ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳು ಕಾಲು ಜಾರಿ ಜಲಪಾತದ ನೀರಿನಲ್ಲಿ ಕೊಚ್ಚಿ ಹೋದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಣ್ಣೆ ಹೊಳೆ ಜಲಪಾತದಲ್ಲಿ ಸಂಭವಿಸಿದೆ. ಒಬ್ಬ ವಿದ್ಯಾರ್ಥಿ ಕಲ್ಲು ಬಂಡೆಗಳ ನಡುವೆ ಸಿಲುಕಿ ಕೊಂಡಿದ್ದು ಅವನನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಕೊಚ್ಚಿ ಹೋಗಿದ್ದು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಹೊಸಪೇಟೆ ಮೂಲದ ಶ್ರೀನಿವಾಸ ರಕ್ಷಿಸಲ್ಪಟ್ಟ ವಿದ್ಯಾರ್ಥಿಯಾಗಿದ್ದು, ಹೂವಿನಹಡಗಲಿ ಮೂಲದ ರಾಹುಲ್ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಶಿರಸಿಯ ಅರಣ್ಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ತಂಡ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಅಗ್ನಿಶಾಮಕ ದಳ ಮತ್ತು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ನಡೆಸಿದ ಶೋಧದಲ್ಲಿ ಶ್ರೀನಿವಾಸ್ ಕಲ್ಲಿನೊಳಗೆ ಸಿಲುಕಿರುವುದನ್ನು ಪತ್ತೆಹಚ್ಚಿ ರಕ್ಷಣೆ ಮಾಡಲಾಗಿದೆ. ಆದರೆ ಅವನ ಬೆನ್ನು ಮೂಳೆ ಮುರಿದಿದರಿಂದ ಅವನನ್ನು ತಕ್ಷಣ ಶಿರಸಿ ಪಂಡಿತ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಶಿರಸಿ | ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಪರಾರಿ
ಬೆಣ್ಣೆ ಹೊಳೆ ಜಲಪಾತ ದಟ್ಟ ಕಾಡಿನ ಮಧ್ಯದಲ್ಲಿ ಇರುವುದರಿಂದ ದೃಶ್ಯ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ ಮಳೆಗಾಲದಲ್ಲಿ ಇಲ್ಲಿ ಅಪಾಯ ಹೆಚ್ಚು. ಅರಣ್ಯ ಇಲಾಖೆ ಈಗಾಗಲೇ ಪ್ರವೇಶಕ್ಕೆ ನಿಷೇಧ ಹೇರಿದ್ದರೂ, ವಾರಾಂತ್ಯದಲ್ಲಿ ಪ್ರವಾಸಿಗರು ನಿರ್ಲಕ್ಷ್ಯದಿಂದ ಹೋಗುತ್ತಿರುವುದರಿಂದ ಅಪಘಾತಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.