ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಸೋಮಾಪುರ ರಸ್ತೆಯಲ್ಲಿನ ಸ.ನಂ. 842/2×2 ರಲ್ಲಿನ 2 ಎಕರೆ 10 ಗುಂಟೆ ಜಾಗದಲ್ಲಿ ವಾಸವಿದ್ದ 84 ಕುಟುಂಬಗಳ ಮನೆಗಳನ್ನು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದರು. ಇದರಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಿಸಿಲಿನಲ್ಲಿ ಕುಳಿತು ಧರಣಿ ನಡೆಸಿದರು.
ಧರಣಿಗೆ ಬೆಂಬಲವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಿಚಾರವಾದ) ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು. “ಹಂತ ಹಂತವಾಗಿ ಈ ಹೋರಾಟ ಉಗ್ರ ಸ್ವರೂಪ ಪಡೆಯುವುದು ಶತಸಿದ್ಧ” ಎಂದು ಜಿಲ್ಲಾ ಸಂಚಾಲಕ ಶರಣು ಶಿಂದೆ ಎಚ್ಚರಿಸಿದರು.
ಸ್ಥಳೀಯ ಶಾಸಕ ಅಶೋಕ ಮನಗೂಳಿ ಮಾತನಾಡಿ, “84 ಕುಟುಂಬಗಳಿಗೆ ಪುರಸಭೆಯ ಮಾಲೀಕತ್ವದ ಮೂರು ಎಕರೆ ಜಮೀನಿನಲ್ಲಿ ತಲಾ 25×35 ಅಳತೆಯ ನಿವೇಶನ ಹಕ್ಕುಪತ್ರ ನೀಡಲಾಗುವುದು. ಜೊತೆಗೆ ನೀರು, ರಸ್ತೆ, ವಿದ್ಯುತ್, ಉದ್ಯಾನವನದ ಮೂಲಸೌಕರ್ಯ ಒದಗಿಸಲಾಗುವುದು. ಮನೆ ಕಟ್ಟಲು ಸರ್ಕಾರದಿಂದ ಸಹಾಯಧನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ಮಾತನಾಡಿ, “ಕುಟುಂಬಗಳಿಗೆ ಜಾಗ ಉಳಿಸಿಕೊಡಲು ಪುರಸಭೆ ಕಚೇರಿಯಿಂದಲೇ 10 ಲಕ್ಷ ರೂಪಾಯಿ ವೆಚ್ಚ ಮಾಡಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರೂ ಫಲಕಾರಿಯಾಗಲಿಲ್ಲ. ನಿವಾಸಿಗಳಿಗೆ ಆದಷ್ಟು ದುಃಖ ನಮಗೂ ಆಗಿದೆ. ಈಗ ಎಲ್ಲಾ ಕುಟುಂಬಗಳಿಗೆ ನಿವೇಶನ ಕಲ್ಪಿಸಿಕೊಡುವುದು ನಮ್ಮ ಧರ್ಮ ಎಂದು ಭಾವಿಸಿ, ಸ. ನಂ. 24ರ 13 ಎಕರೆ ಭೂಮಿಯನ್ನು 84 ಕುಟುಂಬಗಳ ಮನೆಗಳಿಗೆ ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗುವುದು. ನಿವೇಶನದ ಜೊತೆಗೆ ಪುರಸಭೆ ಕಾರ್ಯಾಲಯದಲ್ಲಿರುವ ಆಶ್ರಯ ವಸತಿ ಯೋಜನೆ ಅಡಿ ಮನೆ ಕಟ್ಟಲು ಆರ್ಥಿಕ ವ್ಯವಸ್ಥೆ ಮಾಡಿಕೊಡಲಾಗುವುದು. ಈ ಕಾರ್ಯಕರ್ತಾಗಿ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿ; ಪಿಜಿ ಕೋರ್ಸ್‌ಗಳ ಪ್ರವೇಶಾತಿ ದಿನಾಂಕ ವಿಸ್ತರಣೆ
ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿರುವ ಭೀಮಶಂಕರ ರತ್ನಾಕರ ಮಾತನಾಡಿ, “ನಿರಾಶ್ರಿತರಿಗೆ ಸೂರು ದೊರಕುವ ತನಕ ಹೋರಾಟ ನಿರಂತರವಾಗಿರುತ್ತದೆ” ಎಂದರು.
ಧರಣಿಯಲ್ಲಿ ಸಿದ್ದು ತಮದೊಡ್ಡಿ, ಮಹಾದೇವಪ್ಪ ಜಮಾದಾರ, ಶ್ರೀಶೈಲ ಧವಳಾರ, ಎಂಕೆ ಕಟ್ಟಿಮನಿ, ಫಾತಿಮಾ ಆಳಂದ, ಜಯಶ್ರೀ ಇರಕಲ್ಲ, ಯಮುನಾ ಬಾಯಿ ಬಂಕಲಗಿ, ಶಾಂತಾಬಾಯಿ ಗಾಣಿಗೇರಿ ಇದ್ದರು.