ಸುರತ್ಕಲ್‌ನ ಕುಳಾಯಿ ಕಡೆಯಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದ ಮಹಿಳೆ ರಸ್ತೆಗುಂಡಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಾಗ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಲಾರಿಯೊಂದು ಆಕೆಯ ಮೇಲೆ ಹರಿದಿದೆ. ಇದರಿಂದಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲಾರಿ ಚಾಲಕ ಹಾಗೂ ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್) ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಕುಳಾಯಿ ನಿವಾಸಿ ಮಾಧವಿ(44) ಅವರು ತಮ್ಮ ಸ್ಕೂಟರಿನಲ್ಲಿ ಕುಳಾಯಿ ಕಡೆಯಿಂದ ಕುಂಟಿಕಾನ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದರು. ಬೆಳಿಗ್ಗೆ 8.30ರ ಸುಮಾರಿನಲ್ಲಿ ಕೂಳೂರಿನ ರಾಯಲ್ ಓಕ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯ ಪರಿಣಾಮ ಸ್ಕೂಟರ್ ಸಹಿತ ಅದರಲ್ಲಿ ಬಿದ್ದರು. ಈ ವೇಳೆ ಹಿಂಬದಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯ ಚಾಲಕ ಮೊಹಮ್ಮದ್ ಫಾರೂಕ್ ಎಂಬುವವರ ಅಜಾಗರೂಕತೆ ಚಾಲನೆಯಿಂದ ರಸ್ತೆಯಲ್ಲಿ ಬಿದ್ದಿದ್ದ ಮಾಧವಿಯವರ ಮೇಲೆ ಲಾರಿ ಹರಿದಿದೆ. ಈ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮದ್ದೂರು | ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಬಲಿಯಾಗದಂತೆ ಸಾರ್ವಜನಿಕರಲ್ಲಿ ಸಿಪಿಐಎಂ ಮನವಿ
ಸರಿಯಾಗಿ ಹೆದ್ದಾರಿಯ ನಿರ್ವಹಣೆ ಮಾಡದೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚದಿರುವ ನಿರ್ಲಕ್ಷ್ಯತನವೇ ಈ ಅಪಘಾತಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯವರ ಮೇಲೆ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿರುವ ಲಾರಿ ಚಾಲಕನ ಮೇಲೆ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 224/2025 ಕಲಂ 281, 106(1) ಬಿಎನ್‌ಎಸ್ ಮತ್ತು 198(ಎ) ಐಎಂವಿ ಕಾಯ್ದೆಯನ್ವಯ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.