ವಿಜಯಪುರದಲ್ಲಿ ಸಂಪೂರ್ಣ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬದಲು ಬಂಡವಾಳ ಶಾಹಿಗಳಿಗೆ ಕಾಲೇಜನ್ನು ತೆರೆಯಲು ಅವಕಾಶ ಮಾಡಿಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಜಿಲ್ಲೆಯ ಸಿಂದಗಿ ತಾಲೂಕು ಸ್ವಸಹಾಯ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾಕಾರರು ಶಿರಸ್ತೆದಾರ್ ಎಂ ಎಂ ಚಟ್ಟರಿಕೆ ಅವರಿಗೆ ಮನವಿ ಸಲ್ಲಿಸಿದರು. “ಈಗಾಗಲೇ ವಿಜಯಪುರ ನಗರದಲ್ಲಿ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಪ್ರಸ್ತುತ ದಿನಗಳಲ್ಲಿ ಖಾಸಗಿ ಆರೋಗ್ಯ ಸೇವೆಗಳು ತುಂಬಾ ದುಬಾರಿಯಾಗಿದೆ. ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ 500 ಕೋಟಿ ರೂ ದೊಡ್ಡದಲ್ಲ. ಅದನ್ನು ಸರ್ಕಾರ ಕೊಡಬೇಕು. ಸರ್ಕಾರಿ ಕಾಲೇಜು ಬರುವುದರಿಂದ ಕಡುಬಡವರಿಗೆ ಅನುಕೂಲವಾಗುತ್ತದೆ. ಸರಕಾರಿ ಆಸ್ಪತ್ರೆಗೆ ಸೂಕ್ತವಾದ ಸುಮಾರು 150 ಎಕರೆಗೂ ಹೆಚ್ಚು ಸ್ಥಳಾವಕಾಶ ಸರ್ಕಾರಿ ಆಸ್ಪತ್ರೆ ಆವರಣದಲ್ಲಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ಆದ್ದರಿಂದ ಸರಕಾರಿ ಆಸ್ಪತ್ರೆ ಉಳಿಸುವ ಜೊತೆಗೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?
ಸಿಂದಗಿ ತಾಲೂಕು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನ ಹೋರಾಟ ಸಮಿತಿಯ ಅಣ್ಣಾರಾಯ ಇಳಿಗೇರಾ, ಮಹಾದೇವಿ ಧರ್ಮಶೆಟ್ಟಿ, ಲಕ್ಷ್ಮಣ ಕಂಬಾಗಿ, ಅಕ್ರಮ ಮಾಶಾಳಕರ, ಸಿದ್ದರಾಮ ಹಳ್ಳೂರ, ಅಬ್ದುಲ್ ರೆಹಮಾನ್ ನಾಸಿರ್, ರೈತ ಸಂಘಟನೆಯ ಬಸನಗೌಡ ಧರ್ಮಗೊಂಡ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಸಬೀರ ಪಟೇಲ, ಎಮ್ ಎಚ್ ಪಟೇಲ್, ಟಿಪ್ಪು ಕ್ರಾಂತಿ ಸಂಘಟನೆ ರಾಜ್ಯ ಕಾರ್ಯದರ್ಶಿ ದಸ್ತಗಿರಿ ಮುಲ್ಲಾ, ಡಿಎಸ್ಎಸ್ ಜಿಲ್ಲಾ ಸಂಚಾಲಕ ವೈ ಸಿ ಮಯೂರ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಇದ್ದರು.