ಸ್ವಂತ ಊರಿದ್ದರೂ ಅಲ್ಲಿ ಅವರ ವಾಸವಿಲ್ಲ. ಊರೂರು ಸುತ್ತುತ್ತಾ ಕಬ್ಬು ಕಡಿಯುವುದೇ ಅವರ ಕೆಲಸ. ಆಕಾಶವೇ ಸೂರು ನೆಲವೇ ಹಾಸಿಗೆ, ರೈತರ ಜಮೀನಿನಲ್ಲಿರುವ ಕಬ್ಬು ಕಡಿಯುತ್ತಾ, ರಾತ್ರಿ ಅದೇ ಹೊಲದಲ್ಲಿ ಜೀವನ ನಡೆಸುವ ಕಾರ್ಮಿಕರ ಬದುಕು ಬವಣೆ ಇದು!
ಬೀದರ್ ಜಿಲ್ಲೆಯಲ್ಲಿ ಮಳೆ ವಿರಮಿಸಿದ್ದು, ಚಳಿಯ ಕಣ್ಣುಮುಚ್ಚಾಲೆ ಜನರನ್ನು ಥಂಡಾಗೊಳಿಸಿದೆ. ಈ ಮಧ್ಯೆ ಜಿಲ್ಲೆಯ ಮುಖ್ಯ ಬೆಳೆಗಳಾದ ತೊಗರಿ, ಕಡಲೆ, ಜೋಳ ಹಸಿರಿನಿಂದ ಮೈದುಂಬಿ ಕುಣಿಯುತ್ತಿದರೆ, ತಲೆಯೆತ್ತರಕ್ಕೆ ಬೆಳೆದು ನಿಂತ ಕಬ್ಬು ಕಟಾವು ಚುರುಕುಗೊಂಡಿದೆ. ಜಿಲ್ಲಾದ್ಯಂತ ಕಾರ್ಮಿಕರು ಜಮೀನುಗಳಲ್ಲಿ ಕಬ್ಬು ಕಟಾವು, ಎತ್ತಿನ ಬಂಡಿ, ಲಾರಿ, ಟ್ರಾಕ್ಟರ್‌ಗಳಲ್ಲಿ ಸಾಗಿಸುವ ನೋಟ ಎಲ್ಲೆಡೆ ಕಂಡು ಬರುತ್ತಿದೆ.
ಕಬ್ಬು ಕಟಾವಿಗೆ ಜಿಲ್ಲೆಯಲ್ಲಿ ಆಳುಗಳ ಕೊರತೆ ವ್ಯಾಪಕವಾಗಿದೆ. ಹೀಗಾಗಿ ನೆರೆಯ ತೆಲಂಗಾಣ, ಮಹಾರಾಷ್ಟ್ರದಿಂದ ಪ್ರತಿ ವರ್ಷ ಸಾವಿರಾರು ಕಾರ್ಮಿಕರು ಜಿಲ್ಲೆಗೆ ಬರುತ್ತಾರೆ. ಕಬ್ಬು ಕಟಾವಿಗೆ ಬಂದು ಮೂರ್ನಾಲ್ಕು ತಿಂಗಳು ಇಲ್ಲೇ ಸಂಚಾರಿ ಜೀವನ ನಡೆಸುತ್ತಾರೆ. ಈ ಕುಟುಂಬಗಳ ಸಾವಿರಾರು ಮಕ್ಕಳು ಶಿಕ್ಷಣ, ಆರೋಗ್ಯ, ರಕ್ಷಣೆ ಇಲ್ಲದೇ ಬಾಳ್ವೆ ನಡೆಸುತ್ತಾರೆ.

ಜಿಲ್ಲೆಯಲ್ಲಿ ಐದಾರು ಸಕ್ಕರೆ ಕಾರ್ಖಾನೆಗಳಿವೆ. ಅದರಲ್ಲಿ ನಾಲ್ಕು ಕಾರ್ಖಾನೆಗಳು ಹೆಚ್ಚು ಕಬ್ಬು ನುರಿಸುವ ಸಾಮರ್ಥ್ಯ ಹೊಂದಿವೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 18,460 ಹೆಕ್ಷೇರ್ ಕಬ್ಬು ಬೆಳೆದಿದ್ದಾರೆ. ಕಬ್ಬು ಬೆಳೆಯುವವರು ನಾವಾದರೂ, ಕಟಾವು ಮಾಡಲು ಮಹಾರಾಷ್ಟ್ರದ ಭೀಡ್, ನಾಂದೇಡ್, ಮುಖೇಡ್, ತೆಲಂಗಾಣದ ಖರಸಗುತ್ತಿ ಮುಂತಾದ ಪ್ರದೇಶಗಳಿಂದ ಸಾವಿರಾರು ಕಾರ್ಮಿಕರು ಪುಟ್ಟ ಮಕ್ಕಳು, ಬಾಣಂತಿ, ಗರ್ಭಿಣಿಯರೂ ಸೇರಿದಂತೆ ವಲಸೆ ಬರುತ್ತಾರೆ. ಇದು ಹೊಸದೇನಲ್ಲ. ಕಳೆದ 25-30 ವರ್ಷಗಳಿಂದ ಇಲ್ಲಿಗೆ ಬರುತ್ತಾರೆ. ಇವರನ್ನು ಕರೆತರಲು ಕಾರ್ಖಾನೆಗಳ ಗುತ್ತಿಗೆದಾರರು, ಮಧ್ಯವರ್ತಿಗಳು ಅವರ ಹಳ್ಳಿಗಳಿಗೆ ತೆರಳಿ ಮುಂಗಡವಾಗಿ ಹಣ ನೀಡಿ ಕಾರ್ಮಿಕರನ್ನು ಕರೆತರುವುದು ರೂಢಿಯಂತಿದೆ. ಬಹುಶಃ ಈ ಕಾರ್ಮಿಕರು ಬರದಿದ್ದರೆ ಜಿಲ್ಲೆಯ ಕಬ್ಬು ಕಾರ್ಖಾನೆಗಳಿಗೆ ಹೋಗುವುದು ಕಷ್ಟ!
ಕಳೆದ ಒಂದು ತಿಂಗಳಿಂದ ಜಿಲ್ಲಾದ್ಯಂತ ವಿವಿಧ ತಾಲೂಕಿನ ವ್ಯಾಪ್ತಿಯ ಹಳ್ಳಿಗಳ ಕೆರೆ, ಕಟ್ಟೆ ನದಿ, ಬಯಲು ಪ್ರದೇಶದಲ್ಲಿ ಗುಡಿಸಲು ಹಾಕಿ ನೆಲೆಸಿದ್ದಾರೆ. ಇನ್ನು ಒಂದು ಸಕ್ಕರೆ ಕಾರ್ಖಾನೆಗಳ ಸಮೀಪ 100ಕ್ಕೂ ಅಧಿಕ ಕುಟುಂಬಗಳು ತಾತ್ಕಾಲಿಕ ಗುಡಿಸಲಲ್ಲಿ ಠಿಕಾಣಿ ಹೂಡಿದ್ದಾರೆ. ಕೆಲ ದಂಪತಿ ಮಕ್ಕಳು, ಜಾನುವಾರು ಸಮೇತ ಬಂದಿದ್ದಾರೆ. ಕೆಲವರು ಮಕ್ಕಳನ್ನು ಅಜ್ಜ-ಅಜ್ಜಿ, ಸಂಬಂಧಿಕರ ಬಳಿ ಬಿಟ್ಟು ಬಂದಿದ್ದಾರೆ. ಬಯಲಿನಲ್ಲಿ ವಾಸಿಸುವ ಇವರಿಗೆ ಹಾವು, ಚೇಳಿನಂತಹ ವಿಷಜಂತುಗಳಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳುವ ಭಯದ ಜೊತೆಗೆ ತಮ್ಮೊಂದಿಗೆ ಬಂದ ಮಕ್ಕಳ, ಮಹಿಳೆಯರ ಜೀವ, ಮಾನ ಕಾಪಾಡಿಕೊಳ್ಳುವ ಸವಾಲು. ದೀಪದ ಬೆಳಕಿನಲ್ಲಿ ಬದುಕು ದೂಡುವ ಮಹಿಳೆ, ಪುರುಷರಿಗೆ ಸ್ನಾನ, ಶೌಚಕ್ಕೆ ಬಯಲೇ ಗತಿ ಎಂಬಂತಿದೆ.
ಒಂದು ಟನ್ ಕಬ್ಬು ಕಟಾವಿಗೆ ₹600 ರಿಂದ ₹700 ಕೂಲಿ. ದಂಪತಿ ನಸುಕಿನ ನಾಲ್ಕೈದು ಗಂಟೆಗೆ ಹೋದರೆ ಮಧ್ಯಾಹ್ನ ತನಕ 2-3 ಟನ್ ಕಬ್ಬು ಕಟಾವು ಮಾಡುತ್ತಾರೆ. ಮಧ್ಯಾಹ್ನ ಅವರದೇ ಎತ್ತಿನ ಬಂಡಿಯಲ್ಲಿ ತುಂಬಿಸಿ ಕಾರ್ಖಾನೆಗೆ ಸಾಗಿಸುತ್ತಾರೆ. ಇದರಿಂದ ದಿನಕ್ಕೆ ಎರಡು, ಎರಡೂವರೆ ಸಾವಿರ ಆದಾಯ. ಒಂದು ಕಾರ್ಖಾನೆಗೆ ಸುಮಾರು ₹2 ರಿಂದ ₹3 ಸಾವಿರ ಕಾರ್ಮಿಕರ ಅಗತ್ಯವಿದೆ. ಅವರಲ್ಲಿ ಶೇ.90ರಷ್ಟು ಕಾರ್ಮಿಕರ ಹೊರ ರಾಜ್ಯದವರೇ ಆಗಿದ್ದಾರೆ. ಎತ್ತಿನ ಗಾಡಿ, ಟ್ರಾಕ್ಟರ್, ಲಾರಿ ಜೊತೆಗೆ ವಲಸೆ ಬಂದ ಇವರಲ್ಲಿ ಬಹುತೇಕರಿಗೆ ಕನ್ನಡ ಬರಲ್ಲ. ಮರಾಠಿ ಮಾತಾಡುವ ಇವರು ಕಬ್ಬಿನ ಕಟಾವು ಕೆಲಸಕ್ಕೆ ಮಾತ್ರ ಒಡನಾಟ ಇದೆ.

ಒಂದು ದಿನಕ್ಕೆ ಸಾವಿರಾರು ರೂಪಾಯಿ ದುಡಿಮೆ ಗಳಿಸುವ ಭರದಲ್ಲಿ ಕಾರ್ಮಿಕರು ತಮ್ಮದೇ ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಆರೋಗ್ಯದ ಅರಿವು ನೀಡುವಲ್ಲೂ ನಿರ್ಲಕ್ಷಿಸಲಾಗಿದೆ. ಸಕ್ಕರೆ ಸಿಹಿ ಮೆಲ್ಲುವವರ ಮಧ್ಯೆ ಕಹಿ ಸತ್ಯಗಳು ಮರೆಯಾಗಿವೆ. ಕಡ್ಡಾಯ ಶಿಕ್ಷಣ, ಮೂಲಭೂತ ಹಕ್ಕು, ಮಾನವ ಹಕ್ಕು ಹಾಗೂ ಕಾರ್ಮಿಕರ ಕಾಯ್ದೆಗಳೆಲ್ಲವೂ ಜೋಪಡಿಯಲ್ಲಿ ನಿದ್ದೆ ಹೋಗಿವೆ. ʼನೊಂದವರ ನೋವ ನೋಯದವರೆತ್ತ ಬಲ್ಲರೊʼ ಎಂಬಂತೆ ಕಾರ್ಮಿಕರ ಕುಟುಂಬದ ಕರುಣಾಜನಕ ಕಥೆ ಕಾರ್ಖಾನೆಯ ಮಾಲಿಕರಿಗಾಗಲಿ, ಆಡಳಿತ ವ್ಯವಸ್ಥೆಯ ಧಣಿಗಳಿಗೆ ಕಂಡಿತ್ತಾದರೂ ಹೇಗೆ?
ಕಳೆದ ನಾಲ್ಕೈದು ವರ್ಷಗಳಿಂದ ಕಬ್ಬು ಕಡಿಯಲು ಕುಟುಂಬ ಸಮೇತ ಬರುತ್ತೇವೆ. ನಾಲ್ಕೈದು ತಿಂಗಳಲ್ಲಿ ಎರಡು, ಮೂರು ಲಕ್ಷ ಆದಾಯ ಮಾಡುತ್ತೇವೆ. ಉಳಿದ ತಿಂಗಳ ನಮ್ಮೂರಿನ ಕೃಷಿ ಭೂಮಿಯಲ್ಲಿ ಕೂಲಿ ಮಾಡುತ್ತೇವೆ. ಪುಟ್ಟ ಮಕ್ಕಳನ್ನು ಜೊತೆಯಲ್ಲಿ ತಂದಿದ್ದೇವೆ, ದೊಡ್ಡ ಮಕ್ಕಳು ಊರಿನಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕೆಲ ದಂಪತಿ ಮಕ್ಕಳನ್ನು ಶಾಲೆ ಬಿಡಿಸಿ ಕರೆ ತಂದಿದ್ದಾರೆ. ಎಲ್ಲಿ ಕಬ್ಬು ಕಟಾವು ಮಾಡಬೇಕೆಂದು ಗುತ್ತಿಗೆದಾರ ಹೇಳುತ್ತಾರೋ ಆ ಊರಿನ ಜಮೀನಿಗೆ ತೆರಳುತ್ತೇವೆ. ಸಂಜೆ ಮತ್ತೆ ಮರಳಿ ಗೂಡು ಸೇರುತ್ತೇವೆ. ಎಂದು ಭಾಲ್ಕಿ ತಾಲೂಕಿನಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕ ಸಾರಾನಾಥ ಹೇಳುತ್ತಾರೆ.
ʼಪ್ರತಿ ವರ್ಷ ಕಬ್ಬು ಕಟಾವು ಕೆಲಸಕ್ಕೆ ಕುಟುಂಬ ಸಮೇತ ಬರುತ್ತೇವೆ. ನಸುಕಿನ 4 ಗಂಟೆಗೆ ಎದ್ದು ಅಡುಗೆ ಮಾಡಿ ಬುತ್ತಿ ಕಟ್ಟಿಕೊಂಡು ಹೊರಡುತ್ತೇವೆ. ಪುಟ್ಟ ಕಂದಮ್ಮಗಳಿದ್ದರೆ ಜೊತೆಗೆ ಕರೆದೊಯ್ಯುತ್ತೇವೆ. ಹೆಚ್ಚಿನ ಆದಾಯ ಗಳಿಸಬಹುದು ಎನ್ನುವ ಕಾರಣದಿಂದ ಇಲ್ಲಿಗೆ ವಲಸೆ ಬರುತ್ತೇವೆ. ಆದರೆ, ನಮಗೆ ಯಾವುದೇ ವ್ಯವಸ್ಥೆ ಇರಲ್ಲ. ಗುಡಿಸಲಲ್ಲಿ ವಿದ್ಯುತ್ ಇರಲ್ಲ, ಸ್ನಾನ, ಶೌಚಕ್ಕೆ ಬಯಲೇ ಗತಿ. ಇನ್ನು ಮಹಿಳೆ, ಗರ್ಭಿಣಿಯರು ಮೈಕೊರೆಯುವ ಚಳಿಯಲ್ಲಿ ಕೆಲಸಕ್ಕೆ ಹೋಗಬೇಕು. ಗಂಡ-ಹೆಂಡತಿ ಜೋಡಿ ಕೆಲಸ ಮಾಡಿದರೆ ಮಾತ್ರ ದಿನಕ್ಕೆ ಎರಡು ಸಾವಿರ ಆದಾಯ. ಇದರಲ್ಲಿ ಊಟ, ಖರ್ಚು ಎಲ್ಲವೂ ನಾವೇ ನೋಡಿಕೊಳ್ಳಬೇಕುʼ ಎಂದು ಮಹಾರಾಷ್ಟ್ರದಿಂದ ಬಂದ ಕಾರ್ಮಿಕ ಮಹಿಳೆಯೊಬ್ಬರು ಹೇಳುತ್ತಾರೆ.

ʼಕಾರ್ಮಿಕರನ್ನು ಕರೆತರಲು ಲಕ್ಷಾಂತರ ರೂಪಾಯಿ ಹಣ ಪಡೆಯುವ ಗುತ್ತಿಗೆದಾರರು ಕಾರ್ಮಿಕರಿಗೆ ನೀಡುವ ಕೂಲಿ ಸರಿಯಾಗಿ ನೀಡದೇ ಆಳುಗಳಿಗೆ ವಂಚಿಸುತ್ತಾರೆ. ಅಲ್ಲದೇ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳು ಮತ್ತು ರಕ್ಷಣೆ ನೀಡುವುದು ಮಾಡುವುದಿಲ್ಲ. ಬಡತನದಿಂದ ಕೂಲಿಗಾಗಿ ವಲಸೆ ಬಂದ ಕುಟುಂಬಗಳು ಅವ್ಯವಸ್ಥೆಯಲ್ಲಿ ದಿನ ದೂಡುವಂತಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಹೆಚ್ಚಿನ ನಿಗಾವಹಿಸಬೇಕುʼ ಎಂದು ಸಿಪಿಐ ಮುಖಂಡ ಬಾಬುರಾವ ಹೊನ್ನಾ ಆಗ್ರಹಿಸಿದರು.
ಈ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮಹೇಶ ಕುಳಲಿ ʼಈದಿನ.ಕಾಮ್ʼ ಜೊತೆ ಮಾತನಾಡಿ, ʼಕಬ್ಬು ಕಟಾವಿಗೆ ಬಂದ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ನಮ್ಮ ಇಲಾಖೆಯಲ್ಲಿ ಯಾವುದೇ ಅವಕಾಶ ಇಲ್ಲ. ಬಗ್ಗೆ ಕಾರ್ಖಾನೆ ಮಾಲಿಕರೊಂದಿಗೆ ಮಾತನಾಡಲಾಗುವುದು. 14 ವರ್ಷದೊಳಗಿನ ಮಕ್ಕಳು ಕೂಲಿ ಕೆಲಸಕ್ಕೆ ತೆರಳುವುದು ಕಂಡು ಬಂದರೆ ಅಂತಹ ಮಕ್ಕಳನ್ನು ರಕ್ಷಿಸಲಾಗುವುದು. ಕಬ್ಬು ಕಟಾವಿಗೆ ಬಂದ ಕಾರ್ಮಿಕರು ನೆಲೆಸಿರುವ ಗುಡಿಸಲುಗಳಿಗೆ ಕಾರ್ಮಿಕ ಇಲಾಖೆಯ ಸಿಬ್ಬಂದಿ ತೆರಳಿ ಜಾಗೃತಿ ಮೂಡಿಸಲಾಗುವುದು. ಈ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲಿಕರಿಗೂ ತಿಳಿಸಲಾಗುವುದುʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳು ಈ ಬಾರಿಯಾದರೂ ಈಡೇರಲಿ
ʼನಮ್ಮ ಜಿಲ್ಲೆಯಲ್ಲಿ ಈ ಹಿಂದೆ ಸ್ಥಳೀಯ ಕಾರ್ಮಿಕರೇ ಕಬ್ಬು ಕಟಾವು ಮಾಡಿ ಸಾಗಿಸುತ್ತಿದ್ದರು. ಕಳೆದ 30 ವರ್ಷಗಳಿಂದ ಸ್ಥಳೀಯವಾಗಿ ಕಬ್ಬು ಕಟಾವು ಮಾಡುವ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಇರುವ ಕಾರ್ಮಿಕರು ಕಬ್ಬು ಕಡಿಯುವ ಆಸಕ್ತಿ ಇಲ್ಲ. ಹೀಗಾಗಿ ಕಬ್ಬು ಕಟಾವಿಗೆ ಹೊರ ರಾಜ್ಯದ ಕಾರ್ಮಿಕರ ಮೊರೆ ಹೋಗುವುದು ಅನಿವಾರ್ಯವಾಗಿದೆ. ಇಲ್ಲಿನ ಕಾರ್ಮಿಕರು ಬೇರೆ ನಗರಗಳಿಗೆ ವಲಸೆ ಹೋಗದೇ ಕಬ್ಬು ಕಟಾವು ಮಾಡಿದರೆ ವರ್ಷದಲ್ಲಿ ಎರಡ್ಮೂರು ಲಕ್ಷ ಆದಾಯ ಗಳಿಸಬಹುದು. ಹೊರಗಿನಿಂದ ಬರುವ ಕಾರ್ಮಿಕರಿಗೆ ಕಾರ್ಖಾನೆಯವರೇ ಕೂಲಿ ಹಣ ನೀಡಿದರೂ ಸಹ ರೈತರಲ್ಲಿ ಹಣ ಕೇಳುತ್ತಾರೆ. ಕೆಲ ರೈತರು ಕಬ್ಬು ಬೇಗ ಸಾಗಿಸಬೇಕೆಂಬ ಉದ್ದೇಶದಿಂದ ಕೂಲಿಗಳಿಗೆ ಹಣದ ಆಮಿಷ ಒಡ್ಡುತ್ತಾರೆ. ಹೀಗೆ ಹಲವು ಖರ್ಚುಗಳಿಂದ ಶ್ರಮದಿಂದ ಕಬ್ಬು ಬೆಳೆದ ರೈತನಿಗೆ ನಿರೀಕ್ಷಿತ ಆದಾಯ ಸಿಗುತ್ತಿಲ್ಲʼ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.