ಈ ದಿನ ವಿಶೇಷ | ವಿಧಾನಸೌಧ ಆಯ್ತು, ಇನ್ನು ರಾಜಭವನ ತೆರೆಯಲಿದೆ ಪ್ರವಾಸಿಗರ ವೀಕ್ಷಣೆಗೆ

Date:

Advertisements

ಈ ವಿಧಾನಸೌಧ ಪರ್ತ್‌ರೆ ನೋಕೊಂಬೊ ಎತ್ತರೆ ಚಂದ ಅಲ್ಲೆ… ಉಲ್ಗಮ್ ನೋಕೊಗು ಬುಟ್ರೆಂಗ್ ಆವಾಂತ್…(ಈ ವಿಧಾನಸೌಧ ಹೊರಗಿನಿಂದ ನೋಡೋಕೆ ಎಷ್ಟು ಚೆಂದ ಅಲ್ವಾ… ಒಳಗೆ ಕೂಡ ನೋಡೋದಕ್ಕೆ ಬಿಟ್ಟರೆ ಆಗಬಹುದಿತ್ತು…)

ಹೀಗಂತ ನನ್ನೂರು ಕರಾವಳಿ ಭಾಗದಿಂದ 350ಕ್ಕೂ ಹೆಚ್ಚು ಕಿಲೋಮೀಟರ್ ಬಸ್‌ನಲ್ಲಿ ಪ್ರಯಾಣಿಸಿ, ರಾಜ್ಯದ ರಾಜಧಾನಿ ಬೆಂಗಳೂರನ್ನು ಸುತ್ತಾಡಲು ಬಂದಿದ್ದ ನನ್ನ ಆಪ್ತರೋರ್ವರು ಇತ್ತೀಚೆಗೆ ಮಾತೃಭಾಷೆ ‘ಬ್ಯಾರಿ’ಯಲ್ಲಿ ಆಡಿದ್ದ ಸಂಭಾಷಣೆ ಇದು. ಈ ಸಂಭಾಷಣೆ ನಡೆಸಿದ ಕೆಲವೇ ತಿಂಗಳ ಬಳಿಕ ಸುದ್ದಿಯೊಂದು ಹೊರಬಂತು. ‘ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾನಸಭಾ ಕಟ್ಟಡದ ಆವರಣದೊಳಗಡೆ ಪ್ರವಾಸಿಗರಿಗೆ ಅವಕಾಶ’ ಎಂದು.

ಹೌದು. 2025ರ ಜೂನ್‌ನಿಂದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾನಸಭೆ ಕಟ್ಟಡದ ಒಳಗಡೆ ವೀಕ್ಷಣೆಗೆ (Vidhana soudha tour) ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ (Guided tour) ಚಾಲನೆ ನೀಡಲಾಗಿತ್ತು. ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧದ ಗೈಡೆಡ್ ಟೂರ್ ವ್ಯವಸ್ಥೆ ಏರ್ಪಡಿಸಲಾಗುತ್ತಿದ್ದು, ಇದಕ್ಕೆ ಸಮಯ ಹಾಗೂ ಶುಲ್ಕ ನಿಗದಿ ಮಾಡಲಾಗಿದೆ.

ಪ್ರವಾಸಿಗರಿಗಾಗಿ ಆರಂಭಿಸಿದ್ದ ಈ ಹೊಸ ಯೋಜನೆಗೆ ಚಾಲನೆ ನೀಡಿದ್ದ ವೇಳೆ ಮಾತನಾಡಿದ್ದ ರಾಜ್ಯದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, “ಗೈಡೆಡ್ ಟೂರ್ ಅನ್ನು ಬಹಳ ಚಿಂತನೆ ಮಾಡಿ ಆರಂಭಿಸಲಾಗಿದೆ. ವಿಧಾನಸೌಧ ಕಟ್ಟಡ ಸಾರ್ವಜನಿಕರ ಪ್ರವಾಸಕ್ಕೆ ಮುಕ್ತವಾಗಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಕಟ್ಟಡ ವಿಧಾನಸೌಧವಾಗಿದ್ದು, ಇದು ಪ್ರಜಾಪ್ರಭುತ್ವದ ‘ದೇಗುಲ’ ಎಂಬ ಖ್ಯಾತಿಯೂ ಗಳಿಸಿದೆ. ವಿದ್ಯಾರ್ಥಿಗಳಿಗೆ, ಆಸಕ್ತ ಜನರಿಗೆ ಇದರ ‘ದರ್ಶನ’ ಮಾಡಿಸುವ ಉದ್ದೇಶದಿಂದ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಜೊತೆಗೆ ನಮ್ಮ ಇಲಾಖೆಯ ಅಧಿಕಾರಿಗಳು ಚರ್ಚಿಸಿದ ಬಳಿಕ ಈ ಅವಕಾಶವನ್ನು ಕಲ್ಪಿಸಿದ್ದೇವೆ. ಗೈಡೆಡ್ ಟೂರ್ ಮನರಂಜನೆಯ ಪ್ರವಾಸ ಅಲ್ಲ. ಇಲ್ಲಿಗೆ ಬಂದವರು ಜ್ಞಾನ ಪಡೆದು ಹೋಗಬೇಕು. ಪ್ರಜಾಪ್ರಭುತ್ವ ಗಟ್ಟಿ ಮಾಡುವ ಛಲ ಬರಬೇಕು. ಒಮ್ಮೆ ಸುತ್ತಿ ಬರೋಣ ಅಂತ ಇಲ್ಲಿಗೆ ಬರೋದಲ್ಲ” ಎಂದು ತಿಳಿಸಿದ್ದರು.

Vidhana Soudha Tour

ಈಗಾಗಲೇ ವಿಧಾನಸೌಧದ ಗೈಡೆಡ್ ಟೂರ್ ಆರಂಭವಾಗಿ ಸರಿಸುಮಾರು ಮೂರು ತಿಂಗಳುಗಳಾಗಿವೆ. ‘ನಾನೂ ಕೂಡ ವಿಧಾನಸೌಧಕ್ಕೆ ಕಾಲಿಡಬೇಕು’ ಎಂದು ಕನಸು ಕಾಣುತ್ತಿದ್ದವರು ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ವಿಧಾನಸೌಧದ ಇತಿಹಾಸ, ವಾಸ್ತುಶಿಲ್ಪ, ನಾಯಕರ ಪ್ರತಿಮೆಗಳು, ಶಾಸಕಾಂಗದ ಕಾರ್ಯ ನಿರ್ವಹಣೆಯ ಮಾಹಿತಿಗಳನ್ನು ನೀಡುವ ‘ವಿಧಾನಸೌಧ ಗೈಡೆಡ್ ಟೂರ್‌‘ನತ್ತ ಸ್ಥಳೀಯರು, ಹೊರರಾಜ್ಯದ ಪ್ರವಾಸಿಗರು ಮಾತ್ರವಲ್ಲ, ವಿದೇಶಿ ಪ್ರವಾಸಿಗರೂ ಕೂಡ ಭೇಟಿ ನೀಡುತ್ತಿದ್ದಾರೆ.

ಅವಕಾಶ ದೊರೆತ ಮೊದಲ ದಿನವೇ ಅಂದರೆ ಜೂನ್ 1, 2025ರ ಭಾನುವಾರ 102 ಪ್ರವಾಸಿಗರು ಕಾಲ್ನಡಿಗೆ ಮೂಲಕ ವಿಧಾನಸೌಧವನ್ನು ವೀಕ್ಷಿಸಿದ್ದರು. ಮೊದಲ ದಿನ ನಾಲ್ಕು ತಂಡಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗಿತ್ತು. ಪ್ರತಿ ತಂಡದಲ್ಲಿ ತಲಾ 30 ಜನರು ಟಿಕೆಟ್‌ ಕಾಯ್ದಿರಿಸಿದ್ದರು. ಒಟ್ಟು 120 ಮಂದಿ ಟಿಕೆಟ್‌ ಕಾಯ್ದಿರಿಸಿದ್ದು, 102 ಮಂದಿ ಬಂದಿದ್ದರೆ, ಬುಕ್ ಮಾಡಿಕೊಂಡಿದ್ದ 18 ಮಂದಿ ಗೈರಾಗಿದ್ದರು. ಸದ್ಯ, ಸೆಪ್ಟೆಂಬರ್ 2025ರ ಅಂತ್ಯಕ್ಕೆ 5,110 ಪ್ರವಾಸಿಗರು ಭೇಟಿ ನೀಡಿದ್ದು, ಸರಾಸರಿ 100ಕ್ಕೂ ಹೆಚ್ಚು ವಿದೇಶಿಗರು ಭಾಗವಹಿಸಿರುವುದಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು ಈದಿನ ಡಾಟ್‌ ಕಾಮ್‌ಗೆ ಮಾಹಿತಿ ನೀಡಿದ್ದಾರೆ.

Capture 25

ಈ ಬಗ್ಗೆ ಈದಿನ ಡಾಟ್‌ ಕಾಮ್ ಜೊತೆಗೆ ಮಾತನಾಡಿದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರಾ, “ಸೆಪ್ಟೆಂಬರ್ 2025ರ ಅಂತ್ಯಕ್ಕೆ 5,110 ಪ್ರವಾಸಿಗರು ಭೇಟಿ ನೀಡಿದ್ದು, ಸರಾಸರಿ 100ಕ್ಕೂ ಹೆಚ್ಚು ವಿದೇಶಿಗರು ಭಾಗವಹಿಸಿದ್ದಾರೆ. ಉತ್ತಮವಾದ ಸ್ಪಂದನೆ ಸಿಗುತ್ತಿದೆ. ಗೈಡೆಡ್ ಪ್ರವಾಸವನ್ನು ನಿಗಮದ ಅಧಿಕೃತ ವೆಬ್ ಸೈಟ್ www.kstdc.co ಮೂಲಕ ನೋಂದಣಿ ಮಾಡಿಕೊಳ್ಳಬಹುದು. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು, ‘ಪ್ರವೇಶ ಶುಲ್ಕ ಹೆಚ್ಚು ಬೇಡ’ ಎಂಬ ನಿರ್ದೇಶನದ ಮೇರೆಗೆ ಪ್ರತಿ ಪ್ರವಾಸಿಗರಿಗೆ ಕೇವಲ 50 ರೂಪಾಯಿಯನ್ನಷ್ಟೇ ನಿಗದಿಪಡಿಸಿದ್ದೇವೆ” ಎಂದು ತಿಳಿಸಿದರು.

“ನಿಗಮದಿಂದ ಗೈಡೆಡ್ ಪ್ರವಾಸಕ್ಕೆ ಒಟ್ಟು 10 ಪ್ರವಾಸಿ ಮಾರ್ಗದಶಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಪ್ರವಾಸಿಗರು ಭೇಟಿ ನೀಡಲು ಬಂದಲ್ಲಿ ಹೆಚ್ಚು ಗೈಡ್‌ಗಳನ್ನು ನಿಯೋಜಿಸುವ ಬಗ್ಗೆ ಚರ್ಚಿಸುತ್ತೇವೆ. ವಿಧಾನ ಸೌಧದ ಕಟ್ಟಡದ ಒಟ್ಟು 15 ಸ್ಥಳಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. 30 ಜನರಿಗೆ ಒಂದು ತಂಡದಂತೆ ಸರಾಸರಿ ಒಟ್ಟು 8 ಗ್ರೂಪ್‌ಗಳಿಗೆ ಅವಕಾಶ ಕಲ್ಪಿಸಿದ್ದೇವೆ. ಪ್ರವಾಸಿಗರಿಂದ ಸಂಗ್ರಹಿಸಲಾದ ಶುಲ್ಕವನ್ನು ಪ್ರವಾಸಿ ಮಾರ್ಗದರ್ಶಿಗಳಿಗೆ, ಮಾರ್ಗದರ್ಶಿ ಶುಲ್ಕ ಪಾವತಿಸಲು ಮತ್ತು ಪ್ರವಾಸಿ ಮಿತ್ರ ಹಾಗು ತೆರಿಗೆ ಪಾವತಿಸಲು ಬಳಸಲಾಗುತ್ತಿದೆ” ಎಂದು ಕೆಎಸ್‌ಟಿಡಿಸಿ ಎಂಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಮೈಸೂರು ಸೇಲ್ಸ್ ಇಂಟರ್‌ ನ್ಯಾಷನಲ್ ಸಂಸ್ಥೆ (MSIL) ಯ ಟೂರ್ ಪ್ಯಾಕೇಜ್ ಥರ ಸರಕಾರದ ಬೇರೆ ಇಲಾಖೆಯ ಜೊತೆಗೆ ಸಹಭಾಗಿತ್ವದ ಯೋಜನೆ ಇದೆಯೇ? ಎಂದು ಕೇಳಿದಾಗ, “ನಿಗಮವು ಬೇರೆ ಇಲಾಖೆಗಳ ಜೊತೆಗೆ ಈ ಸಂಬಂಧ ಸಮನ್ವಯ ಮಾಡಲಾಗುತ್ತಿರುತ್ತದೆ” ಎಂದು ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.

british residency
ಬ್ರಿಟಿಷ್ ರೆಸಿಡೆನ್ಸಿಯಾಗಿದ್ದ ಇಂದಿನ ರಾಜಭವನ

ವಿಧಾನಸೌಧದ ಬಳಿಕ ರಾಜಭವನ

ಹೌದು. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಗೈಡೆಡ್ ಟೂರ್ ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೀಗ, ರಾಜ್ಯಪಾಲರ ಕಚೇರಿ ರಾಜಭವನದ ಬಾಗಿಲನ್ನು ಕೂಡ ಪ್ರವಾಸಿಗರಿಗೆ ತೆರೆದಿಡುವ ಬಗ್ಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.

ಈ ಬಗ್ಗೆ ಈದಿನ ಡಾಟ್‌ ಕಾಮ್ ಕೆಎಸ್‌ಟಿಡಿಸಿ ಎಂಡಿಯವರಲ್ಲಿ ಪ್ರಶ್ನಿಸಿದಾಗ, “ವಿಧಾನಸೌಧ ಪ್ರವಾಸದ ಮಾದರಿಯಲ್ಲಿಯೇ ಬೆಂಗಳೂರಿನ ರಾಜಭವನಕ್ಕೂ ಸಹ ಪ್ರವಾಸ ಏರ್ಪಡಿಸುವ ಸಂಬಂಧ ಪ್ರಸ್ತಾವನೆಯು ಸರಕಾರದ ಮಟ್ಟದಲ್ಲಿದ್ದು, ಅನುಮತಿ ದೊರೆತ ನಂತರದಲ್ಲಿ ಈ ಪ್ರವಾಸವು ಸಹ ಆಯೋಜಿಸಲಾಗುವುದು. ಮುಂದುವರೆದು, ಮೈಸೂರು ನಗರದಲ್ಲಿ ಪಾರಂಪರಿಕ ನಡಿಗೆ(Heritage Walk)ಯನ್ನು ಸಹ ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.

ರಾಜಭವನವು ಐತಿಹಾಸಿಕ ಮಹತ್ವವನ್ನು ಹೊಂದಿದ್ದು, 1840 ಮತ್ತು 1842ರ ನಡುವೆ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ್ದ ಈ ನಿವಾಸವನ್ನು ಮೂಲತಃ ಬ್ರಿಟಿಷ್ ಆಯುಕ್ತರಿಗಾಗಿ ನಿರ್ಮಿಸಲಾಗಿತ್ತು. ಆಗ ‘ರೆಸಿಡೆನ್ಸಿ’ ಎಂದು ಕರೆಯಲ್ಪಡುತ್ತಿದ್ದ ಇದು ನಂತರ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಎಲೀನರ್ ರೂಸ್ವೆಲ್ಟ್ ಅವರಂತಹ ಗಣ್ಯರಿಗೆ ಆತಿಥ್ಯ ವಹಿಸುವ ಉನ್ನತ ಮಟ್ಟದ ಅತಿಥಿ ಗೃಹವಾಗಿ ಪರಿವರ್ತನೆಗೊಂಡಿತ್ತು.

ಸ್ವಾತಂತ್ರ್ಯಾನಂತರ ಇದನ್ನು ರಾಜಭವನವಾಗಿ ರೂಪಾಂತರಿಸಲಾಯಿತು. ಅಂತಿಮವಾಗಿ ಕರ್ನಾಟಕದ ರಾಜ್ಯಪಾಲರ ಅಧಿಕೃತ ನಿವಾಸವಾಯಿತು. ಜೂನ್‌ನಿಂದ ಆರಂಭವಾದ ವಿಧಾನಸೌಧ ಪ್ರವಾಸ ಈಗ ಯಶಸ್ಸಿಯಾಗಿದೆ. ನಂತರ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮುಂದಾಗಿದೆ.

gpo high
ಬೆಂಗಳೂರಿನ ಜಿಪಿಓ(ಜನರಲ್ ಪೋಸ್ಟ್ ಆಫೀಸ್) ಹಾಗೂ ಕರ್ನಾಟಕ ಹೈಕೋರ್ಟ್‌

ಇದಲ್ಲದೇ, ರಾಜಭವನದ ಬಳಿಕ ರಾಜಭವನದ ಬಳಿಯಲ್ಲೇ ಇರುವ ಅಂಚೆ ಇಲಾಖೆಯ ಕೇಂದ್ರ ಕಚೇರಿಯಾಗಿರುವ ಬೆಂಗಳೂರಿನ ಜಿಪಿಓ(ಜನರಲ್ ಪೋಸ್ಟ್ ಆಫೀಸ್), ಕರ್ನಾಟಕ ಹೈಕೋರ್ಟ್‌ ಕಟ್ಟಡ, ವಿಕಾಸಸೌಧ ಸೇರಿದಂತೆ ಐತಿಹಾಸಿಕ ಹಿನ್ನೆಲೆ ಇರುವ ಎಲ್ಲ ಸರ್ಕಾರಿ ಕಚೇರಿಗಳನ್ನು ರಜಾದಿನಗಳಲ್ಲಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಜೊತೆಗೆ, ನಮ್ಮ ಎಲ್ಲ ಐತಿಹಾಸಿಕ ಕಟ್ಟಡಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂಬ ಇರಾದೆಯನ್ನು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೊಂದಿದ್ದಾರೆ.

ವಿಧಾನಸೌಧ ಪ್ರವೇಶ, ನೋಂದಣಿ, ಶುಲ್ಕ ಎಷ್ಟು?
ವಿಧಾನಸೌಧದ ಒಳಗಡೆ ಹೋಗಬೇಕಾದರೆ ಕರ್ನಾಟಕ ಪ್ರವಾಸೋದ್ಯಮ ನಿಗಮದ ಅಧಿಕೃತ ವೆಬ್ ಸೈಟ್ www.kstdc.co ಮೂಲಕ ನೋಂದಣಿ ಮಾಡಿಕೊಳ್ಳಬಹುದು. ವೆಬ್‌ಸೈಟ್‌ನಲ್ಲಿ ಕಾಣುವ ‘Activities’ ವಿಭಾಗಕ್ಕೆ ತೆರಳಿ, ದಿನ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡು, ವೈಯಕ್ತಿಕ ವಿವರದ ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಆ ಬಳಿಕ ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಪ್ರವಾಸಕ್ಕೂ ಮುನ್ನ, ಈ ದಾಖಲೆಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿ, ಪ್ರವೇಶಕ್ಕೆ ಅವಕಾಶ ನೀಡುತ್ತಾರೆ.

ಒಬ್ಬ ಪ್ರವಾಸಿಗ ಕನಿಷ್ಠ ಒಂದು ಸೀಟ್‌ನಿಂದ ಗರಿಷ್ಠ 6 ಸೀಟ್‌ವರೆಗೆ ಒಂದು ಬಾರಿಗೆ ಮುಂಗಡವಾಗಿ ಕಾಯ್ದಿರಿಸಬಹುದು. ಪ್ರಸ್ತುತ 15 ವರ್ಷದ ಮಕ್ಕಳು ಪೋಷಕರೊಂದಿಗೆ ಆಗಮಿಸುವ ಸಮಯದಲ್ಲಿ ಪ್ರವೇಶ ಶುಲ್ಕ ವಿನಾಯಿತಿ ನೀಡಲಾಗಿದೆ ಮತ್ತು 15 ವರ್ಷದ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಿದೆ. ವಿದೇಶಿಯರು ಸೇರಿದಂತೆ ಎಲ್ಲ ಪ್ರವಾಸಿಗರಿಗೆ ಕೇವಲ 50₹ ಶುಲ್ಕವನ್ನು ನಿಗದಿಪಡಿಸಲಾಗಿದೆ.

ttt

ಮಾಹಿತಿಗೆ ಕೆಎಸ್‌ಟಿಡಿಸಿಯ ಕಚೇರಿ ಸಂಖ್ಯೆ 080-4334 4334,8970650070ಯನ್ನೂ ಕೂಡ ಸಂಪರ್ಕಿಸಬಹುದು. ನೋಂದಣಿ ಮಾಡಿಕೊಂಡವರು ಪ್ರವೇಶದ ವೇಳೆ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ. ಕೆಎಸ್‌ಟಿಡಿಸಿಯ ಗೈಡ್, ವಿಧಾನಸೌಧದ ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗೈಡ್ ತೋರಿಸುವ ಸ್ಥಳಗಳನ್ನು ಬಿಟ್ಟರೆ ಬೇರೆ ಯಾವ ಸ್ಥಳಕ್ಕೂ ಹೋಗುವ ಅವಕಾಶವಿಲ್ಲ.

ಯಾವಾಗೆಲ್ಲ ಭೇಟಿ ನೀಡಬಹುದು?
ಪ್ರತಿ ಭಾನುವಾರ, ಜೊತೆಗೆ ಪ್ರತಿ ತಿಂಗಳ 2 ಮತ್ತು 4ನೇ ಶನಿವಾರ ಹಾಗೂ ಸಾರ್ವತ್ರಿಕ ರಜಾದಿನಗಳಲ್ಲಿ ಸದ್ಯ ವಿಧಾನಸೌಧ ಟೂರ್ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ. ಕನ್ನಡದಲ್ಲಿ ಟೂರ್ ಗೈಡ್‌ ಬುಕ್ ಮಾಡುವುದಾದರೆ ಬೆಳಗ್ಗೆ 10, 11 ಮತ್ತು ಮಧ್ಯಾಹ್ನ 12 ಹಾಗೂ 1 ಗಂಟೆಗೆ ಅವಕಾಶ ನೀಡಿದರೆ, ಇಂಗ್ಲಿಷ್‌ನಲ್ಲಿ ಟೂರ್ ಗೈಡ್‌ ಬುಕ್ ಮಾಡುವುದಾದರೆ ಬೆಳಗ್ಗೆ 10.30, 11.30 ಹಾಗೂ ಮಧ್ಯಾಹ್ನ 12.30, 1.30ಕ್ಕೆ ಇರುವ ಸ್ಲಾಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.

ವಿಧಾನ ಸೌಧದ 15 ಸ್ಥಳಗಳು ಸಾರ್ವಜನಿಕರ ವೀಕ್ಷಣೆಗೆ ಅವಕಾಶ
ವಿಧಾನ ಸೌಧದ ಕಟ್ಟಡದ ಒಟ್ಟು 15 ಸ್ಥಳಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. 1. ಗಾಂಧಿ ಪ್ರತಿಮೆ 2. ವಿಧಾನಸೌಧಕ್ಕೆ ಹಾಕಿದ ಅಡಿಗಲ್ಲು 3. ಬ್ಯಾಂಕ್ವೆಟ್ ಹಾಲ್ 4. ಸೆಂಟ್ರಲ್ ಹಾಲ್ 5. ವಿಧಾನ ಸಭೆಯ ಸಭಾಂಗಣ 6. ಕಾರಿಡಾರ್ 7. ವಿಧಾನ ಪರಿಷತ್ 8. ಅರಳಿ ಮುನೇಶ್ವರ ದೇವಸ್ಥಾನ 9. ಮೈಸೂರ್ ಬಾಗಿಲು 10. ಕೆಂಗಲ್‌ ಹನುಮಂತಯ್ಯ ಪ್ರತಿಮೆ 11. ಇತರೆ ಪ್ರತಿಮೆ 12. ಟೆರೇಸ್ ಗಾರ್ಡನ್ -ವಾಸ್ತು ಶಿಲ್ಪ 13. ಟೆರೇಸ್ ಗಾರ್ಡನ್ ಪಾರ್ಲಿಮೆಂಟರಿ ಹೌಸ್ 15. ವಿಧಾನ ಸೌಧದ ವಾಸ್ತು ಶಿಲ್ಪ 15. ವಿಧಾನ ಸೌಧದ ಬೃಹತ್ ಮೆಟ್ಟಿಲು.

ಸದರಿ ಪ್ರವಾಸಕ್ಕೆ 90 ನಿಮಿಷಗಳ ಸಮಯವನ್ನು ನಿಗದಿ ಪಡಿಸಲಾಗಿದೆ ಮತ್ತು 30 ಜನರಿಗೆ ಒಂದು ತಂಡದಂತೆ ಸರಾಸರಿ ಒಟ್ಟು 8 ಗ್ರೂಪುಗಳಿಗೆ ಅವಕಾಶ ಕಲ್ಪಿಸಿದೆ. ಸದ್ಯ ನಿಗಮದಿಂದ ಒಟ್ಟು 10 ಮಂದಿ ಟೂರ್ ಗೈಡ್‌ಗಳು ಭೇಟಿ ನೀಡುವ ಪ್ರವಾಸಿಗರಿಗೆ ಮಾಹಿತಿ ನೀಡುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಗೈಡ್‌ಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲಿದ್ದಾರೆ.

ಉತ್ತಮ ಅನುಭವಗಳಲ್ಲಿ ಇದೂ ಒಂದು: ಬೆಂಗಳೂರು ನಿವಾಸಿ ಸ್ಮಿತಾ

ವಿಧಾನಸೌಧದ ಒಳಗಡೆ ಮೊದಲ ಬಾರಿಗೆ ಭೇಟಿ ನೀಡಿರುವ ಬೆಂಗಳೂರು ನಿವಾಸಿ ಸ್ಮಿತಾ ಈದಿನ ಡಾಟ್‌ ಕಾಮ್ ಜೊತೆಗೆ ಮಾತನಾಡುತ್ತಾ, “ನಾನು ಹುಟ್ಟಿದಾಗಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಆದರೆ, ವಿಧಾನಸೌಧದ ಒಳಗಡೆ ಯಾವತ್ತೂ ಕಾಲಿಟ್ಟಿರಲಿಲ್ಲ. ಭೇಟಿ ನೀಡಿ, ವಿಧಾನಸೌಧದ ಬಗ್ಗೆ, ಅದರಲ್ಲಿನ ವಿಶೇಷಗಳ ಬಗ್ಗೆ ತಿಳಿದುಕೊಂಡಿದ್ದು ತುಂಬಾ ಇಷ್ಟವಾಯಿತು. ನಮ್ಮ ಗುಂಪಿಗೆ ಟೂರ್ ಗೈಡ್ ಆಗಿ ಅಂಕಿತಾ ಅನ್ನುವವರು ಸಹಕಾರ ನೀಡಿದ್ದರು. ಭೇಟಿ ನೀಡಿದ್ದು ಜೀವನದ ಉತ್ತಮ ಅನುಭವಗಳಲ್ಲಿ ಒಂದು. ನನಗೆ ಹೆಚ್ಚು ಇಷ್ಟವಾದದ್ದು ವಿಧಾನಸಭೆಯ ಅಧಿವೇಶನ ನಡೆಯುವ ಸಭಾಂಗಣ. ಕಣ್ಣಿಗೆ ಹಬ್ಬದಂತಿತ್ತು” ಎಂದು ತಿಳಿಸಿದರು.

smita and family 1
ವಿಧಾನಸೌಧ ಟೂರ್ ವೇಳೆ ಗೈಡ್ ಅಂಕಿತಾ ಅವರೊಂದಿಗೆ ಸ್ಮಿತಾ ಜಾರ್ಜ್‌ ಮತ್ತವರೊಂದಿಗಿದ್ದ ಗ್ರೂಪ್

“ವಿಧಾನಸೌಧ ಟೂರ್ ವೇಳೆ ಪ್ರವಾಸಿಗರಿಗೆ ಸಣ್ಣಪುಟ್ಟ ಸಮಸ್ಯೆಗಳು ಕಂಡಿದ್ದು ನಿಜ. ಬರುವವರಿಗೆ ಆದ ಅನುಭವವನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸಂಗ್ರಹಿಸಿಕೊಂಡು, ಅದರಲ್ಲಿ ಹೊಸ ಹೊಸ ಜನಪರವಾದ ಬದಲಾವಣೆಗಳನ್ನು ಮಾಡಬೇಕು. ಆಗ ಇನ್ನಷ್ಟು ಪ್ರವಾಸಿಗರು ಆಕರ್ಷಿತರಾಗುತ್ತಾರೆ. ಸರ್ಕಾರದ ಇಂತಹ ನಿರ್ಧಾರಗಳು ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಇರುವ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ನಮಗೆ ಹೈಕೋರ್ಟ್‌ ಕೂಡ ನೋಡಬೇಕು ಎಂಬ ಬಯಕೆ ಇದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಜನರಿಗೆ ಬಾಗಿಲು ತೆರೆದರೆ ಖಂಡಿತ ಹೋಗುತ್ತೇವೆ” ಎಂದು ತಮ್ಮ ಕನಸನ್ನು ತೆರೆದಿಟ್ಟಿದ್ದಾರೆ ಸ್ಮಿತಾ ಜಾರ್ಜ್‌.

“ವಿಧಾನಸೌಧ ಟೂರ್ ಸೇರಿದಂತೆ ಇತರ ಹಳೆಯ ಕಟ್ಟಡಗಳನ್ನು ಪ್ರವಾಸಿಗರಿಗೋಸ್ಕರ ಬಾಗಿಲು ತೆರೆಯುವ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ, ನಿಗಮದ ನಡೆ ಒಳ್ಳೆಯದಿದೆ. ಪ್ರವಾಸೋದ್ಯಮ ಕ್ಷೇತ್ರ ಜನರ ಅಚ್ಚುಮೆಚ್ಚಿನ ಕ್ಷೇತ್ರ. ಇಂತಹ ಒಳ್ಳೆಯ ಯೋಚನೆಗಳು ಜನರಲ್ಲಿ ಅಧಿಕಾರಿ ವರ್ಗದವರ ಬಗ್ಗೆ ಇರುವ ನಂಬಿಕೆಯನ್ನು ಇಮ್ಮಡಿಗೊಳಿಸುತ್ತದೆ” ಎನ್ನುತ್ತಾರೆ ಸ್ಮಿತಾ ಅವರ ಪತಿ ಜಾರ್ಜ್‌.

smita team 1
ವಿಧಾನಸೌಧ ಟೂರ್ ಬಗ್ಗೆ ಸ್ಮಿತಾ ಜಾರ್ಜ್‌ ಕುಟುಂಬ ಕಲೆಯಲ್ಲಿ ಮೂಡಿಸಿದ ಅಭಿಪ್ರಾಯ

ವಿಧಾನಸೌಧ ನೋಡಲೆಂದು ಬರುವವರಿಗೆ ಮಾಹಿತಿ ನೀಡುತ್ತಿರುವ ಗೈಡ್ ಹೆಚ್. ನರಸಿಂಹ ರಾಜು ಅವರು ಈದಿನ ಡಾಟ್‌ ಕಾಮ್ ಜೊತೆಗೆ ಮಾತನಾಡಿ, “ನಾನು ಗೈಡ್ ಆಗಿ ಕಳೆದ 4-5 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಇತ್ತೀಚೆಗೆ ವಿಧಾನಸೌಧ ಟೂರ್ ಗೈಡ್ ಆಗಿಯೂ ‘ಫ್ರೀ ಲ್ಯಾನ್ಸರ್’ ಆಗಿ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಯಾಕೆಂದರೆ, ನಾನೂ ಕೂಡ ಚಿಕ್ಕಂದಿನಿಂದ ವಿಧಾನಸೌಧ ನೋಡಿದ್ದರೂ, ಕೆಲವೊಂದು ಮಾಹಿತಿ ನಮಗೂ ಗೊತ್ತಿರಲಿಲ್ಲ. ಮೊದಲು ವಿಧಾನಸೌಧಕ್ಕೆ ಈಗಿರುವಷ್ಟು ಭದ್ರತೆ ಎಲ್ಲ ಇರಲಿಲ್ಲ. ಆಗ ಸಂಜೆ ಹೊತ್ತು ವಿಧಾನಸೌಧದ ಬಳಿ ಕೂತು ಸ್ನೇಹಿತರ ಜೊತೆಗೆ ಕಡಲೆಕಾಯಿ ಸವಿಯುತ್ತಿದ್ದೆ. ಈಗ ಜನರಿಗೂ ವಿಧಾನಸೌಧದ ಬಗ್ಗೆ ತಿಳಿಯುವ ಆಸಕ್ತಿ ಮೂಡುತ್ತಿದೆ. ಹಾಗಾಗಿ, ನಮಗೆ ಗೊತ್ತಿರುವ ಮಾಹಿತಿಯನ್ನು ಪ್ರವಾಸಿಗರಿಗೆ ಗೈಡ್ ಆಗುವ ಮೂಲಕ ಸಹಕಾರ ನೀಡುತ್ತಿದ್ದೇನೆ” ಎಂದು ತಿಳಿಸಿದರು.

“ಜನರಲ್ಲಿ ಕುತೂಹಲ ಹೆಚ್ಚು ಇರುವುದರಿಂದ ಹಲವಾರು ಪ್ರಶ್ನೆಗಳು ನಮಗೂ ಎದುರಾಗುತ್ತವೆ. ರಾಜಪ್ರಭುತ್ವ, ಪ್ರಜಾಪ್ರಭುತ್ವ, ಚುನಾವಣೆ, ಶಾಸಕರು ಸೇರಿದಂತೆ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆಯೂ ಪ್ರಶ್ನಿಸುತ್ತಾರೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ನಮ್ಮಲ್ಲಿನ ಕಟ್ಟಡಗಳ ಇತಿಹಾಸವನ್ನು ತಿಳಿಸುವುದರಲ್ಲಿ ನಮಗೂ ಖುಷಿ ಇದೆ” ಎನ್ನುತ್ತಾರೆ ಭಾರತ ಸರ್ಕಾರದಿಂದ ಗೈಡ್ ಸರ್ಟಿಫಿಕೇಟ್ ಪಡೆದಿರುವ ‘ಕಲ್ಚರಲ್ ಫೆಸಿಲಿಟೇಟರ್’ ಹೆಚ್. ನರಸಿಂಹ ರಾಜು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸೋಮಣ್ಣ, ಡಿಕೆಶಿ ಉದ್ಧಟತನ ಅಕ್ಷಮ್ಯ

ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಜನಪರವಾದ ಈ ರೀತಿಯ ತೀರ್ಮಾನಗಳನ್ನು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಯೋಚಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಇಂತಹ ಪಾರಂಪರಿಕ ಕಟ್ಟಡವನ್ನು ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂದಡಿ ಇಡಲಿ ಎನ್ನುವುದೇ ನಮ್ಮ ಆಶಯ.

Irshad Venoor
Website |  + posts

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಇರ್ಷಾದ್ ವೇಣೂರು
ಇರ್ಷಾದ್ ವೇಣೂರುhttps://eedina.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸಂಸದ ರಾಘವೇಂದ್ರ, ವಿಜಯೇಂದ್ರ ಯಾವ ಕೋಟದಲ್ಲಿ ಹುದ್ದೆ ಪಡೆದಿದ್ದಾರೆ? ಆಯನೂರು ಮಂಜುನಾಥ ಪ್ರಶ್ನೆ

ಶಿವಮೊಗ್ಗ, ಸಂಸದ ರಾಘವೇಂದ್ರ ಮೊದಲ ಬಾರಿ ಯಾವ ಕೋಟದಲ್ಲಿ ಲೋಕಸಭಾ ಸದಸ್ಯರಾಗಿದ್ದಾರೆ,...

ಶಿವಮೊಗ್ಗ | ಅ. 9ರಿಂದ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಅನಿರ್ದಿಷ್ಟವಧಿ ಧರಣಿ

ಶಿವಮೊಗ್ಗ, ತಾಲೂಕಿನ ನಿಧಿಗೆ ಹೋಬಳಿ ಸೋಗಾನೆ ಗ್ರಾಮದ ವಿಮಾನ ನಿಲ್ದಾಣಕ್ಕೆ ಜಮೀನು...

ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ | ಬೆಂಗಳೂರಿಗೆ 12, ಮಂಗಳೂರಿಗೆ 5, 11 ಜಿಲ್ಲೆಗೆ ಪ್ರಾತಿನಿಧ್ಯವೇ ಇಲ್ಲ!

ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ ವಿಚಾರವಾಗಿ ಪಕ್ಷದ ಕಚೇರಿಗಿಂತಲೂ ನಾಯಕರ ಮನೆ ಸುತ್ತಿರುವ...

ಕೊರಟಗೆರೆ | ರಾಮಾಯಣ ಮಹಾಕಾವ್ಯ ಬೇರೆ ದೇಶದಲ್ಲಿಯೂ ಪ್ರಚಲಿತದಲ್ಲಿದೆ : ಗೋಪಿನಾಥ್

ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ...

Download Eedina App Android / iOS

X