ಶಿವಮೊಗ್ಗ ಜಿಲ್ಲೆಯ ಪ್ರಮುಖ ರಸ್ತೆಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ರಸ್ತೆಗಳೆಲ್ಲವೂ ಗುಂಡಿಮಯವಾಗಿವೆ. ರಸ್ತೆಯ ಈ ಹದಗೆಟ್ಟ ಸ್ಥಿತಿಯಿಂದ ವಾಹನ ಸವಾರರು, ಮಹಿಳೆಯರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ.
ಶಿರಾಳಕೊಪ್ಪ ಊರು ದಾಟಿದ ನಂತರ ಛತ್ರದಹಳ್ಳಿಯಿಂದ ಕೊಡಕುಣಿ ಗ್ರಾಮದವರೆಗೆ ರಸ್ತೆ ಯಾವುದೆಂದು ಕಾಣದ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ʼರಸ್ತೆ ಎಲ್ಲಿದೆ?ʼ ಎಂದು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಗಳಿಂದ ಈ ರಸ್ತೆಯ ಸಮಸ್ಯೆ ಮುಂದುವರಿದಿದ್ದರೂ ಪರಿಹಾರ ಕಾಣದೆ ಜನತೆ ಬೇಸತ್ತು ಹೋಗಿದ್ದಾರೆ. ಛತ್ರದಹಳ್ಳಿಯಿಂದ ಸಿಗುವ ಸುತ್ತುಕೋಟೆ, ಶಿವಪುರ, ಗೇರುಕೊಪ್ಪ, ಕೊಡಕುಣಿ ಮಾರ್ಗವಾಗಿ ಸೊರಬ ತಲುಪುವ ಗ್ರಾಮೀಣ ಪ್ರದೇಶದಲ್ಲಿ ಹಲವು ದಶಕಗಳಿಂದಲೂ ಸುಗಮ ರಸ್ತೆ ನಿರ್ಮಾಣವಾಗದಿರುವುದರಿಂದ ಸಾರ್ವಜನಿಕರು ಸರ್ಕಾರದ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದರೊಂದಿಗೆ ಶಿಕ್ಷಣ ಸಚಿವರೇ ತಮ್ಮ ಕ್ಷೇತ್ರದ ರಸ್ತೆಯ ಸ್ಥಿತಿಯನ್ನು ಸುಧಾರಿಸಿಕೊಳ್ಳದಿರುವುದಕ್ಕೆ ವಿದ್ಯಾರ್ಥಿಗಳೇ ನಾಚಿಕೆ ಪಡುತ್ತಿದ್ದು, “ನಮ್ಮ ಪ್ರದೇಶದ ಜನರ ಮೂಲಭೂತ ಸಮಸ್ಯೆಗೂ ಪರಿಹಾರ ಕಲ್ಪಿಸಲು ಆಗದವರು ರಾಜ್ಯದ ಶಿಕ್ಷಣ ಸಚಿವರೆಂದು ಹೇಳಿಕೊಳ್ಳುವುದು ವಿಷಾದನೀಯ” ಎಂದು ವಿದ್ಯಾರ್ಥಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಗುಂಡಿಗಳ ಕಾರಣದಿಂದ ಅಪಘಾತ ಸಂಭವಿಸುವ ಭೀತಿಯೊಂದಿಗೆ ಜನ ತಮ್ಮ ಪ್ರಾಣಾಪಾಯದ ನಡುವೆಯೂ ಸಂಚಾರ ನಡೆಸುತ್ತಿದ್ದು, ಅಸಹಾಯಕ ಪರಿಸ್ಥಿತಿಯಿಂದ ಜನತೆ ತಮ್ಮ ತಮ್ಮಲ್ಲೇ ಬೇಸರಗೊಂಡು ಅದಕ್ಕೂ ತಮ್ಮಲ್ಲೇ ಸಮಾಧಾನ ಪಡುತ್ತಿದ್ದಾರೆ. ಅಸಲಿಗೆ ಈ ಜಿಲ್ಲೆಗೆ ಉಸ್ತುವಾರಿ ಸಚಿವರು ಇದ್ದಾರೋ ಇಲ್ಲವೋ ಎನ್ನುವುದು ಹಲವರ ಮಾತು. ಸ್ಥಳೀಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು, ಎಚ್ಚರಿಸಲು ಯಾವುದಾದರೂ ಪ್ರಾಣವೇ ಹೋಗಬೇಕೇನೋ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಯ ಹದಗೆಟ್ಟ ಪರಿಸ್ಥಿತಿಯಿಂದ ಶಾಲಾ ಮಕ್ಕಳು, ಮಹಿಳೆಯರು, ರೈತರು ಹಾಗೂ ವಾಹನ ಸವಾರರು ಪ್ರತಿದಿನ ನರಕ ಅನುಭವಿಸುತ್ತಿದ್ದಾರೆ. “ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲ. ಇದೀಗ ರಸ್ತೆ ದುರಸ್ತಿ ಅಥವಾ ನೂತನ ರಸ್ತೆ ಕಾಮಗಾರಿಗೆ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆಗೆ ಮುಂದಾಗುತ್ತೇವೆ” ಎಂದು ಜನರು ಎಚ್ಚರಿಸಿದ್ದಾರೆ.
ರಸ್ತೆಯ ಹಾಳಾದ ಸ್ಥಿತಿಯಿಂದ ಮಾತ್ರವಲ್ಲ, ಅದರಲ್ಲಿ ಓಡಾಡುವ ಲಾರಿಗಳು, ಬಸ್‌ಗಳು ಸಂಚಾರ ಮಾಡುವಾಗ ಏಳುವ ಧೂಳಿನಿಂದ ಜನರ ಆರೋಗ್ಯಕ್ಕೂ ಗಂಭೀರ ಹಾನಿ ಉಂಟಾಗಿದೆ. ʼಒಮ್ಮೆ ವಾಹನ ಹೋಗಿ ಧೂಳು ಎದ್ದರೆ, ಅಪ್ಪಿ ತಪ್ಪಿ ಉಬ್ಬಸ ಅಥವಾ ಆಸ್ತಮಾ ರೋಗಿಯೇನಾದರೂ ಅದೇ ಮಾರ್ಗವಾಗಿ ಹಾದುಹೋಗುತ್ತಿದ್ದರೆ, ಅಲ್ಲಿಯೇ ಉಸಿರುಗಟ್ಟಿ ಸಾಯುವ ಪರಿಸ್ಥಿತಿ ಎದುರಾಗುವುದು ಖಚಿತʼ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಆರೋಗ್ಯವಂತರು ಸಹ ಈ ರಸ್ತೆಯಲ್ಲಿ ಪ್ರತಿದಿನ ಸಂಚಾರ ಮಾಡುವುದರಿಂದ ಮುಂದೆ ಉಸಿರಾಟ ಸಂಬಂಧಿ ಕಾಯಿಲೆಗಳು ಬಾಧಿಸುವ ಭೀತಿ ವ್ಯಕ್ತವಾಗಿದೆ. ʼಇಲ್ಲಿವರೆಗೆ ಎಷ್ಟು ಮಂದಿಗೆ ಯಾವ ಕಾಯಿಲೆಗಳು ಬಾಧಿಸಿವೆ ಎಂಬುದನ್ನು ದೇವರೇ ಬಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಅಸಹಾಯಕವಾಗಿ ಬದುಕುತ್ತಿದ್ದು, ಇಂದಲ್ಲ ನಾಳೆ ಸರಿಯಾಗುತ್ತದೆ ಎಂಬ ಭ್ರಮೆಯಲ್ಲೇ ದಿನ ಕಳೆಯುತ್ತಿದ್ದೇವೆʼ ಎಂದು ನಾಗರಿಕರು ಗೋಳಾಡುತ್ತಿದ್ದಾರೆ.
ಸ್ಥಳೀಯರು ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ರಸ್ತೆ ದುರಸ್ತಿ ಕೈಗೊಂಡು ಧೂಳಿನ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ಗಂಭೀರ ಆರೋಗ್ಯ ಹಾನಿ, ಅಪಘಾತಗಳು ಹಾಗೂ ಸಾರ್ವಜನಿಕರ ತಾಳ್ಮೆ ಕಳೆದು ಪ್ರತಿಭಟನೆಗಳು ನಡೆಯುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಶಿರಾಳಕೊಪ್ಪದಿಂದ ಛತ್ರದಹಳ್ಳಿ ಮಾರ್ಗವಾಗಿ ಕೊಡಕುಣಿ–ಸೊರಬ ತಲುಪುವ ರಸ್ತೆಯ ಸ್ಥಿತಿ ದೈನಂದಿನ ಸಂಕಟಕ್ಕೆ ಕಾರಣವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಗುಜರಿಗೆ ಹಾಕದೆ ಬೇರೆ ದಾರಿ ಇಲ್ಲ ಎಂಬ ಸ್ಥಿತಿಯಾಗಿದೆ. ಸ್ಥಳೀಯರು ಈ ರಸ್ತೆಯ ಸ್ಥಿತಿ ತಿಳಿಯಬೇಕಾದರೆ ಸ್ವತಃ ಬಂದು ನೋಡಬೇಕು. ಶಿಕ್ಷಣ ಸಚಿವರೇ ಪ್ರತಿನಿಧಿಸುತ್ತಿರುವ ಕ್ಷೇತ್ರದ ಇದು ನಿಜವಾದ ರಸ್ತೆ ಕಥೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕೊಡಕುಣಿ ಸಮೀಪದಲ್ಲಿ ಸುಮಾರು 1 ಕಿ.ಮೀ.ವರೆಗೆ ಜಲ್ಲಿ ಹಾಕಿ ಕಾಮಗಾರಿ ನಡೆಯುತ್ತಿದೆ ಎಂಬ ಬೋರ್ಡ್ ಅಳವಡಿಸಲ್ಪಟ್ಟಿದೆ. ಆದರೆ ಸ್ಥಳೀಯರ ಪ್ರಕಾರ, ಆ ಕೆಲಸ ವರ್ಷ ಕಳೆದರೂ ಸರಿಯಾಗಿ ಮುಗಿದಿಲ್ಲ. ʼಮಳೆಗಾಲ, ತಾಂತ್ರಿಕ ತೊಂದರೆ, ಇಲ್ಲವೇ ಬೇರೆ ಕಾರಣಗಳ ನೆಪದಲ್ಲಿ ಕಾಮಗಾರಿ ನಿಲ್ಲಿಸಿ ಬಿಡುತ್ತಾರೆ. ಈ ರಸ್ತೆ ನಮ್ಮ ಹಣೆಬರಹವೇ ಸರಿ ಇಲ್ಲ ಎಂದು ತೋರುತ್ತಿದೆʼ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂಬಂಧ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಲಾಗಿ, ಯಾರಿಂದಲೂ ಸಹ ಸ್ಪಂದನೆ ಸಿಕ್ಕಿರುವುದಿಲ್ಲ. ಕರೆ ಕೂಡ ಸ್ವೀಕರಿಸುತ್ತಿಲ್ಲ. ಇಇ ಮಮತಾ ಅವರಿಗೆ ಮೆಸೇಜ್ ಹಾಕಿದರೂ ಸಹ ಯಾವುದೇ ಸ್ಪಂದನೆ ದೊರೆತಿಲ್ಲ. ಇದರಿಂದ ಅಧಿಕಾರಿಗಳ ನಿರ್ಲಕ್ಷತನ, ಬೇಜವಾಬ್ದಾರಿ ಎದ್ದು ಕಾಣುತ್ತಿದೆ.
ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಮೂಲ ಸೌಕರ್ಯವಾದ ರಸ್ತೆ ವ್ಯವಸ್ಥೆ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದೆ. ಶಿರಾಳಕೊಪ್ಪದಿಂದ ಕೊಡಕುಣಿ ಮಾರ್ಗವಾಗಿ ಸೊರಬ ತಲುಪುವ ರಸ್ತೆ ಹಾಳಾದ ಸ್ಥಿತಿಯಿಂದ ವಾಹನ ಸವಾರರು, ವಿದ್ಯಾರ್ಥಿಗಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಅನಾರೋಗ್ಯ ಪೀಡಿತರಿಗೆ ಆಂಬುಲೆನ್ಸ್ ಮೂಲಕ ಪ್ರಯಾಣಿಸುವುದೂ ಕಷ್ಟಕರವಾಗಿದೆ.
“ನಮ್ಮ ಊರಿಗೆ ಒಂದೇ ಒಂದು ರಸ್ತೆ ಕಲ್ಪಿಸಿಕೊಡಲು ಆಗದ ಸಚಿವರು, ರಾಜ್ಯದ ಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತೇವೆ ಎಂದು ಹೇಳುವುದು ನಿಜಕ್ಕೂ ಹಾಸ್ಯಾಸ್ಪದ. ಮೂಲ ಸೌಕರ್ಯ ಬಿಟ್ಟು ಅಭಿವೃದ್ಧಿ ಎಂದರೆ ಏನು?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಸಚಿವರು ತಾವು ಮಾಡಿದ ಅಭಿವೃದ್ಧಿ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದರೂ, ತಮ್ಮ ಕ್ಷೇತ್ರದ ಜನರ ನಿತ್ಯದ ಹಾದಿಯೇ ನರಕವಾಗಿರುವುದನ್ನು ಗಮನಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. “ಒಮ್ಮೆಯಾದರೂ ಈ ರಸ್ತೆಯಲ್ಲಿ ನಿಮ್ಮ ವಾಹನದಲ್ಲಿ ಹೋಗಿ ನೋಡಿ. ನಮ್ಮ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ. ಈಗಿನ ಸ್ಥಿತಿಯಲ್ಲಿ ವಾಹನದಲ್ಲಿ ಹೋಗುವ ಬದಲು ನಡೆದು ಹೋದರೆ ಬೇಗ ಸೊರಬ ತಲುಪಬಹುದು ಎನ್ನುವಂತಾಗಿದೆ” ಎಂದು ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ.
“ಈ ರಸ್ತೆ ಅವ್ಯವಸ್ಥೆಗೆ ಕಾರಣವಾಗಿರುವ ಅಧಿಕಾರಿಗಳನ್ನು ಪ್ರಶ್ನಿಸಿ, ಸರಿಪಡಿಸಿ, ನಮಗೆ ಮೂಲ ಸೌಕರ್ಯ ಒದಗಿಸುವ ಮೂಲಕವೇ ನಿಜವಾದ ಅಭಿವೃದ್ಧಿ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಗ್ರಾಮಗಳ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ನಿಮಗೆ ತಿಳಿಯದಿರುವ ವಿಷವೇನೂ ಅಲ್ಲ. ಈಗಲಾದರೂ ಶೀಘ್ರ ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ” ಎಂದು ಸಚಿವರಲ್ಲಿ ವಿನಂತಿಸಿದ್ದಾರೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.