ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸರಣಿ ಕೊಲೆಗಳು, ಅತ್ಯಾಚಾರ ಕೃತ್ಯಗಳ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಆರಂಭಿಸಿದೆ. ಇಂದು(ಜುಲೈ 28) ಸಾಕ್ಷಿ ದೂರುದಾರರನ್ನು ಕರೆತಂದು ಸ್ಥಳ ಮಹಜರು ನಡೆಸಿದ ಎಸ್‌ಐಟಿ ತಂಡ ಇನ್ನುಳಿದ ಸ್ಥಳ ಮಹಜರು ಪ್ರಕ್ರಿಯೆಯನ್ನು ನಾಳೆಗೆ ಮುಂದುವರೆಸಲಿದೆ ಎಂದು ವರದಿಯಾಗಿದೆ.
ಸೋಮವಾರ ಸಾಕ್ಷಿ ದೂರುದಾರರನ್ನು ಸ್ಥಳಕ್ಕೆ ಕರೆತಂದ ಎಸ್‌ಐಟಿ ತಂಡ ಸಂಜೆಯ ವೇಳೆ ಸ್ಥಳ ಗುರುತಿಸುವಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಇನ್ನುಳಿದ ಪ್ರಕ್ರಿಯೆಯನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಸಾಕ್ಷಿ ದೂರುದಾರನ ಜತೆಗೆ ಸ್ಥಳ ಮಹಜರಿಗೆ ಬಂದ ಎಸ್‌ಐಟಿ ತಂಡ
ಎಸ್‌ಐಟಿ ಪೊಲೀಸರು 13 ಸ್ಥಳಗಳನ್ನು ಸಾಕ್ಷಿಯ ಸಹಾಯದಿಂದ ಗುರುತಿಸಿದ್ದಾರೆ ಎನ್ನಲಾಗಿದೆ. ಇನ್ನು ಶನಿವಾರವೇ ಎಸ್‌ಐಟಿ ತಂಡದ ಎದುರು ದೂರುದಾರರು ಹಾಜರಾಗಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಅದರಲ್ಲೂ ಹೆಣ್ಣುಮಕ್ಕಳು-ಮಹಿಳೆಯರನ್ನು ಅತ್ಯಾಚಾರ, ಕೊಲೆ ಮಾಡಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ತಾವೇ ಹಲವಾರು ಮೃತದೇಹಗಳನ್ನು ಹೂತಿದ್ದು, ಅವುಗಳನ್ನು ಹೊರತೆಗೆಯುತ್ತೇನೆಂದು, ಸಾಕ್ಷಿ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
