ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನೆಟ್ಟಿ ಪಿಎ ಗ್ರಾಮದ ಪರಿಶಿಷ್ಟ ಜಾತಿಯ ಮಹದೇವಪ್ಪ ಹರಿಜನ (ಪೂಜಾರಿ)ನನ್ನು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಸಿಂದಗಿ ಪಟ್ಟಣದಲ್ಲಿರುವ ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಾವಿರಾರು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಶ್ರೀಕಾಂತ ಸೋಮಜಾಳ ನೇತೃತ್ವದಲ್ಲಿ ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ರಾವುತ ತಳಕೇರಿ, ಶರಣು ಸಿಂಧೆ. ಶ್ರೀನಿವಾಸ ಓಲೇಕಾರ, ರವಿ ಹೊಳಿ ಆವರಿಂದ ಕ್ರಾಂತಿಗೀತೆಗಳು ಮೊಳಗಿದವು. ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮುಖಂಡರಾದ ಪ್ರಕಾಶ ಗುಡಿಮನಿ, ಲಕ್ಕಪ್ಪ ಬಡಿಗೇರ, ರವಿ ಹೊಳಿ, ಪರುಶರಾಮ ದಿಂಡವಾರ, ಪರುಶರಾಮ ಕಾಂಬಳೆ, ಚನ್ನೂ ಕಟ್ಟಿಮನಿ ಮಾತನಾಡಿದರು. ಹತ್ಯೆಗೆ ಸಂಬಂಧಿಸಿದಂತೆ ಅನುಮಾನಾಸ್ಪದ ವ್ಯಕ್ತಿಗಳ ಹೆಸರು ಹೇಳಿದರೂ ಪೊಲೀಸರು ಅವರನ್ನು ವಿಚಾರಣೆ ಮಾಡುತ್ತಿಲ್ಲ. ಕೊಲೆಯಾಗಿ 4 ತಿಂಗಳುಗಳಾದರೂ ಅರೋಪಿಗಳನ್ನು ಬಂಧಿಸದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನಕಾರು ಆಗ್ರಹಿಸಿದರು.
ಕೊಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಪೊಲೀಸ್ ಇಲಾಖೆ ಆಮಿಷಕ್ಕೆ ಒಳಗಾಗಿದೆ ಎಂಬ ಶಂಕೆ ಉಂಟಾಗಿದೆ ಎಂದು ಆರೋಪಿಸಿದರು. ಮೃತರ ಕುಟುಂಬಕ್ಕೆ 2 ಎಕರೆ ಜಮೀನು ಮತ್ತು ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಶೀಘ್ರ ನೇಮಕಾತಿಗೆ AIDSO ಆಗ್ರಹ
ಪ್ರತಿಭಟನಕಾರರು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಶ್ರೀಶೈಲ ಜಾಲವಾದಿ, ಮಂಜುನಾಥ ಎಂಟಮಾನ. ಲಕ್ಷ್ಮಣ ಬನ್ನೆಟ್ಟಿ. ಧರ್ಮಣ್ಣ ಎಂಟಮಾನ, ಶ್ರೀಶೈಲ ಬೂದಿಹಾಳ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರತಿಭಟನಾ ಸಭೆಯ ನಂತರ ಅದೇ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಮುಂದುವರೆಯಿತು.