ಶಿವಮೊಗ್ಗ : ತಾಲೂಕಿನ ಅಗಸವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಯ್‌ಹೊಳೆ, ಲೇಬರ್ ಕಾಲೋನಿ, ಭೋವಿ ಕಾಲೋನಿ, ಭಾರತೀನಗರ ಮತ್ತು ಗೋವಿಂದಾಪುರಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತ ಹೆಚ್ಚಾಗಿದ್ದು, ರೈತರು ಬೆಳೆ ಕೈಗೆ ಸಿಗದೆ ಕಂಗಾಲಾಗಿದ್ದಾರೆ. ಆನೆಗಳ ಕಾಟದಿಂದ ಬೆಳೆ ಕೈಗೆ ಸಿಗದೆ ರೈತರು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇಲ್ಲಿನ ಆರ್ ಟಿ ಓ ರಸ್ತೆಯಲ್ಲಿರುವ ವನ್ಯಜೀವಿ ವಿಭಾಗದ ಅರಣ್ಯ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಆನೆಗಳನ್ನು ಬೆದರಿಸಿ ಓಡಿಸುವ ಕೆಲಸವನ್ನು ಮಾಡಬೇಕು. ಇಲ್ಲವಾದಲ್ಲಿ ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗಲಿದೆ.
ಮೊನ್ನೆಯಷ್ಟೇ ರೈತನೊಬ್ಬ ವಿಷ ಸೆವಿಸಲು ಮುಂದಾದಾಗ ಗ್ರಾಮಸ್ಥರು ವಿಷಯ ಅರಿತು ಆತನ ಮನವೊಲಿಸಿದ್ದಾರೆ. ಒಂದು ವೇಳೆ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವವನ್ನು ಅರಣ್ಯ ಇಲಾಖೆಯ ಎದುರು ತಂದಿಟ್ಟು ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಸಿದರು.
ಆನೆ ಹಾವಳಿಯಿಂದ ಪ್ರತಿ ರೈತರ ಬೆಳೆ ಸಂಪೂರ್ಣ ಹಾಳಾಗಿದೆ. ಅಡಿಕೆ ತೋಟಗಳ ಮರಗಳು ನೆಲಕಚ್ಚಿವೆ.
ಎರಡು ತಿಂಗಳಿಂದ ಸತತವಾಗಿ ಆನೆ ಕಾಟ ಜಾಸ್ತಿಯಾಗಿದೆ. ಎಷ್ಟೇ ಬೆದರಿಸಿ ಕಳುಹಿಸಿದರೂ ಆನೆ ಮತ್ತೆ ವಾಪಸ್ ಬರುತ್ತಿವೆ. ಆದ್ದರಿಂದ ಆನೆ ಕಾಟದಿಂದ ಮುಕ್ತಿ ಕೊಡಬೇಕೆಂದು ಕೋರಿದರು
ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಜೊತೆಗೆ ಹಲವಾರು ಬಾರಿ ಆನೆ ಹೊಡೆದೋಡಿಸಿದ್ದಾರೆ. ಇಲಾಖೆ ರೈತರಿಗೆ ಮೈಕನ್ನು ನೀಡಿದೆ. ಪಟಾಕಿಯನ್ನೂ ಸಿಡಿಸಲಾಗುತ್ತಿದೆ. ಒಮ್ಮೆ ಓಡಿಹೋದ ಆನೆ ಮರಳಿ ಮತ್ತೆ ಬರುತ್ತಿದೆ ಎಂದ ಅವರು, ರೈತರು ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು ಅವರಿಗೆ ಮನೆಯಿಂದ ಹೊರಬರದಂತಹ ಸ್ಥಿತಿ ಎದುರಾಗಿದೆ. ಸಂಜೆಯಾದಂತೆ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿ ಪರಿಣಮಿಸಿದೆ . ಆನೆ ಬರದಂತೆ ಟ್ರಂಚ್ ತೆಗೆಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ವಾಣಿ ಹೆಗಡೆ, ಅರಣ್ಯ ಅಧಿಕಾರಿಗಳು ಈ ಬಗ್ಗೆ ಸತತವಾಗಿ ಕ್ರಮ ಕೈಗೊಂಡಿದ್ದಾರೆ. ಆದರೆ ಬೆದರಿಸಿ ಓಡಿಸಿದ ಆನೆಗಳು ಮತ್ತೆ ವಾಪಸ್ ಬರುತ್ತಿವೆ. ಇದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಪಟಾಕಿ, ಮೈಕ್‌ಗಳನ್ನು ನೀಡಲಾಗಿದೆ. ಆನೆಗಳ ಹಾವಳಿಯನ್ನು ನಿಯಂತ್ರಿಸಲು ಇಲಾಖೆ ಸಹ ಯತ್ನಿಸುತ್ತಿದೆ. ಅರಣ್ಯ ಸಿಬ್ಬಂದಿಗಳು ಸಹ ಹಗಲು ರಾತ್ರಿ ಎನ್ನದೆ ಕಾಡಂಚಿನ ಭಾಗದಲ್ಲಿ ಸುತ್ತಾಡುತ್ತಿದ್ದಾರೆ ಇವರಿಗೆ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ರೈತರಾದ ಪೆರುಮಾಳ್, ಗೋವಿಂದ, ನಾಗರಾಜ, ಮಣಿಕಂಠ, ತಮ್ಮಣ್ಣ, ಎಸ್ ಟಿ ಮಂಜುನಾಥ ಸೇರಿದಂತೆ ನೂರಾರು ರೈತರು ಹಾಜರಿದ್ದರು.