸ್ತುತ ಸಿಇಒ ಮೇಲೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಸಂಪೂರ್ಣ ಪ್ರಕರಣವು, ಅಕ್ರಮ ಸಾಬೀತಾದರೂ ತಕ್ಷಣ ಕ್ರಮವಿಲ್ಲದೆ, ಬದಲಿಗೆ ವರ್ಗಾವಣೆ ಮುಖಾಂತರ ರಕ್ಷಣೆ ಸಿಗುವ, ಹಳೆ ಶೈಲಿಯ ನಿರ್ಲಕ್ಷ್ಯ ಮತ್ತು ಪ್ರಭಾವಶಾಲಿಗಳ ದಬ್ಬಾಳಿಕೆಗೆ ಮತ್ತೊಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಹಲವು ಜನಪರ ಕ್ಯಾಂಪೇನ್‌ಗಳು ಆರೋಪಿಸುತ್ತಿವೆ.
