ಶಿವಮೊಗ್ಗ, ಜಾತಿ ಗಣತಿ ಸಂದರ್ಭದಲ್ಲಿ ಮೂಲ ದೀವರು ಜಾತಿಯಿಂದ ಈಡಿಗ ಜಾತಿಗೆ ಜಾತ್ಯಾಂತರ ಹೊಂದಿದವರು ಹಾಗೂ ಈಡಿಗ ಜಾತಿಯ ಅಡಿಯಲ್ಲಿ ದೀವರು ಎಂದು ಉಪಜಾತಿಯಾಗಿ ಗುರುತಿಸಿಕೊಂಡವರು ತಮ್ಮ ಮೂಲ ಜಾತಿಯಾದ ದೀವರು ಜಾತಿಯನ್ನು “ದೀವರು” ಎಂದು ಮುಖ್ಯ ಜಾತಿಯನ್ನಾಗಿ ನಮೂದಿಸುವಂತೆ ದೀವರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.
ಶಿವಮೊಗ್ಗದಲ್ಲಿ ಬಹುಸಂಖ್ಯಾತರಾಗಿರುವ ಹಾಗೂ ಉತ್ತರ ಕನ್ನಡ ಮುತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಇರುವಂತಹ ದೀವರ ಸಮುದಾಯದವರು ಕನ್ನಡ ನಾಡಿನಲ್ಲಿ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದಾರೆ.
ಮೂಲತಃ ಬುಡಕಟ್ಟು ಜನಾಂಗದವರಾದ ದೀವರು ಸ್ಥಿತ್ಯಂತರಗೊಂಡ ಸಂದರ್ಭದಲ್ಲಿ ಅರಸೊತ್ತಿಗೆಯ ಅಡಿಯಲ್ಲಿ ನೂರಾರು ವರ್ಷ ಸೇನೆಯಲ್ಲಿ ಉನ್ನತ ಹುದ್ದೆಗಳಲ್ಲಿ ಮತ್ತು ಸೈನಿಕರಾಗಿ ಸೇವೆ ಸಲ್ಲಿಸುವ ಮೂಲಕ ಕ್ಷಾತ್ರಗುಣವನ್ನೂ ಸಹ ಮೆರೆದಿದ್ದಾರೆ.
ಉಳುವವನೆ ಹೊಲದೊಡೆಯ ಕಾನೂನು ಜಾರಿಯಾದ ನಂತರದಲ್ಲಿ – ಭೂ ಮಾಲೀಕರಾಗಿ ದೀವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ಮೂಲತ: ದೀವರು ರಾಜ್ಯದಲ್ಲಿ ಸುಮಾರು 6-8 ಲಕ್ಷ ಜನರಿದ್ದು ಅವರಲ್ಲಿ ಬಹುತೇಕರು ಇತ್ತೀಚಿನ ದಿನಗಳಲ್ಲಿ ಇತಿಹಾಸದ ಅರಿವಿನ ಕೊರತೆಯಿಂದಲೋ ಅಥವಾ ಕೀಳರಿಮೆಯಿಂದಲೋ ತಮ್ಮ ಜಾತಿಯನ್ನು ಈಡಿಗ ಎಂದು ನಮೂದಿಸಿಕೊಳ್ಳುವ ಮುಖೇಣ ಜಾತ್ಯಾಂತರ ಹೊಂದಿ ದೀವರು ಎನ್ನುವಂತ ಒಂದು ಶ್ರೀಮಂತ ಪರಂಪರೆ ಕಣ್ಮರೆಯಾಗುವಂತ ಸಂದರ್ಭಕ್ಕೆ ಕಾರಣರಾಗಿದ್ದಾರೆ ಎಂದರು.
ಹಾವನೂರು ವರದಿ ಜಾರಿಗೊಳ್ಳುವ ಸಂದರ್ಭದಲ್ಲಿ ಪರಿಶಿಷ್ಟರ ಗುಂಪಿಗೆ ಸೇರಬೇಕಾಗಿದ್ದಂತ ಅವಕಾಶದಿಂದ ವಂಚಿತರಾಗಿದ್ದಾರೆ. ಬಹುತೇಕ ದೀವರು ಸಾಂದರ್ಭಿಕ ಶಿಶುಗಳಾಗಿ ಈಡಿಗ ಎಂದು ಮುಖ್ಯ ಜಾತಿಯನ್ನಾಗಿ ಗುರುತಿಸಿಕೊಂಡಿರುತ್ತಾರೆ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಒಟ್ಟು 1400 ಜಾತಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಕಲ್ಪಿಸಲಾಗುವ ಆರ್ಥಿಕ ಮತ್ತು ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ, ದೀವರು ಎಂದೇ ನಮೂದಿಸಬೇಕೆಂದು ಮನವಿ ಮಾಡಿದರು.
ಮೂಲತಃ ದೀವರ ಜಾತಿಯವರಾಗಿ ಈಗ ಈಡಿಗ ಜಾತಿಯಲ್ಲಿ ಗುರುತಿಸಿಕೊಂಡು ಸರ್ಕಾರಿ ದಾಖಲೆಗಳಲ್ಲಿ ಈಡಿಗ ಎಂದು ನಮೂದಾಗಿರುವ, ದೀವರ ಸಮುದಾಯದವರಿಗೆ ಈಡಿಗ ಜಾತಿಯಿಂದ ಪುನಃ ದೀವರು ಜಾತಿಗೆ ಜಾತ್ಯಾಂತರ ಹೊಂದಲು ಅವಕಾಶ ನೀಡುವ ಮುಖೇನ ಸರ್ಕಾರಿ ದಾಖಲೆಗಳಲ್ಲಿ ತಮ್ಮ ಜಾತಿಯನ್ನು ಈಡಿಗ ಜಾತಿ ಬದಲಿಗೆ ದೀವರು ಜಾತಿಯನ್ನು ನಮೂದಿಸಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಆದೇಶ ನೀಡಬೇಕೆಂದು ಮನವಿ ಮಾಡಿದರು.