ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನೆಟ್ಟಿ ಗ್ರಾಮದಲ್ಲಿ ಕೃಷಿ ಜಮೀನು ವಿಚಾರವಾಗಿ ನಡೆದ ಹತ್ಯೆಯನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿ ಕಾಲ್ನಡಿಗೆ ಜಾಥಾ ಆರಂಭಿಸಿದೆ. ದಲಿತ ಸಮುದಾಯದ ಮಹದೇವಪ್ಪ ಹರಿಜನ ಪೂಜಾರಿ ಕೊಲೆಯ ವಿರುದ್ಧ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಈ ಹೋರಾಟ ಆರಂಭವಾಗಿದೆ.
ದಸಂಸ ಜಿಲ್ಲಾ ಸಂಚಾಲಕ ಶರಣು ಶಿಂಧೆ ಮಾತನಾಡಿ, “ಜಾಥಾ ಶನಿವಾರ ಸಿಂದಗಿ ಪಟ್ಟಣಕ್ಕೆ ಪ್ರವೇಶಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಾಲೂಕು ಆಡಳಿತ ಸೌಧ ತಲುಪಲಿದೆ. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು” ಎಂದರು.
ಇನ್ನೋರ್ವ ಸಂಚಾಲಕ ಚಂದ್ರಕಾಂತ ಸಿಂಗೆ ಮಾತನಾಡಿ, “ಕೊಲೆಗೈದು ನಾಲ್ಕು ತಿಂಗಳು (ಮೇ.31) ಗತಿಸಿದರೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಯಾರನ್ನಾದರೂ ರಕ್ಷಿಸೋಕೆ ಇಲಾಖೆ ನಿಂತಂತಿದೆ ಎನ್ನುವ ಗುಮಾನಿ ಮೂಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿಂದಗಿ | ಮುಂದುವರೆದ ಸೂರಿಲ್ಲದವರ ಸತ್ಯಾಗ್ರಹ
ಪ್ರತಿಭಟನೆಯಲ್ಲಿ ಶ್ರೀನಿವಾಸ ಓಲೆಕಾರ, ಪರಶುರಾಮ ದಂಡಿವಾರ, ಲಕ್ಕಪ್ಪ ಬಡಿಗೇರ, ಪ್ರಕಾಶ್ ಗುಡಿಮನಿ, ಮಂಜುನಾಥ ಎಂಟಮಾನ, ಪರಶುರಾಮ ಕಾಂಬಳೆ, ರವಿ ಆಲಹಳ್ಳಿ, ಧರ್ಮಣ್ಣ ಎಂಟಮಾನ, ಬಸು ತಳಕೆರಿ, ಶಬ್ಬೀರ್ ಪಟೇಲ, ರಾಜು ಸಿಂದಗೇರಿ, ಶಿವು ವಾಲಿಕಾರ, ಶ್ರೀಶೈಲ ಬೂದಿಹಾಳ ಜಾಥಾ ನೇತೃತ್ವ ವಹಿಸಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು.