ಶಿವಮೊಗ್ಗ,ಆರ್ ಎಸ್ ಎಸ್ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇತ್ತೀಚೆಗೆ ಜಾತ್ಯತೀತ ಮತ್ತು ಸಮಾಜವಾದ ಎಂಬ ಶಬ್ದವನ್ನು ಸಂವಿಧಾನ ಪೀಠಿಕೆಯಿಂದ ತೆಗೆಯಬೇಕೆಂದು ಹೇಳಿರುವುದರ ಬಗ್ಗೆ ಕಾಂಗ್ರೆಸ್ ನಾಯಕರು ಮನಸೋ ಇಚ್ಛೆ ಹೇಳೆ ನೀಡುತ್ತಿರುವುದು ಖಂಡನೀಯ ಎಂದಿರುವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, ಇಂದಿರಾ ಗಾಂಧಿ ಸಂವಿಧಾನದ ಮೂಲ ಪೀಠಿಕೆ ಯನ್ನೇ ಬದಲಾಯಿಸಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ?
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದ ಯಾವುದೇ ದೇಶವು ಇದುವರೆಗೂ ತನ್ನ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಿಲ್ಲ, ಆದರೆ ಭಾರತದಲ್ಲಿ ತಮ್ಮಿಚ್ಛಗನುಗುಣವಾಗಿ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಲಾಗಿದೆ. ದೇಶದ ಮೇಲೆ ಕರಾಳ ತುರ್ತುಪರಿಸ್ಥಿತಿಯನ್ನು ಹೇರಿದ ಇಂದಿರಾ ಗಾಂಧಿಯವರು ತಮ್ಮ ಸರ್ವಾಧಿಕಾರಿ ಮನಸ್ಥಿತಿಯಲ್ಲಿ 1976ರ ಡಿಸೆಂಬರ್ 18ರಂದು ಸಂವಿಧಾನದ ಮೂಲ ಪೀಠಿಕೆಯನ್ನೇ ಬದಲಾಯಿಸಿ ಜಾತ್ಯಾತೀತ ಸಮಾಜವಾದಿ ಎಂಬ ಎರಡು ಪದಗಳನ್ನು ಸೇರಿಸಿದರು.
ಈ ವಿಷಯವಾಗಿ ಸಂಸತ್ತಿನಲ್ಲಿ ಯಾವುದೇ ಚರ್ಚೆಯೂ ಆಗಲಿಲ್ಲ ಎಂದರು. 1973ರಲ್ಲಿ ಕೇರಳ ಹೈಕೋರ್ಟ್ ಹಾಗು ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನಲ್ಲಿ ಸಂವಿಧಾನದ ಮೂಲಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗೂ ಮೂಲ ಆಶಯಗಳನ್ನು ಬದಲಾಯಿಸಲು ಹೋಗುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಹಾ ಇಂದಿರಾಜಿಯವರು ಸಂವಿಧಾನದ ಮೂಲ ಪೀಠಿಕೆಯನ್ನೇ ಬದಲಾಯಿಸಿದ್ದು ನ್ಯಾಯಾಂಗದ ಮೇಲಿನ ದಾಳಿ ಹಾಗು ಸಂವಿಧಾನ ವಿರೋಧಿ ಧೋರಣೆಯಲ್ಲವೇ ಎಂದ ಅವರು ಪ್ರಶ್ನಿಸಿದರು.
ಸಂವಿಧಾನದ ಪ್ರತಿಯನ್ನು ಕೈಯಲ್ಲೇ ಹಿಡಿದುಕೊಂಡಿರುವ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಹಾಗು ಯಾವಾಗಲೂ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇತಿಹಾಸದ ಅರಿವಿಲ್ಲ.
ಹೊಸಬಾಳೆಯವರ ಹೇಳಿಕೆಯನ್ನು ಸಂವಿಧಾನದ ಮೇಲಿನ ದಾಳಿ ಎಂದು ಹೇಳುತ್ತಿರುವ ಇವರು ನಿಜವಾಗಿ ಸಂವಿಧಾನದ ಮೇಲೆ ದಾಳಿ ಮಾಡಿದವರು ಕಾಂಗ್ರೆಸಿಗರೇ ಎಂಬ ಅರಿವಿಲ್ಲವೇ? ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದಿ ಪದಗಳನ್ನು ಸೇರಿಸುವ ವಿಷಯವಾಗಿ ಸಂವಿಧಾನ ರಚನಾ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಸ್ವತಃ ಅಂಬೇಡ್ಕರ್ ವಿರೋಧಿಸಿದ್ದರು. ಹಾಗೂ 1948ರಲ್ಲಿ ಈ ವಿಷಯದ ಕುರಿತಾಗಿ ನಡೆದ ಸಭೆಯಲ್ಲಿ ಅಂದಿನ ಪ್ರಧಾನಿ ನೆಹರು ಹಾಗು ಅಂಬೇಡ್ಕರ್ ಇಬ್ಬರೂ ಈ ಪದಗಳನ್ನು ಸೇರಿಸುವುದು ಬೇಡ ಎಂಬ ನಿಲುವನ್ನು ತಾಳಿದ್ದರು ಎಂಬುದು ವಿಶೇಷ.
ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಸಂವಿಧಾನದ ಆತ್ಮವಾಗಿರುವ ಪೀಠಿಕೆಯನ್ನು ಬದಲಾಯಿಸಿದ್ದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ, ಎಂದರು.
ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿ ಕಾರ್ಯಾಂಗ ನ್ಯಾಯಾಂಗ ಪತ್ರಿಕಾರಂಗದ ಚಟುವಟಿಕೆಗಳನ್ನು ತನ್ನ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಂಡ ಇಂದಿರಾ ಗಾಂಧಿಯವರು ಸಂವಿಧಾನದ ಮೂಲ ಸ್ವರೂಪವನ್ನೇ ಬದಲಾಯಿಸಿದ್ದು ಈಗಲಾದರೂ ಚರ್ಚೆಯಾಗಬೇಕು ಹಾಗೂ ಅಂಬೇಡ್ಕರ್ ಅವರ ಮೂಲ ಸಂವಿಧಾನಕ್ಕೆ ಧಕ್ಕೆಯಾಗದಂತೆ ಜಾತ್ಯಾತೀತ ಸಮಾಜವಾದಿ ಪದಗಳ ಬಗ್ಗೆ ಸಮಗ್ರವಾದ ಚರ್ಚೆ ನಡೆದು ಅಭಿಪ್ರಾಯ ಸಂಗ್ರಹವಾಗಿ ಪ್ರಜಾಪ್ರಭುತ್ವಕ್ಕೆ ಅನುಗುಣವಾದ ತೀರ್ಮಾನಗಳು ಈಗಲಾದರೂ ಆಗಬೇಕು ಎಂದರು.