ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಟ್ಟಿ ಪಿ ಎ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಹೋಳಿ ಬಂಟನೂರ ಮಾತನಾಡಿ, “ಪರಿಶಿಷ್ಟ ಜಾತಿಯ ವ್ಯಕ್ತಿಯ ಕೊಲೆಯಾಗಿ 4 ತಿಂಗಳಾದರೂ ಕೊಲೆಗಾರರನ್ನು ಬಂಧಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಧಿಕ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ಶರಣು ಶಿಂಧೆ ಮಾತನಾಡಿ, “ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರಾರಂಭಿಸಿದ ಆಹಾರ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಮಾನವೀಯತೆಯ ನೆಲಗಟ್ಟಿನ ಮೇಲೆ ಸೌಜನ್ಯಕ್ಕೂ ಸಾವಿನ ಮನೆಗೆ ಭೇಟಿ ನೀಡಿದ ಶಾಸಕ ಮತ್ತು ಮಾಜಿ ಶಾಸಕರ ನಡೆ ಖಂಡನೀಯ. ದೀನದಲಿತರು, ಹಿಂದುಳಿದವರ ಮತಗಳನ್ನು ಪಡೆದು ಅವರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳಿಗೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಕೇಂದ್ರ ಸರ್ಕಾರ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ: ಅಮೂಲ್ಯ ನಿಧಿ
ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.